ಬುಟ್ಟಿಯಿಂದ ಹೊರ ಬರಲಿಲ್ಲ ಟ್ರಂಪಣ್ಣನ ಹಾವು: ಬಿಎಂ ಹನೀಫ್ ಬರಹ
ಮಧ್ಯಪ್ರಾಚ್ಯದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಯುದ್ಧದ ಭೀತಿಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿಢೀರ್ ಆಗಿ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ್ದಾರೆ. ಈ ಘೋಷಣೆಯು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಇದೊಂದು ಶಾಶ್ವತ ವಿರಾಮವಾಗಲಿ ಎಂಬುದು ಶಾಂತಿಪ್ರಿಯರ ಆಶಯವಾಗಿದೆ. ಆದರೆ, ಮಂಗಳವಾರ ರಾತ್ರಿಯವರೆಗೂ ಕೇಳಿಬರುತ್ತಿದ್ದ ಯುದ್ಧದ ಕೇಕೆ ಮತ್ತು ಇಂದಿನ ಮೌನ, ಟ್ರಂಪ್ ಅವರ ಅನಿರೀಕ್ಷಿತ ನಡವಳಿಕೆಗೆ ಕೈಗನ್ನಡಿಯಾಗಿದೆ ಎಂದು ಬಿ.ಎಂ. ಹನೀಫ್ ಅವರು ತಮ್ಮ ಬರಹದಲ್ಲಿ ವಿಶ್ಲೇಷಿಸಿದ್ದಾರೆ.
ಸದ್ಯ ಎರಡು ವಾರದ ಮಟ್ಟಿಗೆ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಒಳ್ಳೆಯದೇ. ಇದು ಪರ್ಮನೆಂಟ್ ವಿರಾಮವಾಗಲಿ.

ಮಂಗಳವಾರ ರಾತ್ರಿ ಮಲಗೋ ಮುಂಚೆ ಟಿವಿ ನ್ಯೂಸ್ ನೋಡ್ತಾ ಇದ್ದಾಗ ಟ್ರಂಪ್ ಅಬ್ಬರದ, ವೀರಾವೇಷದ ಘೋಷಣೆ ಆಗುತ್ತಿತ್ತು. "ಇರಾನ್ ನ ಇಡೀ ನಾಗರಿಕತೆಯನ್ನೇ ನಾಶ ಮಾಡ್ತೀನಿ, ನೋಡ್ತಾ ಇರಿ" ಎಂದು ಮೆಂಟಲ್ ಮ್ಯಾನ್ ಟ್ರಂಪ್ ಹೇಳುತ್ತಿದ್ದ.
"ಗುರುವಾರ ಬೆಳಿಗ್ಗೆ ಐದೂವರೆ ಗಂಟೆಗೆ ರಣಭೀಕರ ಯುದ್ಧದ ನೇರಪ್ರಸಾರ..." ಎಂದು ಟೀವಿ ಆ್ಯಂಕರ್ ಬೇರೆ ಕಿರುಚಾಡುತ್ತಿದ್ದ. ಏನೋ ಭಯಾನಕವಾದದ್ದು ಬೆಳ್ಳಂಬೆಳಿಗ್ಗೆ ನಡೆಯಲಿದೆ ಎಂದು ಭಾಸವಾಗುತ್ತಿತ್ತು.
ಬೆಳಿಗ್ಗೆ ಏಳು ಗಂಟೆಗೆ ಏನಾಯ್ತು ನೋಡೋಣ ಅಂತ ಟೀವಿ ಹಚ್ಚಿದರೆ, ಎರಡು ವಾರ ಕದನ ವಿರಾಮ ಎಂಬ ಟ್ರಂಪ್ ಘೋಷಣೆ ಅಂತ ಸುದ್ದಿ ಬರ್ತಾ ಇದೆ.
ನನಗನ್ಸುತ್ತೆ ಈ ಟ್ರಂಪ್ ಹಿಂದಿನ ಜನ್ಮದಲ್ಲಿ ರೋಡ್ ಸೈಡ್ ಹಾವಾಡಿಗ ಆಗಿದ್ದಿರಬೇಕು. ಬೀದಿ ಬದಿಯಲ್ಲಿ ವರ್ತುಲಾಕಾರದಲ್ಲಿ ಭಾರೀ ಜನ ನಿಂತು ನೋಡ್ತಿದಾರೆ. ನಡುವೆ ಐದಾರು ಬುಟ್ಟಿಗಳಲ್ಲಿ ಸಣ್ಣ, ದೊಡ್ಡ ಹಾವುಗಳನ್ನು ಇಟ್ಕೊಂಡು ಹಾವಾಡಿಗ ಪುಂಗಿ ಊದುತ್ತಾ ಇರ್ತಾನೆ.
