ವಿದ್ಯುತ್ ಇಲ್ಲದೆ ನರಳುತ್ತಿರುವ ಉಕ್ರೇನ್ ಸಹಾಯಕ್ಕೆ ನಿಂತ ಯುರೋಪ್ ದೇಶಗಳು
ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭೀಕರವಾಗಿ ದಾಳಿ ನಡೆಸುತ್ತಿರುವ ಕಾರಣಕ್ಕೆ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗಿದೆ ಆ ದೇಶ. ಪ್ರಮುಖವಾಗಿ ವಿದ್ಯುತ್ ಹಾಗೂ ತೈಲ ಸರಬರಾಜು ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಇದರ ಪರಿಣಾಮ ಉಕ್ರೇನ್ ನಾಗರಿಕರು ವಿದ್ಯುತ್ ಇಲ್ಲದೆ ಚಳಿಯಲ್ಲಿ ಪರದಾಡುವ ಸನ್ನಿವೇಶ ನಿರ್ಮಾಣ ಆಗಿತ್ತು. ತೀವ್ರ ಚಳಿ ನಡುವೆ ಬೆಚ್ಚಗೆ ಇರಲು ಕರೆಂಟ್ ಇಲ್ಲದೆ, ಆ ಕಡೆ ಅನಿಲ ಪೂರೈಕೆ ಕೂಡ ಇಲ್ಲದೆ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿತ್ತು. ಹೀಗಿದ್ದಾಗ ಯುರೋಪ್ ಒಕ್ಕೂಟದ ದೇಶಗಳು ಉಕ್ರೇನ್ ನೆರವಿಗೆ ಬಂದಿವೆ.
ಫೆಬ್ರವರಿಯಲ್ಲಿ ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ 4 ವರ್ಷ ಮುಗಿಯಲಿದ್ದು, 5ನೇ ವರ್ಷಕ್ಕೆ ಈ ಭೀಕರ ಕಾಳಗ ಎಂಟ್ರಿ ಕೊಡುತ್ತಿದೆ. ಹೀಗಿದ್ದಾಗ ಉಕ್ರೇನ್ ಪ್ರಜೆಗಳು ಕೂಡ ಒದ್ದಾಡುತ್ತಿದ್ದು, ಮುಂದಿನ ಪರಿಸ್ಥಿತಿ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಭಯ ಶುರುವಾಗಿದೆ. ಮೂಲ ಸೌಕರ್ಯ ವ್ಯವಸ್ಥೆಯ ಮೇಲೆ ರಷ್ಯಾ ಸೇನೆ ಭಾರಿ ಘೋರ ದಾಳಿ ಮಾಡುತ್ತಿದೆ. ಈ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಹತ್ವದ ಆದೇಶ ನೀಡಿದ್ದಾರೆ. ವಿದ್ಯುತ್ ಆಮದು ತ್ವರಿತಗೊಳಿಸಿ, ಉಕ್ರೇನ್ ಪ್ರಜೆಗಳಿಗೆ ಈ ಸಮಯದಲ್ಲಿ ಅಗತ್ಯ ಇರುವ ಶಕ್ತಿ ಪೂರೈಕೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಉಕ್ರೇನ್ ಪಾಲುದಾರ ದೇಶಗಳು ಈ ವಿಚಾರದಲ್ಲಿ ಸಹಾಯ ಮಾಡಲು ಮುಂದೆ ಬಂದಿವೆ.

ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ
ಉಕ್ರೇನ್ ಇಂಧನ ವಲಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದ್ದು, ಹವಾಮಾನ ವೈಪರಿತ್ಯದಿಂದಾಗಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗುವ ಆತಂಕ ಆವರಿಸಿತ್ತು. ಉಕ್ರೇನ್ ತುರ್ತು ಪರಿಸ್ಥಿತಿಯನ್ನ ಘೋಷಿರುವ ನಡುವೆ ಇದೀಗ ವೊಲೊಡಿಮಿರ್ ಝೆಲೆನ್ಸ್ಕಿ ಅಧಿಕಾರಿಗಳಿಗೆ ಇಂಧನ ಅಗತ್ಯತೆ ಸೂಕ್ತವಾಗಿ & ತ್ವರಿತವಾಗಿ ಪೂರೈಕೆ ಮಾಡಲು ಆದೇಶಿಸಿದ್ದಾರೆ. ಸ್ವತಃ ಉಕ್ರೇನ್ ರಾಜಧಾನಿ ಕೀವ್ ಕೂಡ ಸೂಕ್ತ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದು, ಸದ್ಯಕ್ಕೆ ಯುದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಸಿಗುತ್ತಿಲ್ಲ. ಹೀಗಾಗಿ ಜನರಿಗೆ ಅಗತ್ಯ ಇರುವ ವಿದ್ಯುತ್ ಪೂರೈಕೆಗೆ ಉಕ್ರೇನ್ ಅಗತ್ಯ ಕ್ರಮ ಕೈಗೊಂಡಿದೆ.
ರಾಜಧಾನಿ ನಿವಾಸಿಗಳ ತೀವ್ರ ನರಳಾಟ
ಉಕ್ರೇನ್ ರಾಜಧಾನಿ ಕೀವ್‌ನ ಅರ್ಧದಷ್ಟು, ಎಂದರೆ ಸುಮಾರು 6,000ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವ ಪ್ರಜೆಗಳು ವಿದ್ಯುತ್ ಸೌಕರ್ಯಕ್ಕೆ ಒದ್ದಾಡುವಂತೆ ಆಗಿದೆ. ಇದೇ ಸಮಯದಲ್ಲಿ ಜನರು ಕೂಡ ರಾಜಧಾನಿ ತೊರೆದು ವಿದ್ಯುತ್ ಲಭ್ಯ ಇರುವ ಕಡೆಗೆ ವಲಸೆ ಹೋಗುವ ಸ್ಥಿತಿ ಇದೆ. ಪರಿಸ್ಥಿತಿ ಅವಲೋಕನ ಮಾಡಿರುವ ಉಕ್ರೇನ್ ಸರ್ಕಾರ ತಮ್ಮ ಮಿತ್ರ ದೇಶಗಳ ಮೂಲಕ ವಿದ್ಯುತ್ ಅಗತ್ಯತೆ ಪೂರೈಕೆ ಮಾಡಲು ಮುಂದಾಗಿದೆ. ಆದರೆ ಇಷ್ಟೆಲ್ಲಾ ವಿನಾಶಕ್ಕೆ ಕಾರಣ ಆಗಿರುವ ಈ ಯುದ್ಧ ಯಾವಾಗ ಮುಗಿಯುತ್ತೋ? ಅಂತಾ ಕೋಟ್ಯಂತರ ಜನರು ಕಾಯುವಂತೆ ಆಗಿದೆ.












Click it and Unblock the Notifications