ಕೊನೆಗೂ ಬೈಡನ್, ಕಮಲಾರನ್ನು ಅಭಿನಂದಿಸಿದ ಚೀನಾ
ಬೀಜಿಂಗ್, ನವೆಂಬರ್ 13: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆ ಸಲ್ಲಿಸಲು ನಿರಾಕರಿಸಿದ್ದ ಚೀನಾ, ಕೊನೆಗೂ ಅಭಿನಂದನೆ ಸಂದೇಶ ರವಾನಿಸಿದೆ. ಅಮೆರಿಕದ ಜನರ ಆಯ್ಕೆಯನ್ನು ಬೀಜಿಂಗ್ ಗೌರವಿಸುವುದಾಗಿ ಚೀನಾ ಹೇಳಿದೆ.
'ಅಮೆರಿಕ ಚುನಾವಣೆಗೆ ಸಂಬಂಧಿಸಿದಂತೆ ಅಮೆರಿಕದ ಒಳಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಎರಡೂ ಕಡೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ನಾವು ಗಮನಿಸುತ್ತಿದ್ದೇವೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು ಬೀಜಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಅಮೆರಿಕನ್ ಜನರ ಆಯ್ಕೆಯನ್ನು ನಾವು ಗೌರವಿಸುತ್ತೇವೆ. ಹಾಗೆಯೇ ನಾವು ನಮ್ಮ ಅಭಿನಂದನೆಗಳನ್ನು ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಸಲ್ಲಿಸುತ್ತೇವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಅಮೆರಿಕದ ಕಾನೂನು ಮತ್ತು ಪ್ರಕ್ರಿಯೆಗಳಿಂದ ನಿರ್ಧರಿಸಲಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ' ಎಂದು ಹೇಳಿದರು.

ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಶ್ವೇತಭವನಕ್ಕೆ ಆಯ್ಕೆಯಾದ ಸುಮಾರು ಒಂದು ವಾರದ ಬಳಿಕ ಚೀನಾ ಅಭಿನಂದನೆ ತಿಳಿಸಿದೆ.












Click it and Unblock the Notifications