'ಬುಟ್ಟಿಯಲ್ಲಿ ಇನ್ನೊಂದು ಭಯಂಕರ ಹಾವಿದೆ. ಈಗ ಬಿಡ್ತೀನಿ. ಸ್ವಲ್ಪ ಎಲ್ಲರೂ ದೂರ ನಿಲ್ಲಿ. ಯಾರೂ ಕೈಕಟ್ಟಬೇಡಿ, ಕೈಗಳನ್ನು ಇಳಿಬಿಡಿ. ಭಯಂಕರ ಕಾಳಿಂಗ ಸರ್ಪ. ಮಕ್ಕಳ ಕೈ ಹಿಡ್ಕೊಳಿ...ಈಗ ಬಿಡ್ತೀನಿ.." ಎಂದು ಆತ ಹೆದರಿಸುತ್ತಿದ್ದ. "ಅದಕ್ಕೂ ಮುಂಚೆ ಒಂದು ಕರ್ಚೀಪ್ ಹಿಡ್ಕೊಂಡು ಜನರ ಬಳಿಗೆ ಬರ್ತೀನಿ. ಎಲ್ಲರೂ ಕೈಲಾದಷ್ಟು ಸಹಾಯ ಮಾಡಿ...' ಎನ್ನುತ್ತಿದ್ದ.
ನನ್ನ ಬಾಲ್ಯದಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಈ ಭಯಂಕರ ಹಾವನ್ನು ನೋಡಲೇಬೇಕೆಂದು ನಾನೂ ಗುಂಪಿನಲ್ಲಿ ಹಲವು ಸಲ ಕಾದು ಕುಳಿತದ್ದಿದೆ. ಆದ್ರೆ ಆ ಹಾವಾಡಿಗ ಟವೆಲ್ ನಲ್ಲಿ ಹಣ ಕಲೆಕ್ಷನ್ ಮಾಡ್ತಾ ಸುತ್ತ ಬರ್ತಾನೆ. ಬಳಿಕ ಹಣವನ್ನು ಜೇಬಿಗಿಳಿಸಿ ಎಲ್ಲ ಬುಟ್ಟಿಗಳನ್ನೂ ಬಂದ್ ಮಾಡಿ ಆಟ ನಿಲ್ಲಿಸ್ತಾನೆ. ಬಹಳ ಸಲ ಕಾದಿದ್ದೇನೆ. ಕೊನೆಗೂ ಆ ಭಯಂಕರ ಕಾಳಿಂಗ ಸರ್ಪ ಬರೋದೇ ಇಲ್ಲ. ಹಾಗಿದೆ ಟ್ರಂಪ್ ನ ಸ್ಥಿತಿ.
ಇರಲಿ. ಸದ್ಯಕ್ಕಂತೂ ಕೊಲ್ಲಿ ದೇಶದ ಭಾರತೀಯರು ನಿಟ್ಟುಸಿರು ಬಿಡುತ್ತಿದ್ದಾರೆ. ಎರಡು ವಾರದ ಬಳಿಕ ಏನಾಗುತ್ತೋ.. ಗೊತ್ತಿಲ್ಲ.
ಕನ್ನಡ ಟೀವಿ ಯಲ್ಲಿ scroll ಬರ್ತಾ ಇದೆ- 40 ದಿನಗಳ ಯುದ್ಧಕ್ಕೆ ಟ್ರಂಪ್ ಎರಡು ವಾರ ಕದನ ವಿರಾಮ ಘೋಷಿಸಿದ್ದೇಕೆ? ಟ್ರಂಪ್ ಲೆಕ್ಕಾಚಾರ ಏನು? ಮತ್ತೆ ಶುರುವಾಗುತ್ತಾ ರಣರೋಚಕ ಯುದ್ಧ...!












Click it and Unblock the Notifications