ಅಮೆರಿಕ ವಿದ್ಯಾರ್ಥಿ ವೀಸಾ ನೀತಿ ಬದಲು: ಇನ್ನು ಮುಂದೆ 4 ವರ್ಷವಷ್ಟೇ ಅವಕಾಶ, 3 ಲಕ್ಷ ಭಾರತೀಯರಿಗೆ ಶಾಕ್
ವಾಷಿಂಗ್ಟನ್: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಕನಸು ಕಾಣುತ್ತಿರುವ ಹಾಗೂ ಈಗಾಗಲೇ ಅಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ಬಿಗ್ ಶಾಕ್ ನೀಡಿದೆ. ಹೌದು, ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಎಫ್-1 ಮತ್ತು ಜೆ-1 ವೀಸಾ ನಿಯಮಗಳಲ್ಲಿ ಅಮೆರಿಕ ಭಾರಿ ಬದಲಾವಣೆಗಳನ್ನ ತಂದಿದೆ.
ಈ ಹೊಸ ನಿಯಮದ ಪ್ರಕಾರ, ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ವಿದ್ಯಾಭ್ಯಾಸಕ್ಕಾಗಿ ಇನ್ನು ಮುಂದೆ ಕೇವಲ ಗರಿಷ್ಠ 4 ವರ್ಷಗಳು ಮಾತ್ರ ಉಳಿದುಕೊಳ್ಳಲು ಅವಕಾಶವಿರುತ್ತದೆ. ಅಮೆರಿಕ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಅಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 3.3 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳಿಗೆ ಭಾರಿ ಸಂಕಷ್ಟ ಎದುರಾಗಿದೆ.

ಎಫ್-1 ಮತ್ತು ಜೆ-1 ವೀಸಾ ನಿಯಮಗಳಲ್ಲಿ ಬದಲಾವಣೆ
ಅಮೆರಿಕದಲ್ಲಿ ವಿದೇಶಿ ಪ್ರಜೆಗಳು ನಿಗದಿತ ಅವಧಿಗಿಂತ ಹೆಚ್ಚಿನ ಕಾಲ ಅಕ್ರಮವಾಗಿ ಉಳಿಯುವುದನ್ನ ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ವೀಸಾ ನಿಯಮಗಳ ಪ್ರಕಾರ, ವಿದ್ಯಾರ್ಥಿಯೊಬ್ಬ ಒಮ್ಮೆ ಶಿಕ್ಷಣಕ್ಕಾಗಿ ವೀಸಾ ಪಡೆದುಕೊಂಡರೆ, ಆತನ ಸಂಪೂರ್ಣ ಶಿಕ್ಷಣ ಮುಗಿಯುವವರೆಗೂ ಅಮೆರಿಕದಲ್ಲಿ ಉಳಿದುಕೊಳ್ಳಲು ಮುಕ್ತ ಅವಕಾಶವಿತ್ತು. ಇದರಿಂದಾಗಿ ಬಹುತೇಕ ವಿದ್ಯಾರ್ಥಿಗಳು 6 ರಿಂದ 7 ವರ್ಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಅಲ್ಲಿ ನೆಲೆಸುತ್ತಿದ್ದರು. ಆದರೆ, ಈ ಹೊಸ ವೀಸಾ ನೀತಿಯು ವಿದೇಶಿ ವಿದ್ಯಾರ್ಥಿಗಳಿಗೆ ಕೇವಲ 4 ವರ್ಷಗಳ ಕಾಲಮಿತಿಯನ್ನ ನಿಗದಿಪಡಿಸಿದೆ.
4 ವರ್ಷಗಳ ಬಳಿಕ ಹೊಸ ವೀಸಾಗೆ ಅರ್ಜಿ ಸಲ್ಲಿಕೆ ಕಡ್ಡಾಯ
ವೈದ್ಯಕೀಯ, ಸಂಶೋಧನೆ ಅಥವಾ ಪಿಎಚ್‌ಡಿಯಂತಹ ದೀರ್ಘಾವಧಿಯ ಕೋರ್ಸ್‌ಗಳನ್ನ ಓದುವ ವಿದ್ಯಾರ್ಥಿಗಳಿಗೆ ಐದಾರು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಇಂತಹ ವಿದ್ಯಾರ್ಥಿಗಳು ನಾಲ್ಕು ವರ್ಷಗಳ ನಂತರವೂ ತಮ್ಮ ವ್ಯಾಸಂಗವನ್ನು ಮುಂದುವರಿಸಬೇಕಾದರೆ, ಕಡ್ಡಾಯವಾಗಿ ಹೊಸ ವೀಸಾಗೆ ಅರ್ಜಿ ಸಲ್ಲಿಸಿ ಅಮೆರಿಕ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.
