ಅಮೆರಿಕಾ - ವೆನೆಜುವೆಲಾ ಬಿಕ್ಕಟ್ಟು: 2026ರಲ್ಲಿ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಅಂಶಗಳು: ಆರ್ಥಿಕ ತಜ್ಞ ನವೀನ್ ಕುಮಾರ್
ಅಮೆರಿಕಾ - ವೆನೆಜುವೆಲಾ ಬಿಕ್ಕಟ್ಟು ಶುರುವಾಗಿದೆ. 2026ರಲ್ಲಿ ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಹಾಗೂ ಒಟ್ಟಾರೆ ಸಂಘರ್ಷದ ಬಗ್ಗೆ ಆರ್ಥಿಕ ತಜ್ಞ ನವೀನ್ ಕುಮಾರ್ (@Sheru_Katte) ಅವರ ಬರಹ ಇಲ್ಲಿದೆ.
2026 ರ ಹೊಸ ವರ್ಷ ಈಗ ತಾನೇ ಶುರು ಆಗಿದೆ. ಅಮೆರಿಕಾ - ವೆನುಜುವೆಲಾ ದೇಶದ ಮೇಲೆ ದಾಳಿ ಮಾಡಿರುವ ಸುದ್ದಿ ಬರ್ತಾ ಇದೆ. ಅಲ್ಲಿನ ಅಧ್ಯಕ್ಷರನ್ನು ದೇಶವನ್ನು ಬಿಟ್ಟು ಓಡಿಸಿದ್ದಾರೆ. ವೆನುಜುವೆಲಾ ಲ್ಯಾಟಿನ್ ಅಮೆರಿಕದಲ್ಲಿ ಇರುವ ದೇಶ. ಜಗತ್ತಿನ 17% Oil Reserve ಹೊಂದಿರುವ ದೇಶ. ವೆನೆಜುವೆಲಾವು ಸುಮಾರು 303 ಬಿಲಿಯನ್ ಬ್ಯಾರೆಲ್‌ಗಳಷ್ಟು ಪ್ರಮಾಣದ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪವನ್ನು ಹೊಂದಿದೆ.

ಇಷ್ಟಿದ್ದರೂ, ವೆನೆಜುವೆಲಾ ಪ್ರಸ್ತುತ ಜಾಗತಿಕ ತೈಲ ಉತ್ಪಾದನೆಯಲ್ಲಿ ಕೇವಲ ಶೇ. 1 ರಷ್ಟು ಮಾತ್ರ ಕೊಡುಗೆ ನೀಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ತೈಲವು 'Heavy Crude'' (ಅತಿ ಭಾರವಾದ ಕಚ್ಚಾ ತೈಲ) ಆಗಿರುವುದು. ಇದನ್ನು ಹೊರತೆಗೆಯುವುದು ಕಷ್ಟ ಮತ್ತು ದುಬಾರಿ. ಜೊತೆಗೆ ಈ ದೇಶದಲ್ಲಿ ದಶಕಗಳ ಕಾಲದಿಂದ ಇರುವ ಭ್ರಷ್ಟಾಚಾರ, ದುರ್ಬಲ ಆಡಳಿತ ಮತ್ತು ಹೂಡಿಕೆಯ ಕೊರತೆಯೂ ಕಾರಣವಾಗಿದೆ.
ಹ್ಯೂಗೋ ಚಾವೆಜ್ ನಂತರ 2013 ರಿಂದ ಅಧಿಕಾರದಲ್ಲಿರುವ ಅಧ್ಯಕ್ಷ ನಿಕೋಲಸ್ ಮಡುರೊ ಮೇಲೆ ಸರ್ವಾಧಿಕಾರ, ಚುನಾವಣೆ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ಮಾದಕವಸ್ತು (Drug Trafficking) ಮಾರಾಟವನ್ನು ಸಹಕರಿಸುತ್ತಿರುವ ಮತ್ತು ದೇಶದ ಆಸ್ತಿಯನ್ನು ಲೂಟಿ ಮಾಡುತ್ತಿರುವ ಆರೋಪಗಳನ್ನು ಅಮೇರಿಕಾ ಇವರ ಮೇಲೆ ಹೊರಿಸಿದೆ.
ಅಮೆರಿಕಾದ ನಿರ್ಬಂಧಗಳು - ನಿಕೋಲಸ್ ಮದುರೊ ಮೇಲೆ ರಾಜಕೀಯ ಮತ್ತು ಆರ್ಥಿಕ ಒತ್ತಡ ಹೇರಲು ಕಳೆದ ಒಂದು ದಶಕದಲ್ಲಿ ಬೈಡನ್ ಮತ್ತು ಟ್ರಂಪ್ ಸರ್ಕಾರಗಳು ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ದೇಶದ ಪ್ರಮುಖ ಆದಾಯದ ಮೂಲವಾದ ತೈಲಕ್ಕೆ ಇದು ಭಾರಿ ಹೊಡೆತ ನೀಡಿದೆ.
ಚುನಾವಣಾ ವಿವಾದ - ಹೆಚ್ಚಿನ ಪಾಶ್ಚಿಮಾತ್ಯ ರಾಷ್ಟ್ರಗಳು 2024 ರ ವೆನೆಜುವೆಲಾ ಚುನಾವಣೆಯನ್ನು ಮಾನ್ಯ ಮಾಡಲಿಲ್ಲ. ಅಮೇರಿಕಾವು ಮಡುರೊ ಅವರ ಪ್ರತಿಸ್ಪರ್ಧಿ ಎಡ್ಮಂಡೋ ಗೊನ್ಜಾಲೆಜ್ ಅವರನ್ನು ಬೆಂಬಲಿಸಿತು. ಇದು ರಾಜತಾಂತ್ರಿಕ ಬಿರುಕನ್ನು ಮತ್ತಷ್ಟು ಹೆಚ್ಚಿಸಿತು.
ಇವೆಲ್ಲದರ ನಡುವೆ ಈಗ ಏಕಾಏಕಿ ಅಮೆರಿಕಾ ದಾಳಿ ಮಾಡಿದೆ.ಒಂದು ವೇಳೆ ಅಮೆರಿಕಾವು ವೆನೆಜುವೆಲಾದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರೆ, ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದಂತಾಗುತ್ತದೆ. ಇದು ಜಾಗತಿಕ ರಾಜಕಾರಣದಲ್ಲಿ ಒಂದು ಪ್ರಮುಖ ಬದಲಾವಣೆ ಆಗಲಿದೆ.
ಇಂತಹ ಕ್ರಮವು ಪ್ರಜಾಪ್ರಭುತ್ವದ ಮರುಸ್ಥಾಪನೆ ಅಥವಾ ಮಾನವ ಹಕ್ಕುಗಳ ರಕ್ಷಣೆಗಾಗಿ ಇರುವುದಿಲ್ಲ. ಬದಲಾಗಿ ಇಂಧನ, ವ್ಯಾಪಾರ ಮಾರ್ಗಗಳು ಮತ್ತು ಪ್ರಾದೇಶಿಕ ಸಮೀಕರಣಗಳ ಮೇಲೆ ಅಮೇರಿಕಾದ ಪ್ರಾಬಲ್ಯವನ್ನು ಮರುಸ್ಥಾಪಿಸುವ ಒಂದು ದೊಡ್ಡ ಉದ್ದೇಶವನ್ನು ಹೊಂದಿದೆ.
ತೈಲ ಮಾರುಕಟ್ಟೆಯ ನಿಯಂತ್ರಣ- ವೆನೆಜುವೆಲಾದ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಮುಕ್ತವಾಗಿ ಹರಿಸುವ ಮೂಲಕ ತೈಲ ಬೆಲೆಯನ್ನು ನಿಯಂತ್ರಿಸುವುದು.
