ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲಿಗೆ ಬುದ್ಧಿ ಹೇಳುತ್ತಿರುವ ರಷ್ಯನ್ ಸೈನಿಕರು; ಉಕ್ರೇನಿಗರಿಗೆ ಗೆಲುವಿನ ದಿನ ಸನಿಹವಾಯ್ತಾ?

|
Google Oneindia Kannada News

ನವದೆಹಲಿ, ಸೆ. 14: ಫೆಬ್ರವರಿ ತಿಂಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಯುದ್ಧ 15 ದಿನದಲ್ಲಿ ಮುಗಿದುಹೋಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಡೆಯುತ್ತಿರುವುದೇ ಬೇರೆ. ಆರು ತಿಂಗಳಾದರೂ ಯುದ್ಧ ನಡೆಯುತ್ತಲೇ ಇದೆ. ಅಷ್ಟೇ ಅಲ್ಲ, ಉಕ್ರೇನ್ ಹೊಸ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿದ್ದರೆ ರಷ್ಯಾದವರು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ ಎಂಬಂತಹ ವರದಿಗಳು ಬರುತ್ತಿವೆ.

2015ರಲ್ಲಿ ಉಕ್ರೇನ್‌ನಲ್ಲಿದ್ದ ಕ್ರಿಮಿಯಾ ಪ್ರದೇಶವನ್ನು ರಷ್ಯಾ ಆಕ್ರಮಿಸಿಕೊಂಡಿತ್ತು. ಆಗ ಉಕ್ರೇನ್ ಯಾವ ಪ್ರತಿರೋಧವನ್ನೂ ಒಡ್ಡಲು ಆಗಿರಲಿಲ್ಲ. ಈ ಬಾರಿಯೂ ಉಕ್ರೇನ್ ಹೆಚ್ಚು ಪ್ರತಿರೋಧ ಇಲ್ಲದೇ ಶರಣಾಗಬಹುದು ಎಂಬ ರಷ್ಯಾ ಎಣಿಕೆ ಸುಳ್ಳಾಗಿ ಹೋಗಿದೆ.

ಅಧಿಕಾರಿಯ ಪ್ರಾಣ ಉಳಿಸಲು ಸಾವಿನ ನಾಟಕ ಕಟ್ಟಿದ ರಷ್ಯನ್ನರುಅಧಿಕಾರಿಯ ಪ್ರಾಣ ಉಳಿಸಲು ಸಾವಿನ ನಾಟಕ ಕಟ್ಟಿದ ರಷ್ಯನ್ನರು

ಆರಂಭದಲ್ಲಿ ರಷ್ಯಾ ಬರಸಿಡಿಲಿನಂತೆ ದಾಳಿ ಮಾಡಿ ಹಲವು ನಗರ, ಪಟ್ಟಣ, ಗ್ರಾಮಗಳನ್ನು ಮಿಂಚಿನಂತೆ ವಶಪಡಿಸಿಕೊಳ್ಳುತ್ತಾ ಹೋಗಿತ್ತು. ಆದರೆ, ಈಗ ಉಕ್ರೇನ್ ಸೇನಾ ಪಡೆಗಳು ಮತ್ತೆ ಮರಳಿ ಪ್ರದೇಶಗಳನ್ನು ಹತೋಟಿಗೆ ತೆಗೆದುಕೊಳ್ಳುತ್ತಿವೆ.

Ukraines Renewed Attack, Sad State of Demoralised Russian Soldiers

ನಿರುತ್ಸಾಹಿ ರಷ್ಯನ್ ಸೈನಿಕರು
ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಬಲಾಕ್ಲಿಯಾ ಎಂಬ ನಗರದಿಂದ ಪತ್ರಕರ್ತರೊಬ್ಬರು ಮಾಡಿರುವ ವರದಿ ನೋಡಿದರೆ ರಷ್ಯನ್ ಸೈನಿಕರು ಯುದ್ಧೋತ್ಸಾಹ ಕಳೆದುಕೊಂಡು ಪಲಾಯನ ಹೇಳುತ್ತಿರುವಂತಿದೆ.

