1,00,000ದ ಗಡಿ ದಾಟಿತು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ
ಮದ್ರಿದ್, ಏಪ್ರಿಲ್.01: ಜಾಗತಿಕ ಮಟ್ಟದಲ್ಲಿ ಭಯ ಹುಟ್ಟಿಸಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇಟಲಿಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಅದೇ ರಾಷ್ಟ್ರಗಳ ಪಟ್ಟಿಗೆ ಇದೀಗ ಸ್ಪೇನ್ ಕೂಡಾ ಸೇರ್ಪಡೆಯಾಗಿದೆ.
Recommended Video
ಕಳೆದ 24 ಗಂಟೆಗಳಲ್ಲಿ ಸ್ಪೇನ್ ನಲ್ಲಿ 6,213 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು 1,02,136ಕ್ಕಿಂತಲೂ ಹೆಚ್ಚಾಗಿದೆ. ಇದುವರೆಗೂ ದೇಶದಲ್ಲಿ ಮಾರಕ ಸೋಂಕಿಗೆ 9063 ಮಂದಿ ಪ್ರಾಣ ಬಿಟ್ಟಿದ್ದಾರೆ.
ಇನ್ನು, ಒಂದೇ ದಿನದಲ್ಲಿ ಕೊರೊನಾ ವೈರಸ್ ನಿಂದ 590ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸ್ಪೇನ್ ನಲ್ಲಿ ಈವರೆಗೆ 22,467 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಉಳಿದಂತೆ 70,436 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಮೂರು ರಾಷ್ಟ್ರದಲ್ಲಿ ಲಕ್ಷಕ್ಕೂ ಹೆಚ್ಚು ಸೋಂಕಿತರು:
ಕೊರೊನಾ ವೈರಸ್ ಸೋಂಕು ಚೀನಾದಲ್ಲಿಯೇ ಜನ್ಮ ತಾಳಿದರೂ ಅದರ ಹಾವಳಿ ಅಮೆರಿಕಾ ಮತ್ತು ಇಟಲಿಯಲ್ಲೇ ಹೆಚ್ಚಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಇದುವರೆಗೂ ಮಾರಕ ಸೋಂಕಿಗೆ 4,138 ಮಂದಿ ಪ್ರಾಣ ಬಿಟ್ಟಿದ್ದು, 1,91,193ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿದೆ. ಇನ್ನು, ಇಟಲಿಯಲ್ಲಿ ಅತಿಹೆಚ್ಚು ಎಂದರೆ 13,155ಕ್ಕೂ ಅಧಿಕ ಮಂದಿ ಕೊರೊನಾ ಬಾರಿಸಿದ ಮರಣಮೃದಂಗಕ್ಕೆ ಬಲಿಯಾಗಿದ್ದಾರೆ. ಇಟಲಿಯಲ್ಲಿ ಇದುವರೆಗೂ 1,10,574 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದರೆ ಚೀನಾದಲ್ಲಿ ಪರಿಸ್ಥಿತಿ ಮೊದಲಿನ ಹಾಗಿಲ್ಲ. ಡ್ರ್ಯಾಗನ್ ರಾಷ್ಟ್ರದಲ್ಲಿ ಈವರೆಗೂ 3,312 ಮಂದಿ ಕೊರೊನಾದಿಂದ ಪ್ರಾಣ ಬಿಟ್ಟಿದ್ದರೆ, 81,554 ಜನರಲ್ಲಿ ಸೋಂಕು ಇರುವುದು ಸ್ಪಷ್ಟವಾಗಿದೆ.












Click it and Unblock the Notifications