ಹೊಸ ಅರ್ಜಿ ಸಲ್ಲಿಕೆಯಾದಾಗ, ಆ ವಿದ್ಯಾರ್ಥಿಯು ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ ನಡೆದುಕೊಂಡ ರೀತಿ, ಆತನ ಹಿನ್ನೆಲೆ ಹಾಗೂ ಶೈಕ್ಷಣಿಕ ಪ್ರಗತಿಯನ್ನ ಪರಿಶೀಲಿಸಿದ ಬಳಿಕವೇ ವೀಸಾ ಮಂಜೂರು ಮಾಡುವ ಅಧಿಕಾರವನ್ನ ವೀಸಾ ಅಧಿಕಾರಿಗಳು ಹೊಂದಿರುತ್ತಾರೆ. ಒಂದು ವೇಳೆ ವೀಸಾ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದರೆ, ವಿದ್ಯಾರ್ಥಿಯು ತಮ್ಮ ವ್ಯಾಸಂಗವನ್ನ ಅರ್ಧದಲ್ಲೇ ನಿಲ್ಲಿಸಿ ತವರಿಗೆ ಮರಳಬೇಕಾಗುತ್ತದೆ.
ಸೆಪ್ಟೆಂಬರ್ 15ರೊಳಗೆ ಮರಳಲು ವಿದ್ಯಾರ್ಥಿಗಳಿಗೆ ಗಡುವು
ಹೊಸ ನಿಯಮಗಳು ಇದೇ ಸೆಪ್ಟೆಂಬರ್ ತಿಂಗಳಿನಿಂದಲೇ ಜಾರಿಗೆ ಬರಲಿವೆ. ಪ್ರಸ್ತುತ ಅಮೆರಿಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ಇರುವುದರಿಂದ, ಸಾವಿರಾರು ಭಾರತೀಯ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಹೀಗೆ ರಜೆಯ ಮೇಲೆ ತವರಿಗೆ ಬಂದಿರುವ ವಿದ್ಯಾರ್ಥಿಗಳು, ಹಳೆಯ ವೀಸಾ ನಿಯಮಗಳ ಅಡಿಯಲ್ಲೇ ತಮ್ಮ ವ್ಯಾಸಂಗ ಮುಂದುವರಿಸಬೇಕಾದರೆ ಕಡ್ಡಾಯವಾಗಿ ಸೆಪ್ಟೆಂಬರ್ 15ರೊಳಗೆ ಅಮೆರಿಕಕ್ಕೆ ಹಿಂತಿರುಗುವಂತೆ ಸೂಚನೆ ನೀಡಲಾಗಿದೆ. ಈ ಗಡುವನ್ನು ಮೀರಿದರೆ, ಅವರು ಕೂಡ ಹೊಸ ವೀಸಾ ನಿಯಮಗಳಡಿ ಮರು ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
3 ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ
ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವುದು ಲಕ್ಷಾಂತರ ಭಾರತೀಯರ ಕನಸಾಗಿದೆ. ಪ್ರತಿ ವರ್ಷ ಅಂದಾಜು 3.3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರಸಿ ಅಮೆರಿಕದತ್ತ ಮುಖ ಮಾಡುತ್ತಾರೆ. ಇದೀಗ ಜೆ-1 ಮತ್ತು ಎಫ್-1 ವೀಸಾ ನಿಯಮಗಳಲ್ಲಿ ಆಗುತ್ತಿರುವ ಈ ಬದಲಾವಣೆಗಳು ಮುಂದಿನ ದಿನಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ದೀರ್ಘಕಾಲದ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಲ್ಲಿ ಈ ಹೊಸ ನಿಯಮಗಳು ತೀವ್ರ ಆತಂಕ ಸೃಷ್ಟಿಸಿದ್ದು, ನಾಲ್ಕು ವರ್ಷಗಳ ಬಳಿಕ ವೀಸಾ ನವೀಕರಣಗೊಳ್ಳದಿದ್ದರೆ ಶೈಕ್ಷಣಿಕ ಭವಿಷ್ಯವೇನು ಎಂಬ ಭೀತಿ ಶುರುವಾಗಿದೆ.


Click it and Unblock the Notifications