ಅಲ್ಲಲ್ಲೇ ನಿಂತಿರುವ ಮಿಲಿಟರಿ ವಾಹನಗಳು, ಟೇಬಲ್‌ಗಳ ಮೇಲೆ ಇಟ್ಟಿರುವ ಆಹಾರ, ಕಚೇರಿ ನೆಲದಲ್ಲಿ ಬಿದ್ದ ಲೆಟರ್‌ಗಳು, ಆಚೆ ಒಣಗಿಹಾಕಿರುವ ಬಟ್ಟೆಗಳು, ಇವೆಲ್ಲವೂ ಬಲಾಕ್ಲಿಯಾ ನಗರದಲ್ಲಿ ಕಾಣುವ ದೃಶ್ಯಗಳು. ಇಲ್ಲಿ ವಾಸಿಸುತ್ತಿರುವ ಜನರು ದಿಢೀರನೇ ಊರು ತೊರೆದು ಹೋದರೆ ಹೇಗಿರುತ್ತೋ ಅಂಥ ಸ್ಥಿತಿಯಲ್ಲಿದೆ ಬಲಾಕ್ಲಿಯಾ ಪಟ್ಟಣ.

ಯಾವುದೋ ಕಾಲದ ಮದ್ದುಗುಂಡು ಖರೀದಿಸುತ್ತಿರುವ ರಷ್ಯಾ; ಕಾರಣವೇನು?ಯಾವುದೋ ಕಾಲದ ಮದ್ದುಗುಂಡು ಖರೀದಿಸುತ್ತಿರುವ ರಷ್ಯಾ; ಕಾರಣವೇನು?

ಬಲಾಕ್ಲಿಯಾ ಪಟ್ಟಣ ಹೆಚ್ಚೂಕಡಿಮೆ ರಷ್ಯಾ ನಿಯಂತ್ರಣದಲ್ಲಿತ್ತು. ಈಗ ಕೆಲ ದಿನಗಳಿಂದ ಉಕ್ರೇನ್ ಸೇನಾಪಡೆಗಳ ತೀವ್ರ ಪ್ರತಿದಾಳಿಯಿಂದ ರಷ್ಯನ್ ಸೈನಿಕರು ಕಂಗಾಲಾಗಿದ್ದಾರೆ. ಬಲಾಕ್ಲಿಯಾ ಮಾತ್ರವಲ್ಲ, ಹಲವು ಪ್ರಮುಖ ಪ್ರದೇಶಗಳಿಂದ ರಷ್ಯನ್ ಸೇನಾ ಪಡೆಗಳನ್ನು ಉಕ್ರೇನಿಗರು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ukraines Renewed Attack, Sad State of Demoralised Russian Soldiers

ರಷ್ಯನ್ ಸೈನಿಕನ ದಯನೀಯ ಸ್ಥಿತಿ
ಬಲಾಕ್ಲಿಯಾ ನಗರದಲ್ಲಿ ರಷ್ಯನ್ ಸೈನಿಕ ತನ್ನ ಕಮಾಂಡರ್ ಜೊತೆ ಮಾತನಾಡಿದ ವಿಚಾರವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. "ನಮ್ಮನ್ನು ಬಿಟ್ಟು ನೀವು ಹೋಗಿಬಿಟ್ಟಿರಿ" ಎಂದು ಸೈನಿಕರು ತಮ್ಮ ಹಿರಿಯ ಅಧಿಕಾರಿಗಳ ಮೇಲೆ ಎರಚಾಡಿದ್ದು ಕೇಳಿಸಿತು ಎಂದು ಉಕ್ರೇನ್ ನಿವಾಸಿ ಮಂಗಳವಾರ ಮಾಧ್ಯಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ವ್ಯಕ್ತಿ ಇದ್ದ ಅಪಾರ್ಟ್ಮೆಂಟ್ ಬ್ಲಾಕ್ ಸಮೀಪದಲ್ಲೇ ಮಿಲಿಟರಿ ವಾಹನವೊಂದರಲ್ಲಿ ಕೂತು ರಷ್ಯನ್ ಸೈನಿಕರು ರೇಡಿಯೋ ಮೂಲಕ ತಮ್ಮ ಕಮಾಂಡರ್‌ಗಳೊಂದಿಗೆ ಮಾತನಾಡುತ್ತಿದ್ದರಂತೆ.

