ಸೋಲಿಲ್ಲದ ಸರದಾರ ವೊಯೇಜರ್ 1: 24 ಬಿಲಿಯನ್ ಕಿಮೀ ದೂರದಿಂದ ಸಂವಹನ ನಡೆಸಿದ ಬಾಹ್ಯಾಕಾಶ ನೌಕೆ

ತಾಂತ್ರಿಕ ಸಮಸ್ಯೆಗಳ ಪರಿಣಾಮವಾಗಿ, ಭೂಮಿಯೊಡನೆ ನಾಸಾದ ವೊಯೇಜರ್ 1 ಬಾಹ್ಯಾಕಾಶ ನೌಕೆಯ ಸಂಪರ್ಕ ಸ್ಥಗಿತಗೊಂಡಿತ್ತು. ಆದರೆ, ವೊಯೇಜರ್ 1 ತನ್ನ ತಾಂತ್ರಿಕ ಸಮಸ್ಯೆಯನ್ನು ಅನಿರೀಕ್ಷಿತ ವಿಧಾನದ ಮೂಲಕ ಸ್ವತಃ ಸರಿಪಡಿಸಿಕೊಂಡಿದೆ.

ವೊಯೇಜರ್ 1 ನೌಕೆ ವೈಜ್ಞಾನಿಕ ಸಮುದಾಯವನ್ನು ನಿರಂತರವಾಗಿ ಆಶ್ಚರ್ಯ ಚಕಿತರನ್ನಾಗಿಸುತ್ತಲೇ ಬಂದಿದೆ. ಬಾಹ್ಯಾಕಾಶದಲ್ಲಿ ನಿರಂತರ 47 ವರ್ಷಗಳನ್ನು ಕಳೆದಿದ್ದರೂ, ವೊಯೇಜರ್ 1 ಇಂದಿಗೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ತನ್ನ ಅವಳಿ ಬಾಹ್ಯಾಕಾಶ ನೌಕೆಯಾದ ವೊಯೇಜರ್ 2ರ ಜೊತೆಗೆ ವೊಯೇಜರ್ 1 ನಿರಂತರವಾಗಿ ಬಾಹ್ಯಾಕಾಶ ಯಾನ ನಡೆಸುತ್ತಿದೆ. ಅದು ಈಗಾಗಲೇ ನಮ್ಮ ಸೌರಮಂಡಲದ ಅಂಚುಗಳನ್ನೂ ದಾಟಿ ಮುಂದಕ್ಕೆ ಸಾಗಿದ್ದು, ಅಂತರತಾರಾ (ಇಂಟರ್‌ಸ್ಟೆಲ್ಲಾರ್) ಬಾಹ್ಯಾಕಾಶ ಎಂದು ಕರೆಯಲಾಗುವ, ನಕ್ಷತ್ರಗಳ ನಡುವಿನ ವಿಶಾಲವಾದ ಖಾಲಿ ಪ್ರದೇಶವನ್ನು ಪ್ರವೇಶಿಸಿದೆ. ವೊಯೇಜರ್ 1 ಮತ್ತು ವೊಯೇಜರ್ 2 ಬಾಹ್ಯಾಕಾಶ ನೌಕೆಗಳು 'ಅಂತರತಾರಾ ಬಾಹ್ಯಾಕಾಶ'ವನ್ನು ಪ್ರವೇಶಿಸಿವೆ ಎಂದರೆ, ಅವುಗಳು ಈಗಾಗಲೇ ಅಧಿಕೃತವಾಗಿ ಸೂರ್ಯನ ಪ್ರಭಾವವಿರುವ ವಲಯವನ್ನು ದಾಟಿ, ದೂರಕ್ಕೆ ಚಲಿಸಿವೆ. ಅಂದರೆ, ಈ ಬಾಹ್ಯಾಕಾಶ ನೌಕೆಗಳು ಸೂರ್ಯನ ಗುರುತ್ವಾಕರ್ಷಣಾ ಸೆಳೆತ ಮತ್ತು ಸೌರ ಮಾರುತಗಳ ವ್ಯಾಪ್ತಿಗೆ ಒಳಗಾಗುವ ನಮ್ಮ ಸೌರಮಂಡಲವನ್ನು ಮೀರಿ, ಬಾಹ್ಯಾಕಾಶದ ಸಂಪೂರ್ಣವಾಗಿ ಹೊಸದಾದ ಆಯಾಮವನ್ನು ಪ್ರವೇಶಿಸಿವೆ.

