ಪ್ರತಿರೋಧವಿಲ್ಲದೇ ರಷ್ಯಾ ಮುಂದೆ ಉಕ್ರೇನ್ ಶರಣಾಗತಿ: ಯುದ್ದ ಅಂತ್ಯ ಸನ್ನಿಹಿತ?
ಒಂದು ಕಾಲದಲ್ಲಿ ಬಲಾಢ್ಯ ಪರಮಾಣು ಹೊಂದಿದ ರಾಷ್ಟ್ರವಾಗಿದ್ದ ಉಕ್ರೇನ್ ಈಗ ರಷ್ಯಾದ ಎದುರು ಮಂಡಿಯೂರಲು ಸಜ್ಜಾಗುತ್ತಿದೆ. ಅಮೆರಿಕಾ ಮತ್ತು ನ್ಯಾಟೋ ಪಡೆಗಳ ಬೆಂಬಲವನ್ನು ಬಲವಾಗಿ ನೆಚ್ಚಿಕೊಂಡಿದ್ದ ಉಕ್ರೇನಿಗೆ ತೀವ್ರ ಹಿನ್ನಡೆಯಾಗಿದೆ.
ಈಗಾಗಲೇ ಬಹುತೇಕ ಉಕ್ರೇನ್ ರಾಜಧಾನಿ ಕೀವ್ ನಗರವನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ರಷ್ಯನ್ ಪಡೆ, ಅಲ್ಲಲ್ಲಿ ಸಾರ್ವಜನಿಕರಿಗೂ ತೊಂದರೆಯನ್ನುಂಟು ಮಾಡಿದೆ. ಉಕ್ರೇನ್ ಜನತೆಗೆ ನಮ್ಮ ಸೇನೆ ತೊಂದರೆ ಮಾಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಭರವಸೆಯನ್ನು ನೀಡಿದ್ದರು.
ರಷ್ಯಾದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಪುಟಿನ್ ಹಠಮಾರಿತನವನ್ನು ಬಿಡಬೇಕು ಎನ್ನುವ ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆಗೆ ರಷ್ಯಾ ಸೊಪ್ಪು ಹಾಕುತ್ತಿಲ್ಲ.
ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣ ಖಂಡಿಸುವ ವಿಶ್ವಸಂಸ್ಥೆ ನಿರ್ಣಯದಿಂದ ಭಾರತ, ಯುಎಇ ಸೇರಿದಂತೆ ಮೂರು ದೇಶದ ಪ್ರತಿನಿಧಿಗಳು ದೂರ ಇರುವ ಮೂಲಕ, ಪರೋಕ್ಷವಾಗಿ ರಷ್ಯಾ ಪರವಾಗಿ ನಿಂತಿದೆ. ಇವೆಲ್ಲದರ ನಡುವೆ ರಷ್ಯಾದ ಜೊತೆಗೆ ಉಕ್ರೇನ್ ಸಂಧಾನ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಬಲಾಢ್ಯ ರಷ್ಯಾ ಮಿಲಿಟರಿ ಎದುರು ಉಕ್ರೇನ್ ಆಟ ನಡೆಯುತ್ತಿಲ್ಲ
ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನವನ್ನು ಉಕ್ರೇನ್ ಸೇನೆ ಮಾಡುತ್ತಿದ್ದರೂ, ಬಲಾಢ್ಯ ಮಿಲಿಟರಿ ಎದುರು ಉಕ್ರೇನ್ ಆಟ ನಡೆಯುತ್ತಿಲ್ಲ. ರಾಜಧಾನಿ ಕೀವ್ ನಗರದ ಆಯಕಟ್ಟಿನ ಕಟ್ಟಡಗಳನ್ನು ಈಗಾಗಲೇ ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿದೆ. ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ಸರಕಾರ ಸುಮಾರು ಹತ್ತು ಸಾವಿರ ಜನರಿಗೆ ರೈಫಲ್ ಅನ್ನು ನೀಡಿದೆ. ರಷ್ಯಾ ಸೇನೆಯ ಅತಿಕ್ರಮಣದಿಂದ ಕೀವ್ ನಗರ ಅಕ್ಷರಶಃ ರಣರಂಗವಾಗಿ ಪರಿಣಮಿಸಿದೆ. ಆರ್ಥಿಕವಾಗಿ ರಷ್ಯಾ ಜಗತ್ತಿನಿಂದ ಹೊರ ಉಳಿಯುವ ಸಾಧ್ಯತೆಯ ಮಾತೂ ಕೇಳಿ ಬರುತ್ತಿದೆ. (ಚಿತ್ರ: ಪಿಟಿಐ)