ಇರಾನ್ ಮೇಲಿನ ಅವಲಂಬನೆ ತಗ್ಗಿಸುವುದು- ಪಶ್ಚಿಮ ಏಷ್ಯಾದಲ್ಲಿ (Middle East) ಸಂಘರ್ಷ ಉಂಟಾದರೂ, ಅಮೆರಿಕಾಕ್ಕೆ ವೆನೆಜುವೆಲಾ ಒಂದು ಪರ್ಯಾಯ ತೈಲ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
ಪೆಟ್ರೋಡಾಲರ್ ರಕ್ಷಣೆ- ಜಾಗತಿಕ ತೈಲ ವ್ಯಾಪಾರವು ಅಮೇರಿಕನ್ ಡಾಲರ್ ಮೂಲಕವೇ ನಡೆಯುವಂತೆ ನೋಡಿಕೊಳ್ಳುವುದು ಅಮೇರಿಕಾದ ಆರ್ಥಿಕ ಶಕ್ತಿಗೆ ಅನಿವಾರ್ಯವಾಗಿದೆ.
ಇನ್ನು ಕಳೆದ ವರ್ಷ ಇಸ್ರೇಲ್ ಇರಾನ್ ನಡುವೆ ನಡೆದ ಸಂಘರ್ಷ ನೆನಪಿರಬಹುದು. ಅಮೆರಿಕಾದ ಕಾರ್ಯತಂತ್ರದ ಆದ್ಯತೆಗಳಲ್ಲಿ ಇರಾನ್ ಮುಂಚೂಣಿಗೆ ಬರಬಹುದು. ವೆನೆಜುವೆಲಾದ ತೈಲದ ಮೇಲೆ ನಿಯಂತ್ರಣ ಸಾಧಿಸುವುದರಿಂದ ಪರ್ಷಿಯನ್ ಕೊಲ್ಲಿಯ ಇಂಧನ ಅಡೆತಡೆಗಳಿಗೆ ಅಮೇರಿಕಾ ಹೆದರುವ ಅಗತ್ಯವಿರುವುದಿಲ್ಲ. ಇರಾನ್‌ನೊಂದಿಗೆ ಸಂಘರ್ಷ ಸಂಭವಿಸಿದರೂ ಸಹ, ತೈಲ ಪೂರೈಕೆಯ ಕೊರತೆಯನ್ನು ನೀಗಿಸಲು ವೆನೆಜುವೆಲಾ ಅಮೆರಿಕಾಗೆ ಒಂದು ಭದ್ರಕೋಟೆಯಾಗಿ ಕೆಲಸ ಮಾಡುತ್ತದೆ.
ಪರ್ಷಿಯನ್ ಕೊಲ್ಲಿಯಲ್ಲಿ ಯುದ್ಧದ ಸಂದರ್ಭದಲ್ಲಿ ಇಂಧನ ಮೂಲಸೌಕರ್ಯಗಳು ನಾಶವಾದರೂ ಅಥವಾ ಸ್ಥಗಿತಗೊಂಡರೂ, ಅದರ ಆರ್ಥಿಕ ಪರಿಣಾಮವನ್ನು ತಡೆದುಕೊಳ್ಳುವ ಶಕ್ತಿ ಅಮೇರಿಕಾಗೆ ಲಭಿಸುತ್ತದೆ. ಇದು ಇರಾನ್ ಮೇಲಿನ ಮಿಲಿಟರಿ ಒತ್ತಡವನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ನಿರ್ವಹಿಸಲು ಸುಲಭಗೊಳಿಸುತ್ತದೆ. ಅಮೆರಿಕಾದ ಆರ್ಥಿಕ ಶಕ್ತಿಯ ಅಡಿಪಾಯವಾಗಿರುವ 'ಪೆಟ್ರೋಡಾಲರ್' (Petrodollar) ವ್ಯವಸ್ಥೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
ಹೀಗಾಗಿ, ವೆನೆಜುವೆಲಾ ಕೇವಲ ಒಂದು ಪ್ರಾದೇಶಿಕ ಸಮಸ್ಯೆಯಾಗಿ ಉಳಿಯುವುದಿಲ್ಲ. ಆರ್ಥಿಕ ಒತ್ತಡ, ರಾಜಕೀಯ ತಂತ್ರಗಾರಿಕೆ ಮತ್ತು ಅಗತ್ಯವಿದ್ದರೆ ಮಿಲಿಟರಿ ಬಲವನ್ನು ಬಳಸಿ ಸಾರ್ವಭೌಮ ರಾಷ್ಟ್ರಗಳನ್ನು ಪುನರ್ರಚಿಸಬಹುದು ಮತ್ತು ಜಾಗತಿಕ ಶಕ್ತಿ ಸಮತೋಲನವನ್ನು ಬದಲಿಸಬಹುದು ಎಂಬುದಕ್ಕೆ ಇದೊಂದು ಕಾರ್ಯತಂತ್ರದ ನಿದರ್ಶನವಾಗಲಿದೆ.