Unbeaten Journey Of Voyager Is Continues And It Is Still Communicating With Earth From 24 Billion KM

ಅಷ್ಟು ದೂರಕ್ಕೆ ಚಲಿಸಿವೆ ಎಂದಾಗಲೇ, ಈ ಬಾಹ್ಯಾಕಾಶ ನೌಕೆಗಳು ನಮಗೆ ಇನ್ನೂ ವಿಶೇಷ ಮಾಹಿತಿಗಳನ್ನು ಒದಗಿಸುವುದನ್ನು, ಆಶ್ಚರ್ಯ ಉಂಟುಮಾಡುವುದನ್ನು ನಿಲ್ಲಿಸಬಹುದು ಎಂದು ಭಾವಿಸಲಾಗಿತ್ತು. ಆದರೆ, ವಾಸ್ತವವಾಗಿ ಹಾಗಾಗಿಲ್ಲ! ಇತ್ತೀಚೆಗೆ, ವೊಯೇಜರ್ 1 ಬಾಹ್ಯಾಕಾಶ ನೌಕೆಯಲ್ಲಿ ತಲೆದೋರಿದ ಒಂದು ತಾಂತ್ರಿಕ ಸಮಸ್ಯೆಯಿಂದಾಗಿ, ಕೆಲವು ವಾರಗಳ ಕಾಲ ಅದರೊಡನೆ ಸಂವಹನ ಕಡಿತಗೊಂಡಿತ್ತು. ಆದರೆ, ಈ ಬಾಹ್ಯಾಕಾಶ ನೌಕೆ 1981ರಿಂದ ಬಳಸಿರದ ಉಪಕರಣವನ್ನು ಪ್ರಯೋಗಿಸಿ, ಈ ಸಮಸ್ಯೆಯನ್ನು ತಾನೇ ಸ್ವತಃ ಪರಿಹರಿಸಿಕೊಂಡಿದೆ.

ವೊಯೇಜರ್ 1 ನೌಕೆ ನಮ್ಮ ಭೂಮಿಯಿಂದ 24 ಬಿಲಿಯನ್ ಕಿಲೋಮೀಟರ್ (15 ಬಿಲಿಯನ್ ಮೈಲಿ) ದೂರದಲ್ಲಿದ್ದು, ಅಲ್ಲಿಗೆ ನಮ್ಮ ಸಂದೇಶ ತಲುಪಲು, ಅಥವಾ ಅಲ್ಲಿಂದ ಪ್ರತಿಕ್ರಿಯೆ ನಮಗೆ ಬರಲು ಇಪ್ಪತ್ತೆರಡೂವರೆ ಗಂಟೆ ತಗಲುತ್ತದೆ.

ಅಕ್ಟೋಬರ್ 16ರಂದು, ಭೂಮಿಯಲ್ಲಿರುವ ವೊಯೇಜರ್ 1ರ ನಿರ್ವಹಣಾ ತಂಡ ಬಾಹ್ಯಾಕಾಶ ನೌಕೆಯಲ್ಲಿರುವ ಒಂದು ಹೀಟರ್ ಅನ್ನು ಚಾಲನೆಗೊಳಿಸಲು ಆದೇಶ ರವಾನಿಸಿತು. ಬಾಹ್ಯಾಕಾಶದಲ್ಲಿ ವೊಯೇಜರ್ 1 ವಿಪರೀತ ತಣ್ಣನೆಯ ಪ್ರದೇಶದಲ್ಲಿದ್ದು, ಅದರ ಒಳಗಿರುವ ಯಂತ್ರೋಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಾದರೆ ಅವಶ್ಯಕ ಉಷ್ಣತೆಯನ್ನು ಒದಗಿಸಬೇಕಾಗುತ್ತದೆ.

