ದೇಶವನ್ನು ಕಾಪಾಡಲು ಬಯಸುವ ಪ್ರತಿಯೊಬ್ಬರಿಗೂ ಶಸ್ತ್ರಾಸ್ತ್ರ ನೀಡುತ್ತೇವೆ ಎಂದ ಉಕ್ರೇನ್
ಕೀವ್, ಫೆಬ್ರವರಿ 25:ದೇಶವನ್ನು ಕಾಪಾಡಲು ಬಯಸುವ ಪ್ರತಿಯೊಬ್ಬರಿಗೂ ಶಸ್ತ್ರಾಸ್ತ್ರವನ್ನು ನೀಡುತ್ತೇವೆ ಎಂದು ಉಕ್ರೇನ್ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು, 'ನಮ್ಮ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ಸಿದ್ಧವಾಗಿರಿ. ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ' ಎಂದು ತಿಳಿಸಿದ್ದಾರೆ.
'ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ದೇಶವನ್ನು ರಕ್ಷಿಸಲು ಸಿದ್ಧವಾಗಿರುವ ನಾಗರಿಕರ ಮೇಲಿನ ಎಲ್ಲಾ ನಿರ್ಬಂಧಗಳನ್ನು ನಾವು ತೆಗೆದುಹಾಕುತ್ತೇವೆ' ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ. ದೀರ್ಘಕಾಲದ ಬಿಕ್ಕಟ್ಟಿನ ಬಳಿಕ ರಷ್ಯಾ ಗುರುವಾರ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ರಷ್ಯಾದ ಪಡೆಗಳು ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶ ಮಾಡಿವೆ.
ಈ ಮಧ್ಯೆ ರಷ್ಯಾದ ಆಕ್ರಮಣವನ್ನು ಎದುರಿಸಲು ಸಿದ್ಧವಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು, ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕು ಮುನ್ನ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಾಜಿ ಜರ್ಮನಿಯ ರೀತಿಯಲ್ಲಿಯೇ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ದುಷ್ಟ ಮಾರ್ಗವನ್ನು ರಷ್ಯಾ ಅನುಸರಿಸಿದೆ. ಆದರೆ, ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಮಾಸ್ಕೋ ಯಾವ ಕ್ರಮ ಕೈಗೊಂಡರೂ, ಉಕ್ರೇನ್ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ ಉಕ್ರೇನ್ ಅಧ್ಯಕ್ಷರು ಹೇಳಿದ್ದರು.
ಹಲವು ದಿನಗಳಿಂದ ಉಕ್ರೇನ್ - ರಷ್ಯಾ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಅದೀಗ ಎಲ್ಲ ಎಲ್ಲೆಗಳನ್ನು ಮೀರಿ ಕಟ್ಟೆಯೊಡೆದಿದ್ದು, ರಷ್ಯಾ ಉಕ್ರೇನ್ ಮೇಲೆ ಅಧಿಕೃತವಾಗಿ ಯುದ್ಧ ಸಾರಿದ್ದು, ವೈಮಾನಿಕ ದಾಳಿ ಆರಂಭಿಸಿದೆ. ರಷ್ಯಾದ ಈ ಕ್ರಮ ಈಗ ವಿಶ್ವವನ್ನು ತಲ್ಲಣಗೊಳಿಸಿದ್ದು, ಯುದ್ಧದ ಕಾರ್ಮೋಡ ಕವಿದಿದೆ. ವಿಶ್ವಸಂಸ್ಥೆಯ ಮನವಿಗೆ ಕ್ಯಾರೇ ಎನ್ನದ ರಷ್ಯಾ ಅಧ್ಯಕ್ಷ ಪುಟಿನ್, ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವ್ಯವಹಾರದಲ್ಲಿ ತಲೆ ಹಾಕದಂತೆ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಈ ನಡುವೆ ಎರಡೂ ರಾಷ್ಟ್ರಗಳ ನಡುವಣ ಯುದ್ಧವನ್ನು ನಿಲ್ಲಿಸಲು ಕಸರತ್ತುಗಳು ಆರಂಭವಾಗಿವೆ. ಈ ನಡುವೆ ಈಗ ಬಲಾಢ್ಯ ಶಕ್ತಿಯಾಗಿ ಬೆಳೆಯುತ್ತಿರುವ ಭಾರತ ಈ ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭಿಸಿದೆ. ಅಷ್ಟೇ ಅಲ್ಲ ತಟಸ್ಥ ನಿಲುವು ತಾಳಿ ಎರಡೂ ರಾಷ್ಟ್ರಗಳಿಗೆ ಯುದ್ಧ ಬೇಡ ಎಂದು ಮನವಿ ಮಾಡಿದೆ. ಭಾರತದ ಈ ನಿಲುವನ್ನು ಸ್ವಾಗತಿಸಿರುವ ರಷ್ಯಾ, ದೇಶದ ನಡೆ ಕೊಂಡಾಡಿದ್ದು ಸಂಬಂಧ ಹೀಗೆ ಮುಂದುವರೆಸುವುದಾಗಿ ತಿಳಿಸಿದೆ. ಇನ್ನು ಉಕ್ರೇನ್ ಭಾರತ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಕರೆ ನೀಡಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದ ಪ್ರಮುಖರು ಹಾಗೂ ಭದ್ರತಾ ಪಡೆ ಮುಖ್ಯಸ್ಥರು, ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಮಹತ್ವದ ವಿಚಾರ ಎಂದರೆ ಇಂದು ರಾತ್ರಿಯೇ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಜತೆ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ರಾತ್ರಿಯ ಈ ಮಾತುಕತೆ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೋದಿ ಪುಟಿನ್ ಜತೆ ಯಾವ ವಿಷಯ ಚರ್ಚಿಸಲಿದ್ದಾರೆ, ಯುದ್ಧ ನಿಲ್ಲಿಸಲು ಏನಾದರೂ ಹೇಳುತ್ತಾರೆ ಎಂಬುದು ಬಹುಮುಖ್ಯ ಅಂಶವಾಗಿದೆ.












Click it and Unblock the Notifications