ತಮ್ಮದೇ ದೇಶದ ಯುದ್ಧ ವಿಮಾನಕ್ಕೆ ಡಿಕ್ಕಿ ಹೊಡೆದ ಪೈಲಟ್‌ಗಳು!
ಯುದ್ಧ ವಿಮಾನಗಳನ್ನು ನಿಭಾಯಿಸುವುದು ಅಂದ್ರೆ ಬೆಂಕಿ ಜೊತೆ ಸರಸ ಆಡಿದಂತೆ ಸರಿ. ಒಂದು ಸ್ವಲ್ಪ ಎಡವಟ್ಟು ಎದುರಾದರೂ ಎಲ್ಲಾ ಧೂಳ್ ಧೂಳ್. ಹೀಗಾಗಿಯೇ ಯುದ್ಧ ವಿಮಾನ ಚಲಾಯಿಸುವ ಪೈಲಟ್‌ಗಳಿಗೆ ಕಠಿಣ ತರಬೇತಿ ನೀಡಲಾಗುತ್ತೆ. ಆದ್ರೆ ಇದೇ ರೀತಿ ತರಬೇತಿ ಪಡೆಯುತ್ತಿದ್ದ ಎರಡು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ, ತರಬೇತಿ ಪಡೆಯುತ್ತಿದ್ದ ಪೈಲಟ್‌ಗಳು ಕೂಡ ಜೀವ ಬಿಟ್ಟಿದ್ದಾರೆ.
ಈ ಭೀಕರ ಘಟನೆ ನಡೆದಿರುವುದು ಯುದ್ಧ ಪೀಡಿತ ಉಕ್ರೇನ್‌ನಲ್ಲಿ. ಅಂದಹಾಗೆ ತರಬೇತಿ ಪಡೆಯುತ್ತಿದ್ದ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಪಶ್ಚಿಮಕ್ಕೆ ಸುಮಾರು 140 ಕಿಲೋ ಮೀಟರ್ ದೂರದ ಝೈಟೊಮಿರ್ ಪ್ರದೇಶದಲ್ಲಿ ಯುದ್ಧ ವಿಮಾನಗಳು ಗುದ್ದಿಕೊಂಡಿವೆ. ಈ ಮೂಲಕ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್‌ಗೆ ಮತ್ತೊಂದು ಶಾಕ್ ಸಿಕ್ಕಿದೆ. ಅವಘಡದಲ್ಲಿ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ವಾಯು ಸೇನೆ ತಿಳಿಸಿದೆ.

ರಷ್ಯಾ ಸೇನೆಯಿಂದ ಡೆಡ್ಲಿ ಅಟ್ಯಾಕ್
ಇಷ್ಟೆಲ್ಲದರ ನಡುವೆ ರಷ್ಯಾ ಸೇನೆ ಕೂಡ ತನ್ನ ಭೀಕರ ದಾಳಿ ಮುಂದುವರಿಸಿದೆ. ರಷ್ಯಾದ ಪಡೆಗಳು ಈಶಾನ್ಯ ಉಕ್ರೇನ್ ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿವೆ. ಇಷ್ಟೇ ಅಲ್ಲ ಪೊಡೊಲಿಯ ಕೆಫೆ ಮೇಲೆ ಶೆಲ್ ದಾಳಿ ನಡೆಸಿದ್ದರಿಂದ ಇಬ್ಬರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಕುಪಿಯಾನ್ಸ್ಕ್ ಉಪನಗರದ ಬಳಿ ದಾಳಿ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಜನರು ಜೀವ ಉಳಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಒಂದೂವರೆ ವರ್ಷ ಕಳೆದರೂ ಉಕ್ರೇನ್ ಜನರಿಗೆ ಯುದ್ಧದಿಂದ ಮುಕ್ತಿ ಸಿಗುತ್ತಿಲ್ಲ. ಈಗಲಾದರೂ ಎಲ್ಲ ಸಂಕಷ್ಟಗಳಿಂದ ಮುಕ್ತಿ ಸಿಗಲಿ ಅಂತಾ ದೇವರಲ್ಲಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಫ್-16 ಗಿಫ್ಟ್ ಕೊಡುತ್ತಿದೆ ಅಮೆರಿಕ
ಶಸ್ತ್ರಾಸ್ತ್ರ ಪೂರೈಕೆ ಮಾಡುವ ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಅಮೆರಿಕ ನಂ.1 ಸ್ಥಾನದಲ್ಲಿದೆ. ಇಂತಿಪ್ಪ ಅಮೆರಿಕ ಬಳಿ ಭಯಾನಕ ಅಸ್ತ್ರ ಒಂದಿದ್ದು ಅದರ ಹೆಸರು ಎಫ್-16 ಅಂತಾ. ಹೀಗೆ ಜಗತ್ತಿನ ಅತಿ ಶಕ್ತಿಶಾಲಿ & ಭಾರಿ ವೆಚ್ಚದ ಯುದ್ಧ ವಿಮಾನಗಳ ಪೈಕಿ ಎಫ್-16 ಮುಂಚೂಣಿಗೆ ಸೇರುತ್ತೆ. ಜಗತ್ತಿನಾದ್ಯಂತ ಎಫ್ 16 ಖರೀದಿಗೆ ಹಲವು ದೇಶಗಳು ತುದಿಗಾಲಲ್ಲಿ ನಿಂತಿರುತ್ತವೆ. ಹೀಗೆ ಅತಿ ಶಕ್ತಿಶಾಲಿ ಯುದ್ಧ ವಿಮಾನವನ್ನು ಉಕ್ರೇನ್‌ಗೆ ಈಗ ಗಿಫ್ಟ್ ಕೊಡಲು ಅಮೆರಿಕ ಮುಂದೆ ಬಂದಿದೆ. ದೊಡ್ಡಣ್ಣ ಕೈಗೊಂಡ ಈ ನಿರ್ಧಾರ ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ.
ರಷ್ಯಾ ದಾಳಿಗೆ ಬೆಚ್ಚಿಬಿದ್ದ ಉಕ್ರೇನ್
ಎಫ್-16 ಯುದ್ಧ ವಿಮಾನಗಳನ್ನ ಯುರೋಪ್‌ನಲ್ಲಿನ ನ್ಯಾಟೋ ಮಿತ್ರರ ಮೂಲಕ ಉಕ್ರೇನ್‌ಗೆ ತಲುಪಿಸಲು ದೊಡ್ಡಣ್ಣ ಅಮೆರಿಕ ಮುಂದಾಗಿದೆ. ಡೆನ್ಮಾರ್ಕ್ ಹಾಗೂ ನೆದರ್ಲ್ಯಾಂಡ್ ಜೊತೆಗೆ ಸೇರಿ ಉಕ್ರೇನ್‌ಗೆ ಎಫ್-16 ವಿಮಾನ ಕಳುಹಿಸಲು ಅಮೆರಿಕವು ರೆಡಿಯಾಗಿದೆ. ಇದೇ ಕಾರಣಕ್ಕೆ ಈಗಾಗಲೇ ಉಕ್ರೇನ್ ಪೈಲಟ್‌ಗಳಿಗೆ ಎಫ್-16 ವಿಮಾನ ತರಬೇತಿ ಕೂಡ ಶುರುವಾಗಿಬಿಟ್ಟಿದೆ ಎನ್ನಲಾಗಿತ್ತು. ಈ ಬೆಳವಣಿಗೆ ನಡುವೆ ಉಕ್ರೇನ್‌ನ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಹೀಗೆ ಎಫ್-16 ವಿಮಾನ ತರಬೇತಿ ಸುತ್ತ ಕಾರ್ಮೋಡ ಆವರಿಸಿದೆ.

ಇದನ್ನೆಲ್ಲಾ ನೋಡುತ್ತಿದ್ದರೆ ಉಕ್ರೇನ್ ಮತ್ತು ರಷ್ಯಾ ಯುದ್ಧ ಇನ್ನಷ್ಟು ವಿನಾಶಕಾರಿಯಾಗಿ ಮತ್ತಷ್ಟು ಜನರನ್ನು ಬಲಿ ಪಡಿಯೋದು ಪಕ್ಕಾ. ಒಂದೇ ದಿನಕ್ಕೆ ಮುಗಿದು ಹೋಗುತ್ತೆ ಈ ಯುದ್ಧ ಎನ್ನುತ್ತಿದ್ದರು ಜನ. ಆದರೆ ಯುದ್ಧ ಈಗಾಗಲೇ ಒಂದೂವರೆ ವರ್ಷ ಪೂರೈಸಿದ್ದು ಎರಡನೇ ವರ್ಷ ಕೂಡ ಮುಗಿಸುವ ಮುನ್ಸೂಚನೆ ಸಿಕ್ಕಿದೆ. ಉಕ್ರೇನ್ ಜನ ಮಾತ್ರ ಎರಡೂ ದೇಶದ ಸೇನಾ ಕಿತ್ತಾಟದಲ್ಲಿ ಬಿದಿಗೆ ಬಿದ್ದು, ಅನ್ನ & ನೀರು ಇಲ್ಲದೆ ಸಾಯುತ್ತಿದ್ದಾರೆ.












Click it and Unblock the Notifications