"ಅವರು ಹೋರಾಡಲು ಬಂದಿದ್ದರೆ, ರಷ್ಯಾ ನವನಿರ್ಮಾಣಕ್ಕೆ ಬಂದಿದ್ದರೆ ಬಲಾಕ್ಲಿಯಾದಲ್ಲಿ ನಿಂತು ಯಾಕೆ ಯುದ್ಧ ಮಾಡುತ್ತಿಲ್ಲ?" ಎಂದು ಆ ವ್ಯಕ್ತಿ ಪ್ರಶ್ನಿಸಿದ್ದಾರೆ.

ಉಕ್ರೇನ್ ಸೇನಾ ಪಡೆಗಳು ಮುನ್ನುಗ್ಗುತ್ತಿರುವಂತೆಯೇ ರಷ್ಯನ್ ರಕ್ಷಣಾ ಪಡೆಗಳ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು, ವೈಯಕ್ತಿಕ ವಸ್ತುಗಳನ್ನು ಇದ್ದಲ್ಲಿಯೇ ಬಿಟ್ಟು ಸಿಕ್ಕ ಸಿಕ್ಕ ವಾಹನಗಳನ್ನು ಹೋಗುತ್ತಿದ್ದಾರಂತೆ.

ಆರು ತಿಂಗಳಿಗೂ ಹೆಚ್ಚು ಕಾಲ ಬಲಾಕ್ಲಿಯಾವನ್ನು ವಶಪಡಿಸಿಕೊಂಡಿದ್ದ ರಷ್ಯನ್ ಸೈನಿಕರಲ್ಲಿ ಈಗ ಹೋರಾಡುವ ಉತ್ಸಾಹವೇ ನಿಂತು ಹೋಗಿದೆ. ಅವರು ಭಯಪಟ್ಟಿದ್ದಾರೆ ಎಂದು ಉಕ್ರೇನ್‌ನ ಹಿರಿಯ ನಾಗರಿಕ ಇಗೋರ್ ಲೆವ್ಚೆಂಕೋ ವಿವರಿಸಿದ್ದಾರೆ.

ಕೆಲ ಪ್ರತ್ಯಕ್ಷದರ್ಶಿಗಳ ಪ್ರಕಾರ ರಷ್ಯನ್ ಸೈನಿಕರು ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಾರೆ. ಆತಂಕಗೊಂಡವರಂತೆ, ಭಯ ಪಟ್ಟವರಂತೆ ತೋರುತ್ತಾರಂತೆ.

ರಷ್ಯನ್ ಸೈನಿಕರು ಮಾನಸಿಕವಾಗಿ ಕುಗ್ಗಲು ಕಾರಣ?
ರಷ್ಯಾ ಸೈನಿಕರು ಮಾನಸಿಕವಾಗಿ ಕುಗ್ಗಿ ಹೋಗಲು ಕಾರಣ ಇಲ್ಲದೇ ಇಲ್ಲ. ಒಂದು ಅವರು ಉಕ್ರೇನ್ ಸೇನಾ ಪಡೆಗಳಿಂದ ಇಷ್ಟು ಪ್ರತಿರೋಧ ನಿರೀಕ್ಷಿಸಿರಲಿಲ್ಲ. ದೀರ್ಘ ಯುದ್ಧಕ್ಕೆ ಮಾನಸಿಕವಾಗಿ ಸಿದ್ಧವಿರಲಿಲ್ಲ. ಮೇಲಾಗಿ ಉಕ್ರೇನ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಉದ್ದೇಶವನ್ನು ಹಿರಿಯ ಸೇನಾಧಿಕಾರಿಗಳು ಸೈನಿಕರಿಗೆ ತಿಳಿಸಿರಲಿಲ್ಲ. ಹೀಗಾಗಿ, ದೊಡ್ಡ ಯುದ್ಧಕ್ಕೆ ರಷ್ಯನ್ ಸೈನಿಕರು ಯಾವತ್ತೂ ಅಣಿಗೊಂಡಿರಲಿಲ್ಲ ಎಂದು ಹೇಳಲಾಗುತ್ತದೆ. ಅವರು ಮಾನಸಿಕವಾಗಿ ಕುಗ್ಗಿಹೋಗಲು, ಯುದ್ಧದಿಂದ ಪಲಾಯನ ಮಾಡಲು ಇದೇ ಕಾರಣ ಇರಬಹುದು. ರಷ್ಯಾ ಆಕ್ರಮಣ ಮಾಡಿದ ಸಂದರ್ಭದಲ್ಲೇ ಕೆಲವರು ಇಂಥ ಸ್ಥಿತಿ ಬರಬಹುದು ಎಂದು ಭವಿಷ್ಯ ನುಡಿದಿದ್ದರು.

