Video:ಯಾವುದೇ ಕಾರಣಕ್ಕೂ ಉಕ್ರೇನ್ ಶಸ್ತ್ರತ್ಯಾಗ ಮಾಡಲ್ಲ ಎಂದ ಅಧ್ಯಕ್ಷ
ಕೀವ್, ಫೆಬ್ರವರಿ 26: ಉಕ್ರೇನ್ ವಿರುದ್ಧ ರಷ್ಯಾ ದಾಳಿಯ ನಡುವೆ ಯಾವುದೇ ಕಾರಣಕ್ಕೂ ಉಕ್ರೇನ್ ಶಸ್ತ್ರಾಸ್ತ್ರ ತ್ಯಾಗ ಮಾಡುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಶನಿವಾರ ದೇಶದ ಪ್ರಜೆಗಳು ಮತ್ತು ಸೈನಿಕರಿಗೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ. ಸಾಕಷ್ಟು ಮಾಧ್ಯಮಗಳಲ್ಲಿ ರಷ್ಯಾದ ಎದುರಿಗೆ ನಾನು ಮತ್ತು ಉಕ್ರೇನ್ ಯೋಧರು ಶರಣಾಗಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವತಃ ಅಧ್ಯಕ್ಷ ಝೆಲೆನ್ಸ್ಕಿ ಸ್ಪಷ್ಟನೆ ನೀಡಿದ್ದಾರೆ.
"ನಾನು ಇಲ್ಲಿದ್ದೇನೆ. ನಾವು ಯಾವುದೇ ಶಸ್ತ್ರಾಸ್ತ್ರ ತ್ಯಾಗವನ್ನು ಮಾಡಿಲ್ಲ. ನಮ್ಮ ದೇಶವನ್ನು ನಾವೇ ಏಕೆಂದರೆ ನಮ್ಮ ಆಯುಧಗಳೇ ನಮ್ಮ ಶಕ್ತಿ ಮತ್ತು ಸತ್ಯವಾಗಿರುತ್ತವೆ," ಎಂದು ಝೆಲೆನ್ಸ್ಕಿ ಘೋಷಿಸಿದ್ದಾರೆ. ತಾವು ಓಡಿ ಹೋಗಿರುವ ಅಥವಾ ಶರಣಾಗಿರುವ ಕುರಿತು ಹರಿದಾಡುತ್ತಿರುವ ಸುದ್ದಿಗಳನ್ನು ಅವರು ನಿರಾಕರಿಸಿದ್ದಾರೆ.
Не вірте фейкам. pic.twitter.com/wiLqmCuz1p
— Володимир Зеленський (@ZelenskyyUa) February 26, 2022
ಸುಳ್ಳು ಸುದ್ದಿಗಳ ಕುರಿತು ಝೆಲೆನ್ಸ್ಕಿ ಸ್ಪಷ್ಟನೆ:
ರಷ್ಯಾ ದಾಳಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. "ನಮ್ಮ ಸೇನೆಯನ್ನು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಾನು ಕರೆ ನೀಡಿದ್ದೇನೆ ಮತ್ತು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿರುವ ಕುರಿತು ಸುದ್ದಿಗಳು ಹರಿದಾಡುತ್ತಿವೆ," ಎಂದು ಅವರು ಹೇಳಿದ್ದಾರೆ.

"ಇದು ನಮ್ಮ ಭೂಮಿ, ನಮ್ಮ ದೇಶ, ನಮ್ಮ ಮಕ್ಕಳು ಮತ್ತು ನಾವು ಎಲ್ಲವನ್ನೂ ರಕ್ಷಿಸುತ್ತೇವೆ ಎಂಬುದು ನಮ್ಮ ಸತ್ಯವಾಗಿದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ದಣಿದ ರೀತಿಯಲ್ಲಿ ಗೋಚರಿಸಿದ ಅವರು ಹಸಿರು ಬಣ್ಣದ ಸೇನಾ ಉಡುಪಿನಲ್ಲಿ ಕಾಣಿಸಿಕೊಂಡರು.
ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಫೋಟಗಳು ಮತ್ತು ವಾಯುದಾಳಿ ಸೈರನ್ ಶಬ್ದಗಳು ರಾಜಧಾನಿಯ ಸುತ್ತಲೂ ಇನ್ನೂ ಕೇಳಿಬರುತ್ತಿವೆ. ರಷ್ಯಾದ ಮಿಲಿಟರಿ ಉಕ್ರೇನಿಯನ್ ಮಿಲಿಟರಿ ಗುರಿಗಳ ಮೇಲೆ ವಾಯು ಮತ್ತು ಸಮುದ್ರ ಆಧಾರಿತ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿದೆ.












Click it and Unblock the Notifications