ಈ ಬಾಹ್ಯಾಕಾಶ ನೌಕೆ ತನಗೆ ಬೇಕಾದ ಶಕ್ತಿಯನ್ನು ವಿಕಿರಣಶೀಲತೆಯ ಚಟುವಟಿಕೆಗಳ (ರೇಡಿಯೋ ಆ್ಯಕ್ಟಿವಿಟಿ) ಮೂಲಕ ಪಡೆಯುತ್ತದೆ. ಈ ಶಕ್ತಿ ಮೂಲ ಕಾಲಕ್ರಮೇಣ ಖಾಲಿಯಾಗುತ್ತಿದ್ದರೂ, ಅದು ಬಾಹ್ಯಾಕಾಶ ನೌಕೆಯೊಳಗಿರುವ ಹೀಟರ್‌ಗಳಂತಹ ವ್ಯವಸ್ಥೆಗಳನ್ನು ಕಾರ್ಯಾಚರಿಸಲು ಸಾಕಾಗುವಷ್ಟಿದೆ.

ಆದರೆ, ಭೂಮಿಯಿಂದ ಸೂಚನೆ ನೀಡಿದ ಬಳಿಕ ಏನೋ ಸಮಸ್ಯೆ ತಲೆದೋರಿತು. ಅಕ್ಟೋಬರ್ 18ರಂದು ಬಾಹ್ಯಾಕಾಶ ನೌಕೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ವೊಯೇಜರ್ 1 ಭೂಮಿಯಲ್ಲಿರುವ ಡೀಪ್ ಸ್ಪೇಸ್ ನೆಟ್ವರ್ಕ್ ಎಂಬ ಜಾಲದೊಡನೆ ಸಂದೇಶ ರವಾನಿಸಲು ಮತ್ತು ಸ್ವೀಕರಿಸಲು ಎಕ್ಸ್ ಬ್ಯಾಂಡ್ (ಸಾಮಾನ್ಯವಾಗಿ 8 ಮತ್ತು 8.05 ಗಿಗಾ ಹರ್ಟ್ಸ್ ತರಂಗಾಂತರದ ನಡುವಿನ) ರೇಡಿಯೋ ಟ್ರಾನ್ಸ್‌ಮಿಟರ್ ಅನ್ನು ಬಳಸುತ್ತದೆ.

ಡೀಪ್ ಸ್ಪೇಸ್ ನೆಟ್ವರ್ಕ್: ಇದೊಂದು ಅತ್ಯಂತ ದೊಡ್ಡದಾದ ರೇಡಿಯೋ ಆ್ಯಂಟೆನಾಗಳನ್ನು ಹೊಂದಿರುವ ವ್ಯವಸ್ಥೆಯಾಗಿದ್ದು, ಭೂಮಿಯಿಂದ ಬಹಳ ದೂರದಲ್ಲಿರುವ ವೊಯೇಜರ್ 1ರಂತಹ ಬಾಹ್ಯಾಕಾಶ ನೌಕೆಗಳೊಡನೆ ಸಂವಹನ ನಡೆಸಲು ಬಳಕೆಯಾಗುತ್ತದೆ. ಈ ಆ್ಯಂಟೆನಾಗಳನ್ನು ಕಾರ್ಯತಂತ್ರದ ದೃಷ್ಟಿಯಿಂದ ಪ್ರಪಂಚದ ಮೂರು ಸ್ಥಳಗಳಲ್ಲಿ ಅಳವಡಿಸಲಾಗಿದೆ. ಆ ಸ್ಥಳಗಳೆಂದರೆ: ಅಮೆರಿಕಾದ ಕ್ಯಾಲಿಫೋರ್ನಿಯಾ, ಸ್ಪೇನಿನ ಮ್ಯಾಡ್ರಿಡ್, ಹಾಗೂ ಆಸ್ಟ್ರೇಲಿಯಾದ ಕ್ಯಾನ್‌ಬೆರಾ. ಭೂಮಿ ತಿರುಗುತ್ತಿದ್ದರೂ, ಮೂರರ ಪೈಕಿ ಕನಿಷ್ಠ ಯಾವುದಾದರೂ ಒಂದು ಆ್ಯಂಟೆನಾ ವೊಯೇಜರ್ 1ರ ದೃಷ್ಟಿಯಲ್ಲಿ ಇದ್ದೇ ಇರುತ್ತದೆ.

ವೊಯೇಜರ್ 1ರ ಯೋಜನಾ ತಂಡ ಬಾಹ್ಯಾಕಾಶ ನೌಕೆಯ ಕುರಿತು ಸಮಗ್ರ ಜ್ಞಾನವನ್ನು ಹೊಂದಿದ್ದು, ನಾವು ಇತ್ತೀಚೆಗೆ ಕಳುಹಿಸಿರುವ ಆದೇಶದ ಪರಿಣಾಮವಾಗಿ, ನೌಕೆಯ ದೋಷ ರಕ್ಷಣಾ ವ್ಯವಸ್ಥೆ ಚಾಲನೆಗೊಂಡಿರಬಹುದು ಎಂದು ಊಹಿಸಿದರು. ಇದೊಂದು ಸುರಕ್ಷತಾ ವ್ಯವಸ್ಥೆಯಾಗಿದ್ದು, ಏನಾದರೂ ಸಮಸ್ಯೆ ತಲೆದೋರಿದಾಗ ಅದು ಸ್ವತಃ ಚಾಲನೆಗೊಳ್ಳುತ್ತದೆ. ಇದರ ಪರಿಣಾಮವಾಗಿ, ಬಾಹ್ಯಾಕಾಶ ನೌಕೆ ತನ್ನ ಎಕ್ಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಅನ್ನು ಬದಲಾಯಿಸಿ, ಬಹಳಷ್ಟು ನಿಧಾನವಾಗಿ ಮಾಹಿತಿಗಳನ್ನು ರವಾನಿಸಲಾರಂಭಿಸಿತು. ಈ ಹೊಂದಾಣಿಕೆ ವೊಯೇಜರ್ 1 ನೌಕೆಯನ್ನು ರಕ್ಷಿಸಲು ನೆರವಾಗುತ್ತದಾದರೂ, ಭೂಮಿಯೊಡನೆ ಅದರ ಸಂವಹನದ ಮೇಲೆ ಪರಿಣಾಮ ಬೀರುತ್ತದೆ.

