ಕೊರೊನಾ ಚಿಕಿತ್ಸೆ; ಮೈಸೂರು ಮೂಲದ ವೈದ್ಯೆ ಡಾ. ಉಮಾರಿಗೆ ಅಮೆರಿಕದಲ್ಲಿ ಕೃತಜ್ಞತೆ!
ಬೆಂಗಳೂರು, ಏ. 21: ಕೊರೊನಾ ವೈರಸ್ ಹಾವಳಿಗೆ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಅಮೆರಿಕಾದಲ್ಲಿ ಕೊರೊನಾ ವೈರಸ್ ಹಿಡಿತಕ್ಕೆ ಸಿಗುತ್ತಿಲ್ಲ. ಅಲ್ಲಿ ಈವರೆಗೆ 9,92,759 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ, ಅವರಲ್ಲಿ 42,514 ಜನರು ಪ್ರಾಣ ಕಳೆದುಕೊಂಡಿದ್ದು, 72,389 ಸೋಕಿತರು ಗುಣಮುಖರಾಗಿದ್ದಾರೆ. ಜನರ ಜೀವ ಉಳಿಸಲು ವೈದ್ಯರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅವರಲ್ಲಿ ಭಾರತೀಯ ಮೂಲದ ಅನೇಕ ವೈದ್ಯರಿದ್ದಾರೆ.
ಇತ್ತಿಚಿಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯಂತೆ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳಿಸಿ ಸಹಾಯ ಹಸ್ತಚಾಚಿದೆ. ಭಾರತದ ಸಹಾಯಕ್ಕೆ ಅಮೆರಿಕ ಕೃತಜ್ಞತೆ ಹೇಳಿತ್ತು. ಇದೀಗ ಅಮೆರಿಕಾದ ದಕ್ಷಿಣ ಪ್ರಾಂತ್ಯದಲ್ಲಿರುವ ಮೈಸೂರು ಮೂಲದ ವೈದ್ಯೆಯೊಬ್ಬರ ಸೇವೆಗೆ ಸಂಬಂಧಿಸಿದಂತೆ ಅಮೆರಿಕ ವಿಶಿಷ್ಠವಾಗಿ ಕೃತಜ್ಞತೆ ಸಲ್ಲಿಸಿದೆ. ಅಮೆರಿಕದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಡಾ. ಉಮಾ ಮಧುಸೂದನ್ ಅವರ ಅಸಾಧಾರಣ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ. ಇದಕ್ಕಾಗಿ ಅಲ್ಲಿಯ ಸ್ಥಳೀಯರು ಅವರ ಮನೆಯ ಮುಂದೆ ವಿಶಿಷ್ಟವಾದ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಸಿದ್ದಾರೆ.

ಮೈಸೂರು ಮೂಲದ ವೈದ್ಯೆ ಡಾ. ಉಮಾರಾಣಿ ಮಧುಸೂದನ್ ಅವರು ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 1997ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. ಅಮೆರಿಕಾದಲ್ಲಿಯೆ ವಾಸವಾಗಿರುವ ಡಾ. ಉಮಾ ಮಧುಸೂದನ್ ಅವರು ಅಮೆರಿಕದ ಸೌತ್ ವಿಂಡ್ಸರ್‌ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಅವರ ಸೇವೆಯನ್ನು ಮೆಚ್ಚಿರುವ ಅಲ್ಲಿನ ಸ್ಥಳಿಯರು ಹಾಗೂ ಸರ್ಕಾರ ವಿಶೇಷವಾಗಿ ಪರಿಗಣಿಸಿ 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಸಿದ್ದಾರೆ. ಡಾ. ಉಮಾ ಅವರ ಮನೆಯ ಎದುರು ಹತ್ತಾರು ಕಾರುಗಳಲ್ಲಿ ಪರೇಡ್ ನಡೆಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಡಾ. ಉಮಾ ಮಧುಸೂಧನ್ ಅವರನ್ನು, "Dr Uma Madhusudhana has been recognized as one of the South Windsor's Unsung heroes' ಎಂಬ ಸಂದೇಶದೊಂದಿಗೆ ಗೌರವಿಸಲಾಗಿದೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಅಭಿನಂದನೆ: ಮೈಸೂರು ಮೂಲದ ಭಾರತೀಯ ವೈದ್ಯೆ ಡಾಕ್ಟರ್ ಉಮಾ ಮಧುಸೂದನ್ ಅವರು ಅಮೇರಿಕದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ COVID-19 ರೋಗಿಗಳಿಗೆ ತಮ್ಮ ಪ್ರಾಣದ ಹಂಗನ್ನು ಲೆಕ್ಕಿಸದೆ ಚಿಕಿತ್ಸೆ ನೀಡುತ್ತಿದ್ದಾರೆ, ಇದಕ್ಕಾಗಿ ಅಲ್ಲಿಯ ಸ್ಥಳೀಯರು ಅವರ ಮನೆಯ ಮುಂದೆ ವಿಶಿಷ್ಟವಾದ 'ಡ್ರೈವ್ ಆಫ್ ಹಾನರ್' ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. COVID-19 ವಿರುದ್ಧದ ಹೋರಾಟದಲ್ಲಿ ಅವರಂತಹ ಎಲ್ಲಾ ಮುಂಚೂಣಿ ಯೋಧರು ಮಾಡುತ್ತಿರುವ ನಿಸ್ವಾರ್ಥ ಸೇವೆಗಳನ್ನು ನಾವು ಗೌರವಿಸಬೇಕು ಮತ್ತು ಗುರುತಿಸಬೇಕು ಎಂದು ಉಪರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ.












Click it and Unblock the Notifications