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂನ್ಸ್ಕಿ
"ಈ ಸಮರದಲ್ಲಿ ನಾವು ಏಕಾಂಗಿಯಾದೆವು, ನಮ್ಮ ಬೆಂಬಲಕ್ಕೆ ಯಾರೂ ನಿಲ್ಲಲಿಲ್ಲ. ಉಕ್ರೇನ್ ದೇಶಕ್ಕೆ ನ್ಯಾಟೋ ಸದಸ್ಯತ್ವ ನೀಡುವ ವಿಚಾರದಲ್ಲಿ ಯಾವ ದೇಶವೂ ಪ್ರಯತ್ನಿಸುತ್ತಿಲ್ಲ. ದೇಶದಲ್ಲಿ ಭಯದ ವಾತಾವರಣವಿದೆ. ರಾಜಕೀಯವಾಗಿ ಉಕ್ರೇನ್ ಅನ್ನು ಬಲಹೀನಗೊಳಿಸುವುದು ಪುಟಿನ್ ಉದ್ದೇಶ. ಅವರ ಮೊದಲ ಟಾರ್ಗೆಟ್ ನಾನು, ಆದರೂ ನಾನು ದೇಶ ಬಿಟ್ಟು ಪರಾರಿಯಾಗಿಲ್ಲ. ರಷ್ಯಾ ಜೊತೆಗೆ ಸಂಧಾನಕ್ಕೆ ಸಿದ್ದ" ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂನ್ಸ್ಕಿ ಹೇಳಿದ್ದಾರೆ.

ಚೆರ್ನೋಬೆಲ್ ಅಣುಸ್ಥಾವರದ ಪರಮಾಣು ರಿಯಾಕ್ಟರ್ ಕಾರ್ಯಾರಂಭ
ಸಂಧಾನದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ರಷ್ಯಾ, ಈ ಕೂಡಲೇ ಉಕ್ರೇನ್ ಪಡೆಗಳು ಶಸ್ತ್ರಾಸ್ತ್ರವನ್ನು ತ್ಯಜಿಸಿ, ಪ್ರತಿದಾಳಿ ನಿಲ್ಲಿಸಿ, ಶರಣಾಗತಿಯಾದರೆ ಸಂಧಾನಕ್ಕೆ ಸಿದ್ದ ಎನ್ನುವ ಮಾತು ರಷ್ಯಾ ಕಡೆಯಿಂದಲೂ ಬಂದಿದೆ. ಚೆರ್ನೋಬೆಲ್ ಅಣುಸ್ಥಾವರದ ಪರಮಾಣು ರಿಯಾಕ್ಟರ್ ಕಾರ್ಯಾರಂಭ ಮಾಡಿದ್ದನ್ನು ಪರಿಶೀಲಿಸಿ ಖಚಿತ ಪಡಿಸಿಕೊಂಡ ನಂತರ ರಷ್ಯಾ ಸಂಧಾನಕ್ಕೆ ನಾವೂ ಸಿದ್ದ ಎನ್ನುವ ಮಾತನ್ನು ಮುಂದಿಟ್ಟಿದೆ. (ಚಿತ್ರ: ಪಿಟಿಐ)

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೂಚನೆ
"ಬೆಲಾರಸ್ ರಾಜಧಾನಿ ಮಿನ್ಸ್ಕ್ ಅಥವಾ ಇನ್ನಾವುದಾದರೂ ಗೌಪ್ಯ ನಗರದಲ್ಲಿ ಸಂಧಾನ ನಡೆಸಲು ನಾವು ಸಿದ್ದ. ನಮ್ಮ ಅಧ್ಯಕ್ಷರ ಸೂಚನೆಯ ಮೇರೆಗೆ ಅವರ ವಕ್ತಾರರಾದ ಟಿಮಿಟ್ರಿ ಪೆಸ್ಕೋವ್ ಉನ್ನತ ಮಟ್ಟದ ಸಂಧಾನ ನಿಯೋಗವೊಂದನ್ನು ರಚಿಸಿದ್ದಾರೆ. ಈ ನಿಯೋಗವು ಬೆಲಾರಸ್ ಗೆ ತೆರಳಿ, ಉಕ್ರೇನಿನ ಅಧ್ಯಕ್ಷ ಅಥವಾ ಅವರ ಪ್ರತಿನಿಧಿ ಜೊತೆಗೆ ಆಕ್ರಮಣ ನಿಲ್ಲಿಸುವ ಬಗ್ಗೆ ಚರ್ಚೆ ನಡೆಸಲಿದೆ"ಎಂದು ರಷ್ಯಾ ವಿದೇಶಾಂಗ ಖಾತೆಯ ಸಚಿವ ಸರ್ಗೀ ಲಾವ್ರೊವ್ ತಿಳಿಸಿದ್ದಾರೆ. ಆ ಮೂಲಕ, ಯುದ್ದ ಆರಂಭವಾದ ಕೆಲವೇ ದಿನಗಳಲ್ಲಿ ಅಂತ್ಯವಾಗುವ ಶುಭಸುದ್ದಿ ಬರುತ್ತಿದೆ. (ಚಿತ್ರ: ಪಿಟಿಐ)












Click it and Unblock the Notifications