ಇನ್ನೊಂದೆಡೆ, ಉಕ್ರೇನಿಗರಿಗೆ ಈ ಯುದ್ಧ ಸ್ವಂತ ನೆಲ ಉಳಿಸಿಕೊಳ್ಳುವ ಹೋರಾಟ. ಹೀಗಾಗಿ, ಅವರಿಗೆ ಸಹಜವಾಗಿ ಹೆಚ್ಚು ಕೆಚ್ಚು ಇದೆ. ಆರು ತಿಂಗಳಾದರೂ ಅವರ ಉತ್ಸಾಹ ಹೆಚ್ಚಾಗಿದೆಯೇ ಹೊರತು ಕಡಿಮೆ ಆಗಿಲ್ಲ.

ಉಕ್ರೇನ್ ರಣತಂತ್ರ ಭಿನ್ನ
ಈಗ ರಷ್ಯನ್ ಸೈನಿಕರು ಮಾನಸಿಕವಾಗಿ ಕುಗ್ಗಿಹೋಗಿರುವುದು ಉಕ್ರೇನ್‌ಗೆ ಅನುಕೂಲವಾಗಿದೆ. ಆದರೆ, ಇದೊಂದನ್ನೇ ನೆಚ್ಚಿಕೊಂಡು ಉಕ್ರೇನ್ ಕೂತಿಲ್ಲ. ಉಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಭಾಗದ ಪ್ರದೇಶಗಳಲ್ಲಿ ರಷ್ಯನ್ ಸೈನಿಕರ ಬಲ ಹೆಚ್ಚು ಇದೆ. ಆದರೆ, ಉತ್ತರ ಹಾಗೂ ಇತರ ಕೆಲ ಪ್ರದೇಶಗಳಲ್ಲಿ ರಷ್ಯನ್ ಪಡೆಯ ಸ್ಥಿತಿ ದುರ್ಬಲ ಇದೆ. ಇಂಥ ದೌರ್ಬಲ್ಯ ಜಾಗಗಳನ್ನು ಗುರುತಿಸಿ ರಷ್ಯನ್ ಸೇನಾ ಪಡೆಗಳ ಮೇಲೆ ಉಕ್ರೇನಿಗರು ದಾಳಿ ಮಾಡುವ ತಂತ್ರ ಅನುಸರಿಸುತ್ತಿದ್ಧಾರೆ. ಇಂಥ ಪ್ರದೇಶಗಳಲ್ಲಿ ಉಕ್ರೇನ್ ರಕ್ಷಣಾ ತಂತ್ರದ ಬದಲು ಆಕ್ರಮಣ ತಂತ್ರ ಅನುಸರಿಸುತ್ತಿದ್ದಾರೆ.

ಉಕ್ರೇನ್‌ನ ರಕ್ಷಣಾ ಉಪಸಚಿವೆ ಹಾನ್ನ ಮಾಲ್ಯಾರ್ ಈ ವಿಚಾರವನ್ನು ತಿಳಿಸಿದ್ದಾರೆ. "ಉಕ್ರೇನ್ ಸೇನೆ ನ್ಯಾಯಯುತ ಯುದ್ಧ ಮಾಡುತ್ತಿರುವುದರಿಂದ ಹುಮ್ಮಸ್ಸು ಹೆಚ್ಚಿದೆ. ಆದರೆ ರಷ್ಯಾ ಸೈನಿಕರು ಇಲ್ಲಿಗೆ ಬಂದ ಬಳಿಕ ತಮ್ಮ ದೇಶದ ಸಂಚು ತಿಳಿದು ವಂಚನೆಗೊಳಗಾದ ಮನಃಸ್ಥಿತಿಯಲ್ಲಿದ್ದಾರೆ" ಎಂದು ಹಾನ್ನಾ ಹೇಳುತ್ತಾರೆ.