ಯೋಜನಾ ತಂಡ ವೊಯೇಜರ್ 1ರ ಸಂಕೇತಗಳಿಗಾಗಿ ಹುಡುಕಾಟ ನಡೆಸಿದರೂ, ಅದನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದೊಂದು ಸಣ್ಣ ಪ್ರಮಾಣದ ದೋಷವಾಗಿದ್ದು, ತೀರಾ ಆತಂಕದ ವಿಚಾರವಾಗಿರಲಿಲ್ಲ. ಆದರೆ ಕಳೆದ ವರ್ಷ ಕಂಡುಬಂದ ಒಂದು ದೋಷದಿಂದ, ಬಾಹ್ಯಾಕಾಶ ನೌಕೆ ಭೂಮಿಗೆ ಅಸಂಬದ್ಧ, ಅರ್ಥೈಸಿಕೊಳ್ಳಲು ಸಾಧ್ಯವಾಗದಂತಹ ಸಂದೇಶಗಳನ್ನು ಕಳುಹಿಸಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡ ನಿರ್ವಹಣಾ ತಂಡ, ಈ ಸಮಸ್ಯೆಯನ್ನು ಇನ್ನಷ್ಟು ಕೂಲಂಕಷವಾಗಿ ಪರಿಶೀಲಿಸಲು ನಿರ್ಧರಿಸಿತು. ಆದರೆ, ಅಕ್ಟೋಬರ್ 19ರಂದು ಇನ್ನೂ ಗಂಭೀರ ಸಮಸ್ಯೆ ತಲೆದೋರಿ, ವೊಯೇಜರ್ 1ರಿಂದ ಬರುವ ಸಂಕೇತಗಳು ಸಂಪೂರ್ಣವಾಗಿ ನಿಂದುಹೋದವು. ಅದೃಷ್ಟವಶಾತ್, ವೊಯೇಜರ್ 1 ಬಾಹ್ಯಾಕಾಶ ನೌಕೆಯ ಬಹುಪಾಲು ಕ್ರಿಯೆಗಳನ್ನು ನಿರ್ವಹಿಸುವ, ಅದರಲ್ಲಿ ಅಳವಡಿಸಲಾಗಿರುವ ಕಂಪ್ಯೂಟರ್ ಈ ಸಮಸ್ಯೆಗೆ ತಾನೇ ಅನಿರೀಕ್ಷಿತವಾಗಿ ಪರಿಹಾರ ಕಂಡುಕೊಂಡಿತು. ಈ ಪರಿಹಾರ ಅನಿರೀಕ್ಷಿತವಾಗಿದ್ದು, ತಂಡ ಇದನ್ನು ಮೊದಲೇ ಊಹಿಸಿರಲಿಲ್ಲ. ಆದರೆ ಕಂಪ್ಯೂಟರ್ ಕಂಡುಕೊಂಡ ಪರಿಹಾರ ತಲೆದೋರಿದ್ದ ಸಮಸ್ಯೆಯನ್ನು ನಿವಾರಿಸಲು ಯಶಸ್ವಿಯಾಗಿತ್ತು.

ವೊಯೇಜರ್ 1ನ್ನು ದೋಷದಿಂದ ರಕ್ಷಿಸುವ ವ್ಯವಸ್ಥೆ ಇನ್ನೂ ಎರಡು ಬಾರಿ ಸಕ್ರಿಯಗೊಂಡಿರಬಹುದು ಎಂದು ಯೋಜನಾ ತಂಡ ಭಾವಿಸಿದೆ. ಈ ಕಾರಣದಿಂದಲೇ ಬಾಹ್ಯಾಕಾಶ ನೌಕೆ ತನ್ನ ಎಕ್ಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಅನ್ನು ಸ್ಥಗಿತಗೊಳಿಸಿ, ಎಸ್ ಬ್ಯಾಂಡ್ ಎಂದು ಕರೆಯಲಾಗುವ ಟ್ರಾನ್ಸ್‌ಮಿಟರ್ ಅನ್ನು ಚಾಲನೆಗೊಳಿಸಿತು. ಎಸ್ ಬ್ಯಾಂಡ್ (2-4 ಗಿಗಾ ಹರ್ಟ್ಸ್ ರೇಡಿಯೋ ತರಂಗಾಂತರ ವ್ಯಾಪ್ತಿ) ವೊಯೇಜರ್ ನೌಕೆಯಲ್ಲಿರುವ ಇನ್ನೊಂದು ಸಂವಹನಾ ವ್ಯವಸ್ಥೆಯಾಗಿದ್ದು, ಭೂಮಿಗೆ ಸಂಕೇತಗಳನ್ನು ಕಳುಹಿಸಲು ಬಳಕೆಯಾಗುತ್ತದೆ. ಈ ಮಾಹಿತಿಯನ್ನು ವೊಯೇಜರ್ ಬ್ಲಾಗ್‌ನಲ್ಲಿ ನಾಸಾದ ಟೋನಿ ಗ್ರಿಸಿಯಸ್ ಹಂಚಿಕೊಂಡಿದ್ದರು.

ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಕಡಿಮೆ ಶಕ್ತಿಯನ್ನು ಬಳಸುವುದಾಗಿದ್ದು, 1981ರ ಬಳಿಕ ವೊಯೇಜರ್ 1 ಭೂಮಿಯನ್ನು ಸಂಪರ್ಕಿಸಲು ಈ ಟ್ರಾನ್ಸ್‌ಮಿಟರ್ ಅನ್ನು ಬಳಸಿಲ್ಲ. ಇದು ಎಕ್ಸ್ ಬ್ಯಾಂಡ್ ಟ್ರಾನ್ಸ್‌ಮಿಟರ್‌ಗಿಂತ ಭಿನ್ನವಾದ ಆವರ್ತನದಲ್ಲಿ ಕಾರ್ಯಾಚರಿಸುತ್ತಿದ್ದು, ಇದರ ಸಂಕೇತಗಳು ದುರ್ಬಲವಾಗಿವೆ. ಆದ್ದರಿಂದ ಭೂಮಿಯಲ್ಲಿ ಅದರ ಸಂಕೇತಗಳನ್ನು ಸ್ವೀಕರಿಸುವುದು ಕಷ್ಟಕರವಾಗುತ್ತದೆ.

ವೊಯೇಜರ್ 1 ಬಾಹ್ಯಾಕಾಶ ನೌಕೆ ಭೂಮಿಯಿಂದ ವಿಪರೀತ ದೂರದಲ್ಲಿರುವುದರಿಂದ, ಎಸ್ ಬ್ಯಾಂಡ್ ಸಂಕೇತಗಳನ್ನು ಸ್ವೀಕರಿಸಲು ಸಾಧ್ಯವಾಗುವ ಕುರಿತು ಯೋಜನಾ ತಂಡ ಅನುಮಾನಗಳನ್ನು ಹೊಂದಿತ್ತು. ಆದರೆ ಡೀಪ್ ಸ್ಪೇಸ್ ನೆಟ್ವರ್ಕ್‌ನ ಇಂಜಿನಿಯರ್‌ಗಳ ತಂಡ ಅದರ ಸಂಕೇತವನ್ನು ಪತ್ತೆಹಚ್ಚಲು ಯಶಸ್ವಿಯಾಯಿತು.

ಇಷ್ಟೊಂದು ವರ್ಷಗಳ ಬಳಿಕ, ಭೂಮಿಯಿಂದ ಅಪಾರ ದೂರದಲ್ಲಿದ್ದರೂ, ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಯೋಜನಾ ತಂಡ ಖಾತ್ರಿಪಡಿಸಿದೆ. ತಂತ್ರಜ್ಞರು ಈಗ ಬಾಹ್ಯಾಕಾಶ ನೌಕೆಯನ್ನು ಅದರ ಸಹಜ ಕಾರ್ಯಾಚರಣಾ ಸ್ಥಿತಿಗೆ ತರಲು ಪ್ರಯತ್ನ ನಡೆಸುತ್ತಿದೆ. ನಾಸಾ ಅಕ್ಟೋಬರ್ 31ರಂದು ಈ ಮಾಹಿತಿಯನ್ನು ಹಂಚಿಕೊಂಡಿದೆ.

ವೊಯೇಜರ್ 1 ನೌಕೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿರುವುದು ಅದನ್ನು ವಿನ್ಯಾಸಗೊಳಿಸಿರುವ ಇಂಜಿನಿಯರ್‌ಗಳ ಅಸಾಧಾರಣ ಕಾರ್ಯ ಯೋಜನೆ ಮತ್ತು ಅದನ್ನು ನಿರ್ವಹಿಸುವ ತಂಡದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇಷ್ಟೊಂದು ವರ್ಷಗಳ ಬಳಿಕವೂ ವೊಯೇಜರ್ 1 ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿರುವುದು ನಿಜಕ್ಕೂ ವಿಸ್ಮಯಕಾರಿ ಬೆಳವಣಿಗೆಯೇ ಹೌದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+