Terrorist: ಬೆಂಗಳೂರಿನ ಭಯೋತ್ಪಾದಕ ದಾಳಿಯ ರೂವಾರಿ ಎಲ್‌ಇಟಿ ಉಗ್ರನ ಹತ್ಯೆ
ಭಾರತದಲ್ಲಿ ಹಲವು ಪ್ರಮುಖ ಭಯೋತ್ಪಾದಕ ದಾಳಿಗಳನ್ನು ನಡೆಸಿದ ಆರೋಪ ಹೊತ್ತಿರುವ ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಉನ್ನತ ಕಾರ್ಯಕರ್ತ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸಾವನ್ನಪ್ಪಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅಪರಿಚಿತ ದಾಳಿಕೋರರು ದಾಳಿ ಮಾಡಿ ಸೈಫುಲ್ಲಾ ಖಾಲಿದ್‌ರನ್ನು ಹತ್ಯೆ ಮಾಡಿದ್ದಾರೆ.
ಖಾಲಿದ್ ಭಾರದಲ್ಲಿ ನಡೆದ ಮೂರು ಪ್ರಮುಖ ದಾಳಿಗಳಲ್ಲಿ ಪ್ರಮುಖ ಸಂಚುಕೋರನಾಗಿದ್ದನು. 2005 ರಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‌ಸಿ) ದಾಳಿ, 2006 ರಲ್ಲಿ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಧಾನ ಕಚೇರಿಯ ಮೇಲಿನ ದಾಳಿ ಮತ್ತು 2008 ರಲ್ಲಿ ರಾಂಪುರದಲ್ಲಿ ನಡೆದ ಸಿಆರ್‌ಪಿಎಫ್ ಶಿಬಿರದ ದಾಳಿಯಲ್ಲಿ ಸೈಫುಲ್ಲಾ ಖಾಲಿದ್ ಪ್ರಮುಖ ಪಾತ್ರ ವಹಿಸಿದ್ದನು.

ಮೂರು ವರ್ಷಗಳಲ್ಲಿ ನಡೆದಿದ್ದ ಈ ಭಯೋತ್ಪಾದಕ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರು. ಭಾರತದಲ್ಲಿ ಎಲ್‌ಇಟಿಯ ಕಾರ್ಯಾಚರಣೆಗಳು ಏರಿಕೆಯಾಗಿದ್ದವು. ವಿನೋದ್ ಕುಮಾರ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಲಿದ್ ಹಲವಾರು ವರ್ಷಗಳ ಕಾಲ ನೇಪಾಳದಲ್ಲಿ ನೆಲೆಸಿದ್ದನು, ಅಲ್ಲಿ ಅವನು ಸುಳ್ಳು ಗುರುತಿನಡಿಯಲ್ಲಿ ವಾಸಿಸುತ್ತಿದ್ದನು ಮತ್ತು ಸ್ಥಳೀಯ ಮಹಿಳೆ ನಗ್ಮಾ ಬಾನು ಎನ್ನುವಾಕೆಯನ್ನು ಮದುವೆಯಾಗಿದ್ದನು.
ನೇಪಾಳದಿಂದ ಬಂದಿದ್ದ ಆತ ಎಲ್‌ಇಟಿಗಾಗಿ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ, ಉಗ್ರ ಸಂಘಟನೆಗೆ ಸದಸ್ಯರ ನೇಮಕಾತಿ ಮತ್ತು ಸರಕು ಸಾಗಾಣಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಸಿಂಧ್ ಪ್ರಾಂತ್ಯದಲ್ಲಿ ವಾಸವಿದ್ದ ಉಗ್ರ
ಖಾಲಿದ್ ಇತ್ತೀಚೆಗೆ ತನ್ನ ನೆಲೆಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮತ್ಲಿಗೆ ಸ್ಥಳಾಂತರಿಸಿದ್ದರು. ಅಲ್ಲಿ ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಪಾಕಿಸ್ತಾನಿ ಭಯೋತ್ಪಾದಕ ಗುಂಪು ಮತ್ತು ಅದರ ಮುಂಭಾಗದ ಸಂಘಟನೆಯಾದ ಜಮಾತ್-ಉದ್-ದವಾ ಪರ ಕೆಲಸ ಮಾಡುತ್ತಿದ್ದ. ಮುಖ್ಯವಾಗಿ ಭಯೋತ್ಪಾದಕ ಕಾರ್ಯಾಚರಣೆಗಳಿಗೆ ನೇಮಕಾತಿ ಮತ್ತು ನಿಧಿ ಸಂಗ್ರಹಣೆಯಲ್ಲಿ ಕೆಲಸ ಮಾಡುತ್ತಿದ್ದನು.
ಕಳೆದ ವಾರ 'ಆಪರೇಷನ್ಸ್ ಕಮಾಂಡರ್' ಶಾಹಿದ್ ಕುಟ್ಟಯ್ ಸೇರಿದಂತೆ ಇನ್ನೂ ಮೂವರು ಲಷ್ಕರ್ ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ನಲ್ಲಿ ಬಲಿಯಾಗಿದ್ದರು.
ಕುಟ್ಟಯ್, ಶೋಪಿಯಾನ್‌ನ ವಂಡುನಾ ಮೆಲ್ಹುರಾ ಪ್ರದೇಶದ ನಿವಾಸಿ ಅದ್ನಾನ್ ಶಫಿ ಮತ್ತು ನೆರೆಯ ಪುಲ್ವಾಮಾ ಜಿಲ್ಲೆಯ ಮುರ್ರಾನ್ ಪ್ರದೇಶದ ನಿವಾಸಿ ಅಹ್ಸಾನ್ ಉಲ್ ಹಕ್ ಶೇಖ್ ಅವರನ್ನು ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಹೊಡೆದುರುಳಿಸಲಾಗಿತ್ತು. ಎರಡು ಎಕೆ ಸರಣಿಯ ರೈಫಲ್‌ಗಳು, ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಗ್ರೆನೇಡ್‌ಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications