ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಡೆಡ್‌ಲೈನ್ ಮುಗಿಯುವ ಮುನ್ನ ತೈಲ ಕೇಂದ್ರಗಳು ಧ್ವಂಸ
America Attacks Iran: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಬೇರೊಂದು ಸ್ವರೂಪ ಪಡೆದುಕೊಂಡಿದೆ. ಇರಾನ್ ಯಾವುದೇ ನಿರ್ಧಾರಕ್ಕೆ ಬರುವ ಮುನ್ನವೇ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಮುಗಿಬಿದ್ದಿವೆ. ಇರಾನ್‌ನ ಆರ್ಥಿಕ ಬೆನ್ನೆಲುಬಾಗಿರುವ ಖಾರ್ಗ್ ದ್ವೀಪದ ತೈಲ ರಫ್ತು ಕೇಂದ್ರದ ಮೇಲೆ ಸರಣಿ ದಾಳಿ ನಡೆಸಲಾಗಿದ್ದು, ತೈಲ ಪೂರೈಕೆಗೆ ಭಾರಿ ಹೊಡೆತ ಬಿದ್ದಿದೆ.
ಅಮೆರಿಕದ ಮಿಲಿಟರಿ ಪಡೆಗಳು ಇರಾನ್‌ನ ಸುಮಾರು 50ಕ್ಕೂ ಹೆಚ್ಚಿ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿವೆ. ಈ ಕಾರ್ಯಾಚರಣೆಯಲ್ಲಿ ಇರಾನ್‌ನ ಭೂಗತ ಬಂಕರ್‌ಗಳು, ರೇಡರ್ ಸಂವಹನ ಕೇಂದ್ರಗಳು ಮತ್ತು ಬೃಹತ್ ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ಧೂಳೀಪಟವಾಗಿವೆ. ಟೆಹ್ರಾನ್‌ನಲ್ಲಿರುವ ಸರ್ಕಾರಿ ಕಚೇರಿಗಳ ಮೇಲೆ ಅಮೆರಿಕ ಬೆಂಕಿ ಮಳೆ ಸುರಿಸಿದ್ದು, ಇರಾನ್ ಸರ್ಕಾರ ನಡುಗಿಹೋಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಇರಾನ್ ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನೆ ಮಾಡಿದೆ ಎಂದು ವರದಿಯಾಗಿದೆ.

ಇಸ್ರೇಲ್ ವಾಯುದಾಳಿಗೆ 18 ಬಲಿ
ಮತ್ತೊಂದೆಡೆ, ಉತ್ತರ ಇರಾನ್ ಮೇಲೆ ಇಸ್ರೇಲ್ ವಾಯುಪಡೆ ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಟೆಹ್ರಾನ್‌ನ ಪ್ರಮುಖ ವಿಮಾನ ನಿಲ್ದಾಣಗಳಾದ ಮೆಹರಾಬಾದ್ ಮತ್ತು ಖರ‍್ರಂಬಾದ್ ಮೇಲೆ ಇಸ್ರೇಲ್ ಮಿಸೈಲ್‌ಗಳನ್ನು ಉಡಾಯಿಸಿದ್ದು, ವಿಮಾನ ನಿಲ್ದಾಣಗಳು ಸಂಪೂರ್ಣ ಹಾನಿಗೊಳಗಾಗಿವೆ. ಕಶನ್ ರೈಲ್ವೇ ಬ್ರಿಡ್ಜ್ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ-ಇಸ್ರೇಲ್ ದಾಳಿಗೆ ಬಗ್ಗದ ಇರಾನ್
ಅಮೆರಿಕ-ಇಸ್ರೇಲ್ ದಾಳಿಗೆ ಬೆದರದ ಇರಾನ್, ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡುವ ಮೂಲಕ ತಿರುಗೇಟು ನೀಡಿದೆ. ಸೌದಿ ಅರೇಬಿಯಾದ ಅಲ್ ಜುಬೈಲ್ ಪೆಟ್ರೋಕೆಮಿಕಲ್ ಘಟಕದ ಮೇಲೆ ಡ್ರೋನ್ ಮತ್ತು ಮಿಸೈಲ್ ದಾಳಿ ನಡೆಸಿ ಆತಂಕ ಸೃಷ್ಟಿಸಿದೆ.
ಹೆದ್ದಾರಿ, ರೈಲು ಮಾರ್ಗಗಳು ಬಂದ್
* ಇರಾನ್‌ನಲ್ಲಿ ಈಗ ಹೈ ಅಲರ್ಟ್ ಘೋಷಿಸಲಾಗಿದ್ದು, ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.
* ದೇಶಾದ್ಯಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
* ರೈಲ್ವೇ ಮಾರ್ಗಗಳ ಮೇಲೆ ನಡೆದ ದಾಳಿಯ ಬಗ್ಗೆ ಇರಾನ್ ಯುನೆಸ್ಕೋದಲ್ಲಿ ದೂರು ದಾಖಲಿಸಿದೆ.
ಸೌದಿಯಲ್ಲಿ ಹೈ ಅಲರ್ಟ್
ಇರಾನ್‌ನಿಂದ ಪ್ರತಿದಾಳಿ ತೀವ್ರಗೊಳ್ಳುವ ಭೀತಿಯಿಂದಾಗಿ ಸೌದಿ ಅರೇಬಿಯಾ ಮತ್ತು ಬಹ್ರೇನ್ ಅನ್ನು ಸಂಪರ್ಕಿಸುವ ಪ್ರಮುಖ ಕಿಂಗ್ ಫಹದ್ ಸೇತುವೆಯನ್ನು ಬಂದ್ ಮಾಡಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಿಚ್ಚು ಹೆಚ್ಚುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ತೈಲ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications