ಜೋ ಬೈಡನ್‌ಗೆ ಉಕ್ರೇನ್ ಅಧ್ಯಕ್ಷರ ದೂರವಾಣಿ ಕರೆ
ಕೀವ್ (ಉಕ್ರೇನ್), ಮಾರ್ಚ್ 06; ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಮುಂದುವರೆದಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ನಡೆಸುತ್ತಲೇ ಇದೆ. ಈ ಹಿನ್ನಲೆಯಲ್ಲಿ ಉಕ್ರೇನ್ ಅಧ್ಯಕ್ಷರು ಅಮೆರಿಕ ಅಧ್ಯಕ್ಷರಿಗೆ ಕರೆ ಮಾಡಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಭದ್ರತೆ, ಆರ್ಥಿಕ ನೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ.
ಈ ವಾರದಲ್ಲಿ ಎರಡನೇ ಬಾರಿಗೆ ಉಕ್ರೇನ್ ಅಧ್ಯಕ್ಷರು ಜೋ ಬೈಡನ್ ಜೊತೆ ಮಾತುಕತೆ ನಡೆಸಿದ್ದಾರೆ. ರಷ್ಯಾದ ಮೇಲೆ ನಿರ್ಬಂಧ ಹೇರುವ ಕುರಿತು ಉಕ್ರೇನ್ ಅಮೆರಿಕವನ್ನು ಒತ್ತಾಯಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು ಅರ್ಧಗಂಟೆಗಳ ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿದ್ದಾರೆ. ಗುರುವಾರ ನಡೆದ ದೂರವಾಣಿ ಮಾತುಕತೆ ವೇಳೆ ಜೋ ಬೈಡನ್ ಝಪೋರಿಝಿಯಾ ಪರಮಾಣು ಸ್ಥಾವರದ ಸ್ಥಿತಿಗತಿ ಕುರಿತು ಮಾಹಿತಿ ಪಡೆದಿದ್ದರು.
ಝಪೋರಿಝಿಯಾ ಪರಮಾಣು ಸ್ಥಾವರದ ಬೆಂಕಿಯ ಪರಿಸ್ಥಿತಿ ಕುರಿತು ಶನಿವಾರ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ. ಉಳಿದಂತೆ ಉಕ್ರೇನ್‌ಗೆ ಆರ್ಥಿಕ ನೆರವು, ಭದ್ರತೆ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ.
Ukraine's President Volodymyr Zelensky talked to US President Joe Biden about "the issues of security, financial support for Ukraine and the continuation of sanctions against Russia," as per his tweet.
— ANI (@ANI) March 6, 2022
ಶನಿವಾರ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಸಹ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಕರೆ ಮಾಡಿದ್ದರು. ಶುಕ್ರವಾರ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಮಾತುಕತೆಯ ವಿವರಗಳನ್ನು ಪಡೆದಿದ್ದರು.
ಉಕ್ರೇನ್‌ಗೆ ಅಮೆರಿಕೆ ನೆರವು; ಉಕ್ರೇನ್‌ಗೆ ಅಮೆರಿಕದ ಸಂಸದರು ಹೆಚ್ಚುವರಿ 10 ಶತಕೋಟಿ ಡಾಲರ್ ಪ್ಯಾಕೇಜ್ ನೆರವು ನೀಡುವ ಘೋಷಣೆ ಮಾಡಿದ್ದಾರೆ. ಆದರೆ ಇಂಧನ ಆಮದಿಗೆ ನಿಷೇಧ ಹೇರುವ ಕ್ರಮವನ್ನು ಶ್ವೇತಭವನವು ತಳ್ಳಿ ಹಾಕಿದೆ. ನಿಷೇಧ ಹೇರಿದರೆ ಇಂಧನ ಬೆಲೆಗಳು ಹೆಚ್ಚಾಗಿ ಆರ್ಥಿಕ ಸಂಕಷ್ಟದಲ್ಲಿರುವ ಅಮೆರಿಕದ ಪ್ರಜೆಗಳಿಗೆ ತೊಂದರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಮಾಡಿತ್ತು. ವಿವಿಧ ದೇಶಗಳು ಉಕ್ರೇನ್‌ಗೆ ಹಣಕಾಸು, ಶಸ್ತ್ರಾಸ್ತ್ರ ನೆರವನ್ನು ಘೋಷಣೆ ಮಾಡಿವೆ. ರಷ್ಯಾದ ನೀತಿಯನ್ನು ಖಂಡಿಸಿವೆ. ವಿವಿಧ ರಾಷ್ಟ್ರಗಳು ರಷ್ಯಾ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆ.
ಕದನ ವಿರಾಮ ಉಲ್ಲಂಘನೆ; ಶನಿವಾರ ರಷ್ಯಾ ನಾಗರಿಕರು ಸ್ಥಳಾಂತರಗೊಳ್ಳಲು ಅನುಕೂಲವಾಗುವಂತೆ ಕೆಲವು ಗಂಟೆಗಳ ಕಾಲ ಯುದ್ಧ ವಿರಾಮ ಘೋಷಣೆ ಮಾಡಿತ್ತು. ಈ ಸಮಯದಲ್ಲಿ ಮಾಸ್ಕೋದ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿವೆ. ಮಾರಿಯುಪೋನ್‌ನಲ್ಲಿ ಜನರ ಸ್ಥಳಾಂತರಕ್ಕೆ ರಷ್ಯಾ ಅಡ್ಡಿಪಡಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪ ಮಾಡಿದ್ದಾರೆ.
ಕದನ ವಿರಾಮ ಘೋಷಣೆ ಮಾಡಿದ್ದ ರಷ್ಯಾ ಪಡೆಗಳು ಮಾರಿಯುಪೋನ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೆಲ್ ದಾಳಿಯನ್ನು ಮುಂದುವರೆಸಿದ್ದಾರೆ. ಆದ್ದರಿಂದ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾನವೀಯ ಪರಿಹಾರ ಕಾರ್ಯ, ನಾಗರಿಕರು ನಗರದಿಂದ ಹೊರ ಹೋಗಲು ರಷ್ಯಾ ಸರ್ಕಾರ ಶನಿವಾರ ಅವಕಾಶ ನೀಡಿತ್ತು. ಉಕ್ರೇನ್‌ನ ಮಾರಿಯುಪೋಲ್, ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆ ಕದನ ವಿರಾಮ ಘೋಷಣೆ ಮಾಡಿತ್ತು.
ರಷ್ಯಾ ಮಾರಿಯುಪೋನ್ ನಗರದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿತ್ತು. ಇದರಿಂದಾಗಿ ಅಪಾರ ಹಾನಿಯಾಗಿತ್ತು. ನಗರಕ್ಕೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಮಾನವೀಯ ಕಾರ್ಯ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮೇಯರ್ ಆಗ್ರಹಿಸಿದ್ದರು. ಆದ್ದರಿಂದ ಕದನ ವಿರಾಮ ಘೋಷಣೆ ಮಾಡಲಾಗಿತ್ತು.












Click it and Unblock the Notifications