Russia-Ukraine War: ಪುಟಿನ್ ಜೊತೆ ಟ್ರಂಪ್ ಮಾತುಕತೆ; ಶೀಘ್ರದಲ್ಲೇ ನಿಲ್ಲಲಿದೆ ರಷ್ಯಾ-ಉಕ್ರೇನ್ ಯುದ್ಧ!
ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ (ಫೆಬ್ರವರಿ 12) 1084 ದಿನ ಮುಗಿದಿದೆ. ಎರಡೂ ದೇಶಗಳು ಯುದ್ಧದಿಂದ ಜರ್ಝರಿತವಾಗಿವೆ. ಎರಡೂ ಕಡೆಯ ಸೈನಿಕರು, ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಎರಡೂ ದೇಶಗಳ ಆರ್ಥಿಕತೆ ಮೇಲೆ ಯುದ್ಧ ತೀವ್ರ ಪರಿಣಾಮ ಬೀರಿದೆ. ಎರಡೂ ದೇಶಗಳ ನಡುವಿನ ಯುದ್ಧ ಕೊನೆಗೊಳಿಸಲು ಹಲವು ಪ್ರಯತ್ನ ನಡೆದರೂ ಪ್ರಯೋಜನವಾಗಿರಲಿಲ್ಲ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜೊತೆ ಮಾತನಾಡಿದ್ದಾರೆ ಎಂದು ವರದಿ ತಿಳಿಸಿದೆ.

ರಿಪಬ್ಲಿಕನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಟ್ರಂಪ್ ಮತ್ತು ಪುಟಿನ್ ದೂರವಾಣಿ ಸಂಭಾಷಣೆ ನಡೆಸಿದ್ದು, ಯುದ್ದವನ್ನು ಕೊನೆಗೊಳಿಸಲು ಇಬ್ಬರೂ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಟ್ರಂಪ್ ತಮ್ಮ ಸಾಮಾಜಿಕ ಪೋಸ್ಟ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಹೊಗಳಿದ್ದಾರೆ. ಪುಟಿನ್ ಸಾಮಾನ್ಯ ಜ್ಞಾನವನ್ನು ಬಳಸಿದ್ದಾರೆ ಎಂದಿರುವ ಟ್ರಂಪ್, ಇಬ್ಬರೂ ನಾಯಕರು ಒಪ್ಪಿಕೊಂಡಿದ್ದು, ರಷ್ಯಾ- ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.
"ನಾವು ಪರಸ್ಪರ ರಾಷ್ಟ್ರಗಳಿಗೆ ಭೇಟಿ ನೀಡುವುದನ್ನು ಒಳಗೊಂಡಂತೆ ಬಹಳ ನಿಕಟವಾಗಿ ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ" ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಮಾತುಕತೆಗಳನ್ನು ಪ್ರಾರಂಭಿಸಲು ನಾವು ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ತಿಳಿಸಲು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕರೆಯುವ ಮೂಲಕ ಪ್ರಾರಂಭಿಸುತ್ತೇವೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಅಮೆರಿಕ ಮತ್ತು ರಷ್ಯಾ ನಡುವೆ ಪ್ರಮುಖ ಕೈದಿಗಳನ್ನು ವಿನಿಮಯ ಮಾಡಿಕೊಂಡ ಸ್ವಲ್ಪ ಸಮಯದ ಬಳಿಕ ಈ ಫೋನ್ ಕರೆ ಬಂದಿದ್ದು, ರಷ್ಯಾದ ಮಾಸ್ಕೋದಲ್ಲಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಅಮೆರಿಕದ ಶಾಲಾ ಶಿಕ್ಷಕ ಮಾರ್ಕ್ ಫೋಗೆಲ್ ಅವರನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ, ಹಣ ವರ್ಗಾವಣೆ ಚಟುವಟಿಕೆಗಳಲ್ಲಿ ಸಂಬಂಧಿಸಿದ ಆರೋಪದ ಮೇಲೆ ಅಮೆರಿಕದಲ್ಲಿ ಜೈಲಿನಲ್ಲಿದ್ದ ರಷ್ಯಾದ ಕ್ರಿಪ್ಟೋಕರೆನ್ಸಿ ಕಿಂಗ್‌ಪಿನ್ ಅಲೆಕ್ಸಾಂಡರ್ ವಿನ್ನಿಕ್ ಅವರನ್ನು ಅಮೆರಿಕ ಬಿಡುಗಡೆ ಮಾಡಿದೆ.
ಇದು ಎರಡೂ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಟ್ರಂಪ್ ಈಗ ರಷ್ಯಾ ಉಕ್ರೇನ್ ಯುದ್ಧವನ್ನು ನಿಲ್ಲಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸುವ ಉತ್ಸಾಹದಲ್ಲಿದ್ದಾರೆ.












Click it and Unblock the Notifications