ಗ್ರಾಮವೊಂದರ ಸ್ಥಿತಿ:
ಉಕ್ರೇನ್‌ನಲ್ಲಿ ರಷ್ಯಾ ಪರವಾದ ಪ್ರದೇಶಗಳುಂಟು. ಅದರಲ್ಲಿ ಲುಹಾನ್ಸ್ಕ್ ಒಂದು. ಇದು ಸ್ವತಂತ್ರ ದೇಶ ಎಂದು ಸ್ವಯಂಘೋಷಿಸಿಕೊಂಡಿದೆ. ಈ ಪ್ರದೇಶವನ್ನು ರಷ್ಯಾ ಸೇನೆ ಹತೋಟಿಗೆ ತೆಗೆದುಕೊಂಡಿದೆ. ಅಲ್ಲಿನ ಒಂದು ಗ್ರಾಮದ ಜನರು ರಷ್ಯನ್ ಸೈನಿಕರ ಪರಿಸ್ಥಿತಿ ಹೇಗಿತ್ತು, ಹೇಗಾಯ್ತು ಎಂಬುದನ್ನು ಮಾಧ್ಯಮಗಳಲ್ಲಿ ವಿವರಿಸಿದ್ದಾರೆ.

"ನಾನು ಹಣ ಸಂಪಾದಿಸಲು ಮಾತ್ರ ಈ ಹೋರಾಟ ಮಾಡುತ್ತಿದ್ದೇನೆ ಅಂತ ಒಬ್ಬ ಸೈನಿಕ ಹೇಳಿದ... ರಷ್ಯಾದ ವಿಸ್ತರಣೆ ವಿಚಾರವಾಗಿ ಯಾವ ಸೈನಿಕರೂ ನಮ್ಮ ಗ್ರಾಮಸ್ಥರಲ್ಲಿ ಹೇಳುವ ಪ್ರಯತ್ನವನ್ನೇ ಮಾಡಲಿಲ್ಲ...

"ನಮ್ಮ ಗ್ರಾಮದಿಂದ ಹೊರಹೋದ ನಿವಾಸಿಗಳ ಮನೆಗಳನ್ನು ರಷ್ಯನ್ ಸೈನಿಕರು ಆಕ್ರಮಿಸಿಕೊಂಡರು. ಒಂದು ಮನೆಯಲ್ಲಿ 12 ಸೈನಿಕರು ಇರುತ್ತಿದ್ದರು. ಸ್ಥಳೀಯರ ಕಾರುಗಳನ್ನು ಬಳಸಿ ತಿರುಗಾಡುತ್ತಿದ್ದರು. ತಮಗೆ ಬೇಕಾದ್ದನ್ನು ತೆಗೆದುಕೊಂಡು ಆರಾಮವಾಗಿ ಇದ್ದರು...

"ಆದರೆ, ಉಕ್ರೇನ್ ಸೇನೆ ಅನಿರೀಕ್ಷಿತವಾಗಿ ಆಕ್ರಮಣ ಮಾಡಿದಾಗ ಇಲ್ಲಿನ ಸೈನಿಕರಿಗೆ ಆಘಾತವಾಗಿತ್ತು. ಅವರಿಗೆ ಇಂಥ ಸ್ಥಿತಿ ಬರುತ್ತೆ ಎಂದು ಊಹಿಸಿಯೂ ಇರಲಿಲ್ಲ. ಪ್ರತಿಹೋರಾಟ ಮಾಡುವುದಾ, ರಕ್ಷಣೆ ಮಾಡುವುದಾ ಅಥವಾ ಮರಳಿ ಹೋಗುವುದಾ ಎಂಬುದು ಅವರಲ್ಲಿ ಸ್ಪಷ್ಟ ಇರಲಿಲ್ಲ. ತಮ್ಮ ಎಲ್ಲಾ ವಸ್ತುಗಳನ್ನು ಇದ್ದಲ್ಲಿಯೇ ಬಿಟ್ಟು ಸಿಕ್ಕ ಸಿಕ್ಕ ವಾಹನಗಳಲ್ಲಿ ಓಡಿ ಹೋದರು. ಕೆಲವರು ತಮ್ಮ ಮಿಲಿಟರಿ ಉಡುಗೆಗಳನ್ನು ಕಳಚಿ ನಾಗರಿಕರ ಬಟ್ಟೆಗಳನ್ನು ತೊಟ್ಟು ಹೋದರು" ಎಂದು ಊರಿನ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ವಿವರಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Russia seems to be losing the war against Ukraine. Its soldiers are a demoralised lot, running away from the battle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X