ಆದರೆ, ಒಂದು ವೇಳೆ ಅಮೆರಿಕಾವು ವೆನೆಜುವೆಲಾದಲ್ಲಿ ಸಿಲುಕಿಕೊಂಡು ನಿರಂತರ ಪ್ರತಿರೋಧವನ್ನು ಎದುರಿಸಬೇಕಾಗಿ ಬಂದರೆ, ಫಲಿತಾಂಶವು ಸಂಪೂರ್ಣವಾಗಿ ಬದಲಾಗುತ್ತದೆ. ದೀರ್ಘಕಾಲದ ಬಿಕ್ಕಟ್ಟು ಅಮೆರಿಕಾದ ರಾಜಕೀಯ ಬಲವನ್ನು ಕುಂದಿಸುತ್ತದೆ. ಮಿಲಿಟರಿ ಮತ್ತು ಆರ್ಥಿಕ ಸಂಪನ್ಮೂಲಗಳು ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಇತರ ಭಾಗಗಳಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸುವ ಅಮೆರಿಕಾದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
ಅಮೇರಿಕಾ-ವೆನೆಜುವೆಲಾ ಬಿಕ್ಕಟ್ಟು 2026 - ಪ್ರಮುಖ ಅಂಶಗಳು.
— NaveenKuma₹ 📈💰 (@Sheru_Katte) January 4, 2026
2026 ರ ಹೊಸ ವರ್ಷ ಈಗ ತಾನೇ ಶುರು ಆಗಿದೆ. ಅಮೇರಿಕಾ ವೆನುಜುವೆಲಾ ದೇಶದ ಮೇಲೆ ದಾಳಿ ಮಾಡಿರುವ ಸುದ್ದಿ ಬರ್ತಾ ಇದೆ.
ಅಲ್ಲಿನ ಅಧ್ಯಕ್ಷರನ್ನು ದೇಶವನ್ನು ಬಿಟ್ಟು ಓಡಿಸಿದ್ದಾರೆ.
ವೆನುಜುವೆಲಾ ಲ್ಯಾಟಿನ್ ಅಮೇರಿಕದಲ್ಲಿ ಇರುವ ದೇಶ.
ಜಗತ್ತಿನ 17% Oil Reserve ಹೊಂದಿರುವ ದೇಶ.… pic.twitter.com/f9XYBYJWgz
ವೆನೆಜುವೆಲಾದಲ್ಲಿ ಈಗ ನಡೆಯುವ ಘಟನೆಗಳು ಕೇವಲ ಲ್ಯಾಟಿನ್ ಅಮೆರಿಕಕ್ಕೆ ಸೀಮಿತವಾಗಿರುವುದಿಲ್ಲ. ಅದು ಇಂಧನ ನಿಯಂತ್ರಣ, ಅಮೆರಿಕಾದ ಶಕ್ತಿಯ ಮಿತಿಗಳು ಮತ್ತು ಜಗತ್ತಿನ ಒಟ್ಟಾರೆ ಭೌಗೋಳಿಕ ರಾಜಕೀಯ ಸಂಘರ್ಷಗಳ ದಿಕ್ಕನ್ನು ನಿರ್ಧರಿಸಲಿದೆ.












Click it and Unblock the Notifications