ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡ ಸ್ಫೋಟದ ಭೀತಿ: ಉಕ್ರೇನ್ ವಿದೇಶಾಂಗ ಸಚಿವರ ಎಚ್ಚರಿಕೆ
ಕೀವ್, ಮಾರ್ಚ್ 04: ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ (Zaporizhzhia) ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಸೈನಿಕರು ದಾಳಿ ನಡೆಸಿದ್ದು, ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಯು ತನ್ನ ಕೆನ್ನಾಲಿಗೆಯನ್ನು ಚಾಚುತ್ತಲೇ ಇದೆ. ಈ ನಡುವೆ ಅತೀ ದೊಡ್ಡ ದುರಂತಕ್ಕೆ ಕಾರಣವಾದ ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ಸ್ಪೋಟಕ್ಕಿಂತಲೂ 10 ಪಟ್ಟು ದೊಡ್ಡ ಸ್ಫೋಟದ ಎಚ್ಚರಿಕೆಯನ್ನು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ನೀಡಿದ್ದಾರೆ.
ಮಾಸ್ಕೋದಿಂದ ಬೃಹತ್ ಶೆಲ್ ದಾಳಿಯ ನಂತರ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿಯ ಬಗ್ಗೆ ಎಚ್ಚರಿಕೆ ನೀಡಿರುವ ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ, "ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೊರಿಝಿಯಾ ಎನ್‌ಪಿಪಿ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ. ಬೆಂಕಿ ಈಗಾಗಲೇ ಸ್ಫೋಟಗೊಂಡಿದೆ," ಎಂದು ಹೇಳಿದ್ದಾರೆ.
"ಒಂದು ವೇಳೆ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಸ್ಫೋಟಿಸಿದರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡ ಸ್ಪೋಟವಾಗಲಿದೆ. ಹೆಚ್ಚು ಅನಾಹುತವನ್ನು ಉಂಟು ಮಾಡಲಿದೆ. ರಷ್ಯನ್ನರು ತಕ್ಷಣವೇ ಬೆಂಕಿಯನ್ನು ನಿಲ್ಲಿಸಬೇಕು. ಅಗ್ನಿಶಾಮಕ ದಳಕ್ಕೆ ಪ್ರವೇಶ ಮಾಡಲು ಅನುಮತಿ ನೀಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಿ," ಎಂದು ಎಚ್ಚರಿಕೆ ಜೊತೆಗೆ ರಷ್ಯಾದ ಸೇನಾಪಡೆಗೆ ಮನವಿ ಮಾಡಿ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿದ್ದಾರೆ.

ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಸೈನಿಕರು ದಾಳಿ ಮಾಡಿದ್ದಾರೆ. ಈ ದಾಳಿಯ ನಂತರ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ.
"ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಷ್ಯಾದ ಸೈನಿಕರ ದಾಳಿ ಮಾಡಿದ್ದು, ಈ ಬಳಿಕ ಶುಕ್ರವಾರ ಮುಂಜಾನೆ ಈ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ," ಎಂದು ಹತ್ತಿರದ ಪಟ್ಟಣ ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಮಾಹಿತಿ ನೀಡಿದ್ದಾರೆ.
ಅಪಾಯದ ಎಚ್ಚರಿಕೆ ನೀಡಿದ ಎನ್‌ಪಿಪಿ ಮುಖ್ಯಸ್ಥ
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಪಿಪಿ ಮುಖ್ಯಸ್ಥರು ಇಗೊರ್ ಮುರಶೋವ್, "ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ (ಎನ್‌ಪಿಪಿ) ಪರಮಾಣು ಸುರಕ್ಷತೆಗೆ ಹಾನಿಯಾಗಿದೆ. ನಾವು ಎಲ್ಲವನ್ನೂ ಮಾಡುತ್ತಿದ್ದೇವೆ, ಆದರೆ ಬೆಂಕಿ ಕೆನ್ನಾಲಿಗೆ ಶಮನವಾಗುತ್ತಿಲ್ಲ. ಅಗ್ನಿಶಾಮಕದಳವು ಜೊತೆಯಾಗುವ ಸ್ಥಿತಿಯೂ ಇಲ್ಲ. ದೊಡ್ಡ ಅಪಾಯ ಎದುರಾಗಿದೆ. ಸ್ಥಾವರದಲ್ಲಿ ಯುದ್ಧ ನಡೆಯುತ್ತಿದೆ. ಪರಮಾಣು ಮೇಲೆ ಪರಿಣಾಮ ಬೀರುವ ಅಪಾಯವಿದೆ," ಎಂದು ತಿಳಿಸಿದ್ದಾರೆ.
ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ದಾಳಿಯ ನಂತರ, ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ವೊಲೊಡಿಮಿರ್ ಝೆಲೆನ್ಸ್ಕಿ ಸಲಹೆಗಾರ ಪ್ರತಿಕ್ರಿಯಿಸಿ "ಝಪೊರಿಝಿಯಾ NPP ಬೆಂಕಿಯಲ್ಲಿದೆ! ಇಡೀ ಯುರೋಪ್ ಪರಮಾಣು ದುರಂತದ ಪುನರಾವರ್ತನೆಯ ಅಪಾಯದಲ್ಲಿದೆ. ರಷ್ಯನ್ನರು ಇದನ್ನು ಇಲ್ಲಿಗೆ ನಿಲ್ಲಿಸಬೇಕು!" ಎಂದಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೀವ್‌ನ ಉತ್ತರಕ್ಕೆ ಸುಮಾರು ದೂರದಲ್ಲಿರುವ ನಿಷ್ಕ್ರಿಯ ಚರ್ನೋಬಿಲ್ ಸ್ಥಾವರವನ್ನು ರಷ್ಯಾ ಈಗಾಗಲೇ ವಶಪಡಿಸಿಕೊಂಡಿದೆ. ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 130 ಕಿಲೋಮೀಟರ್ (80 ಮೈಲುಗಳು) ಸ್ಥಾವರವಿದೆ. ಕಳೆದ ಏಪ್ರಿಲ್ 1986ರಲ್ಲಿ ಪರಮಾಣು ರಿಯಾಕ್ಟರ್ ಸ್ಫೋಟಿಸಿತು, ಯುರೋಪ್‌ನಾದ್ಯಂತ ವಿಕಿರಣಶೀಲ ತ್ಯಾಜ್ಯವನ್ನು ಹೊರಹಾಕಿತು. ವಿಕಿರಣ ಸೋರಿಕೆ ತಡೆಗಟ್ಟಲು ಹಲವಾರು ವರ್ಷಗಳ ಹಿಂದೆ ಸ್ಫೋಟಗೊಂಡ ರಿಯಾಕ್ಟರ್ ಅನ್ನು ರಕ್ಷಣಾತ್ಮಕ ಉದ್ದೇಶದಿಂದ ಮುಚ್ಚಲಾಗಿತ್ತು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications