ಭಾರತ ಮೂಲದ 'ಕೂ' ಆ್ಯಪ್‌ನ ಖಾತೆಯನ್ನು ಅಮಾನತುಗೊಳಿಸಿದ ಟ್ವಿಟರ್
ವಾಷಿಂಗ್ಟನ್, ಡಿಸೆಂಬರ್ 17: ಭಾರತ ಮೂಲದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ' ಆ್ಯಪ್‌ನ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದೆ.
ಬಳಕೆದಾರರಿಗಾಗಿ ತೆರೆಯಲಾಗಿದ್ದ @kooeminence ಟ್ವಿಟರ್ ಹ್ಯಾಂಡಲ್ ಅನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.
ಎಲೋನ್ ಮಸ್ಕ್ ಒಡೆತನದ ಟ್ವಿಟರ್, ನ್ಯೂಯಾರ್ಕ್ ಟೈಮ್ಸ್, ಸಿಎನ್‌ಎನ್ ಮತ್ತು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಹಲವಾರು ಪ್ರಮುಖ ಜಾಗತಿಕ ಪತ್ರಕರ್ತರ ಖಾತೆಗಳನ್ನು ಅಮಾನತುಗೊಳಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

'ಕೂ' ಸಂಸ್ಥೆಯ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕಾ ಟ್ವಿಟರ್ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಸಂಸ್ಥೆಯ ಅಧಿಕೃತ ಖಾತೆಯನ್ನು ಅಮಾನತುಗಳಿಸುವುದು ಗಂಭೀರ ವಿಚಾರವಾಗಿದೆ. ಇದು ಅಸುರಕ್ಷಿತ ಎಂದು ಹೇಳಿ ನಿಷೇಧ ಹೇರುವುದು ನ್ಯಾಯ ಸಮ್ಮತವಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಎಲಾನ್ ಮಸ್ಕ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಡವಟ್ಕಾ, ಈ ವ್ಯಕ್ತಿಯ ಅಹಂಕಾರದಿಂದಾಗಿ ಟ್ವಿಟರ್ ನಾಶವಾಗುತ್ತಿದೆ ಎಂದು ಹೇಳಿದ್ದಾರೆ.
'ಈ ಸ್ಥಳವು(ಟ್ವಿಟರ್) ನಮ್ಮಂತಹ ಲಕ್ಷಾಂತರ ಇತರ ಬಳಕೆದಾರರಿಂದಾಗಿ ರೂಪಗೊಂಡಿದೆ. ಈ ವ್ಯಕ್ತಿಯ ಅಹಂಕಾರಕ್ಕೆ ನಾವು ಇಂಧನವಾಗಿ ಬಳಕೆಯಾಗಬಾರದು' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
#ElonIsDestroyingTwitter ಅನ್ನು ಟ್ರೆಂಡಿಂಗ್ ವಿಭಾಗದಿಂದ ತೆಗೆದುಹಾಕಲಾಗಿದೆ. ಟ್ವಿಟರ್ ಈಗ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಉಳಿದಿಲ್ಲ. ಇದು ಕೇವಳ ಒಂದು ಪ್ರಕಾಶಕ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದು ಬಿಡವಟ್ಕಾ ಹರಿಹಾಯ್ದಿದ್ದಾರೆ.
ಅಮಾನತುಗೊಂಡ ಖಾತೆಗಳಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ರಿಯಾನ್ ಮ್ಯಾಕ್, ಸಿಎನ್‌ಎನ್‌ನ ಡೋನಿ ಒ'ಸುಲ್ಲಿವನ್, ವಾಷಿಂಗ್ಟನ್ ಪೋಸ್ಟ್‌ನ ಡ್ರೂ ಹಾರ್ವೆಲ್, ಮ್ಯಾಶಬಲ್‌ನ ಮ್ಯಾಟ್ ಬೈಂಡರ್, ದಿ ಇಂಟರ್‌ಸೆಪ್ಟ್‌ನ ಮಿಕಾ ಲೀ, ರಾಜಕೀಯ ಪತ್ರಕರ್ತ ಕೀತ್ ಓಲ್ಬರ್‌ಮನ್, ಆರನ್ ರೂಪರ್ ಮತ್ತು ಟೋನಿ ವೆಬ್‌ಸ್ಟರ್ ಸೇರಿದ್ದಾರೆ. ಇಬ್ಬರೂ ಸ್ವತಂತ್ರ ಪತ್ರಕರ್ತರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.












Click it and Unblock the Notifications