Donald Trump: ಯುರೋಪ್ ಒಕ್ಕೂಟದ ವಿರುದ್ಧ ಶೇ. 200 ತೆರಿಗೆ ಫಿಕ್ಸ್?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡ್ಡಿಯನ್ನೇ ಗುಡ್ಡ ಮಾಡಿಕೊಳ್ಳುತ್ತಿದ್ದು, ಈ ಪರಿಣಾಮ ಘೋರ ತೆರಿಗೆ ಯುದ್ಧವೇ ಶುರುವಾಗಿ ಹೋಗಿದೆ. ಅದರಲ್ಲೂ ಅಮೆರಿಕದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳ ಜೊತೆಯಲ್ಲೇ ಡೊನಾಲ್ಡ್ ಟ್ರಂಪ್ ಕಿರಿಕ್ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರಾ? ಎಂಬ ಅನುಮಾನ ಮೂಡಿರುವ ಸಮಯದಲ್ಲೇ ಮತ್ತೆ ಸ್ಫೋಟಕ ಘಟನೆ ನಡೆದಿದೆ. ಅದರಲ್ಲೂ, ಯುರೋಪ್ ಒಕ್ಕೂಟದ ವಿರುದ್ಧ ಶೇ. 200 ತೆರಿಗೆ ಫಿಕ್ಸ್? ಎಂಬ ಅನುಮಾನ ಸಂಚಲನ ಸೃಷ್ಟಿ ಮಾಡಿದೆ!
ಡೊನಾಲ್ಡ್ ಟ್ರಂಪ್ ತೆರಿಗೆ ಯುದ್ಧಕ್ಕೆ ನಿರ್ಧಾರ ಮಾಡಿದ ಮರುಕ್ಷಣವೇ ಹೊಸ ಹೊಸ ಸವಾಲು ಅಮೆರಿಕಗೆ ಎದುರಾಗುತ್ತಿವೆ. ಈ ಹೊಸ ಸವಾಲುಗಳನ್ನು ಎದುರಿಸಲು ಅಮೆರಿಕ ಕೂಡ ಈ ಸಮಯದಲ್ಲಿ ಪರದಾಡುವ ಸ್ಥಿತಿ ಇದೆ. ಹೀಗಿದ್ದಾಗ ಅಮೆರಿಕದ ಜೊತೆಗೆ ಗಟ್ಟಿಯಾದ ಬಂಧ ಇಟ್ಟುಕೊಂಡಿದ್ದ ಯುರೋಪ್ ಒಕ್ಕೂಟ ಕೂಡ ದೂರವಾಗುತ್ತಿದ್ದು, ಅಮೆರಿಕದ ವಿರುದ್ಧವೇ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆಗೆ ಮುಂದಾಗಿದೆ. ಇದಕ್ಕೆ ರಿಯಾಕ್ಷನ್ ಕೊಟ್ಟಿರುವ ಡೊನಾಲ್ಡ್ ಟ್ರಂಪ್, ಶೇ. 200 ತೆರಿಗೆ ಹೇರಿಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಶೇಕಡಾ 200 ತೆರಿಗೆ ಹೇರಿಕೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಯುರೋಪ್ ಒಕ್ಕೂಟದ ದೇಶಗಳು ರವಾನಿಸುವ ಸರಕುಗಳ ಮೇಲೆ ಭಾರಿ ದೊಡ್ಡ ಮೊತ್ತದ ಟ್ಯಾಕ್ಸ್ ಹಾಕಿದ್ದರು. ಈ ಮೂಲಕ ಯುರೋಪಿಯನ್ ಒಕ್ಕೂಟ ದೇಶದ ವಸ್ತು ಅಮೆರಿಕಗೆ ರಫ್ತು ಮಾಡಲು ಒದ್ದಾಡುವ ಸ್ಥಿತಿಯೇ ನಿರ್ಮಾಣ ಆಗಿತ್ತು. ಶೇಕಡಾ 25 ರಷ್ಟು ತೆರಿಗೆ ಹೇರಿಕೆ ಮಾಡಿದ್ದ ಅಮೆರಿಕ ಕ್ರಮಕ್ಕೆ ಯುರೋಪಿಯನ್ ಯೂನಿಯನ್ ಸೇಡು ತೀರಿಸಿಕೊಂಡು ಬರೋಬ್ಬರಿ 28 ಬಿಲಿಯನ್ ಡಾಲರ್ ವ್ಯವಹಾರ ಮೇಲೆ ಕಲ್ಲು ಹಾಕಿದೆ. ಇದೇ ಕಾರಣಕ್ಕೆ ಈಗ ಮತ್ತೆ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದಿದ್ದಾರೆ!
ಟ್ರಂಪ್ ಇದೀಗ ನೀಡಿರುವ ಎಚ್ಚರಿಕೆ ಪ್ರಕಾರ, ಯುರೋಪ್ ಒಕ್ಕೂಟದ ಮೂಲಕ ಬರುವ ವೈನ್ ಸೇರಿದಂತೆ ಇತರ ಉತ್ಪನ್ನಗಳ ಮೇಲೆ ಶೇ. 200 ತೆರಿಗೆ ಹಾಕುವ ವಾರ್ನಿಂಗ್ ಅನ್ನು ಕೊಟ್ಟಿದ್ದಾರೆ. ಅಕಸ್ಮಾತ್ ಟ್ರಂಪ್ ಹೀಗೆ ಮಾಡಿದರೆ ಅದು ಮುಂದಿನ ದಿನಗಳಲ್ಲಿ ಎರಡೂ ಒಕ್ಕೂಟಗಳ ಸಂಬಂಧ ಹಾಳು ಮಾಡುವ ಭಯ ಕಾಡುತ್ತಿದೆ. ಹಾಗೇ ಯುರೋಪ್ ಒಕ್ಕೂಟ ಈ ವಿಚಾರದಲ್ಲಿ ಇನ್ನಷ್ಟು ಗಂಭೀರ ಕ್ರಮ ಕೈಗೊಂಡು ತೆರಿಗೆ ದರ ಇನ್ನಷ್ಟು ಹೆಚ್ಚು ಮಾಡಿ ಆಘಾತ ನೀಡುವ ಆತಂಕ ಇದೆ.
ಕೆನಡಾ ಜೊತೆಯಲ್ಲೂ ಕಿರಿಕ್ ಜೋರು
ಅಮೆರಿಕ ತೆರಿಗೆ ಹೇರಿಕೆ ಮಾಡಲು ಮುಂದಾಗಿದ್ದ ಹಿನ್ನೆಲೆ ರೊಚ್ಚಿಗೆದ್ದ ಕೆನಡಾ ಭಾರಿ ಮಹತ್ವದ ನಿರ್ಧಾರ ಪ್ರಕಟಿಸಿತ್ತು. ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಜೊತೆಗೆ ಮಾಡಿಕೊಂಡಿದ್ದ 100 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದ ಮುರಿದು ಹಾಕಿ ಎಳ್ಳುನೀರು ಬಿಟ್ಟು, ಮತ್ತೊಂದು ಕಡೆ ಅಮೆರಿಕಗೆ ಕೆನಡಾ ಸರಬರಾಜು ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲು ನಿರ್ಧಾರ ಕೂಡ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೆನಡಾ ವಿರುದ್ಧದ ತೆರಿಗೆ ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್‌ನ ಹಾಕಿದೆ ಅಮೆರಿಕ. ಆದರೆ ಯುರೋಪ್ ಒಕ್ಕೂಟದ ವಿರುದ್ಧ ಫೈಟಿಂಗ್ ಮುಂದುವರಿದಿದೆ.












Click it and Unblock the Notifications