ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವಂತೆ ಬೇಡಿಕೊಂಡ ಝೆಲೆನ್ಸ್ಕಿ!
ನವದೆಹಲಿ: ಜಗತ್ತೇ ರಷ್ಯಾ-ಉಕ್ರೇನ್ ಯುದ್ಧದ ಕಡೆ ಗಮನ ನೆಟ್ಟಿದೆ. 1 ವರ್ಷ ಕಳೆದರೂ ಎರಡೂ ದೇಶಗಳ ನಡುವೆ ಸಂಧಾನ ನಡೆದಿಲ್ಲ, ಯುದ್ಧ ಕೊನೆಯಾಗುತ್ತಿಲ್ಲ. ಆದರೆ ಈ ಹೊತ್ತಲ್ಲೇ ಭಾರತದ ನೆರವಿಗೆ ಉಕ್ರೇನ್ ಬೇಡಿಕೊಂಡಿದೆ. ಹೇಗಾದರೂ ಯುದ್ಧ ನಿಲ್ಲಿಸಿ ಎಂದು ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಭಾರತದ ಬಳಿ ಅಂಗಲಾಚಿದ್ದಾರೆ.
ಈ ಮೊದಲಿನಿಂದಲೂ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂಬುದೇ ಭಾರತದ ನಿಲುವಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಹಲವು ವೇದಿಕೆಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ್ದಾರೆ. ಈ ನಡುವೆ ಭಾರತದ ನೆರವಿಗೆ ಉಕ್ರೇನ್ ಬೇಡಿಕೊಂಡಿದ್ದು, ಯುದ್ಧದಿಂದ ತತ್ತರಿಸಿರುವ ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡಿ ಎಂದಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪತ್ರ ಬರೆದು ಪ್ರಧಾನಿ ಮೋದಿ (Narendra Modi) ಅವರ ಬಳಿ ಮನವಿ ಸಲ್ಲಿಸಿದ್ದಾರೆ.

ಭಾರತದ ಸ್ನೇಹ ಈಗ ನೆನಪಾಯ್ತಾ?
ರಷ್ಯಾ ತಮ್ಮ ಮೇಲೆ ಯುದ್ಧ ಸಾರಿದ ನಂತರ ಹಲವು ಬಾರಿ ಭಾರತದ ವಿರುದ್ಧ ಹೇಳಿಕೆ ನೀಡಿತ್ತು ಉಕ್ರೇನ್. ಆದರೆ ಈಗ ಬುದ್ಧಿ ಬಂದಂತೆ ಕಾಣುತ್ತಿದೆ. 4 ದಿನಗಳ ವಿಶೇಷ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬರೆದಿರುವ ಪತ್ರವನ್ನು ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಖಾತೆ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಎರಡೂ ದೇಶಗಳ ಮಧ್ಯೆ ಮಹತ್ವದ ಚರ್ಚೆ ನಡೆದಿದೆ.
ಉಕ್ರೇನ್ ಅಧ್ಯಕ್ಷರ ಮನವಿ ಏನು?
ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಗೆ ಅವಕಾಶ ನೀಡುವಂತೆ ಮನವಿ ಮಾಡಿದೆ ಉಕ್ರೇನ್. ಇದಕ್ಕೆ ಭಾರತ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ ಔಷಧ ಹಾಗೂ ವೈದ್ಯಕೀಯ ಸಾಮಗ್ರಿ ಸೇರಿದಂತೆ ಹೆಚ್ಚುವರಿ ಮಾನವೀಯ ನೆರವಿಗೆ ಉಕ್ರೇನ್ ಪತ್ರದ ಮೂಲಕ ಮನವಿ ಮಾಡಿದೆ. ಉಕ್ರೇನ್‌ನಲ್ಲಿ ಓದುತ್ತಿದ್ದ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ತಾವು ನೆಲೆಸಿರುವ ದೇಶದಲ್ಲೇ ಯುನಿಫೈಡ್ ಸ್ಟೇಟ್ ಕ್ವಾಲಿಫಿಕೇಷನ್ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಭಾರತದ ವಿದ್ಯಾರ್ಥಿಗಳಿಗೆ ರಿಲೀಫ್ ಸಿಕ್ಕಂತಾಗಿದೆ.
ಉಕ್ರೇನ್ ಉಳಿವಿಗೆ ಭಾರತ ಅನಿವಾರ್ಯ
ಉಕ್ರೇನ್‍ನ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಇದೇ ಮೊದಲು ಪೂರ್ವ ಯುರೋಪ್ ರಾಷ್ಟ್ರದ ಪ್ರತಿನಿಧಿಯೊಬ್ಬರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಎಮಿನಿ ಝಪರೋವಾ ಭಾರತಕ್ಕೆ ಬರುವ ಮೊದಲೇ ಹಲವು ವಿಚಾರಗಳನ್ನ ನಿರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲ್ಲಿಸುವಂತೆ ಭಾರತಕ್ಕೆ ಎಮಿನಿ ಮನವಿ ಮಾಡಲಿದ್ದಾರೆ ಎಂದು ಮೊದಲೇ ಚರ್ಚಿಸಲಾಗಿತ್ತು. ಈಗ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ.

'ಭಾರತವೇ ವಿಶ್ವಗುರು' ಎಂದ ಎಮಿನಿ
ಭಾರತ ಹಾಗೂ ಉಕ್ರೇನ್ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ, ಭಾರತದ ಜೊತೆ ಪಯಣಿಸುವುದು ಉಕ್ರೇನ್‌ಗೆ ಬಹುಮುಖ್ಯವಾದ ಸಂಗತಿ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿದ್ದು, ವಿಶ್ವ ಗುರುವಿನ ಸ್ಥಾನವನ್ನು ಅಲಂಕರಿಸಿದೆ ಎನ್ನುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಬೆಳೆದು ನಿಂತಿರುವ ಪರಿಯನ್ನು ವಿವರಿಸಿದ್ದರು. ಹೀಗೆ ಎಮಿನಿ ಝಪರೋವಾ ಭಾರತದ ನಾಯಕತ್ವ ಹೊಗಳಿದ ಕೆಲವೇ ದಿನಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೀಡಿದ್ದ ಪತ್ರವನ್ನೂ ಭಾರತಕ್ಕೆ ಹಸ್ತಾಂತರಿಸಿದ್ದಾರೆ.












Click it and Unblock the Notifications