
ಪ್ರವಾದಿ ವಿವಾದ: ಕುವೈತ್‌ನಿಂದ ವಲಸಿಗರು ಹೊರಕ್ಕೆ
ಕುವೈತ್, ಜೂ. 13: ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ನೀಡಿದ ಹೇಳಿಕೆಗಳ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ವಲಸಿಗರನ್ನು ಗಡಿಪಾರು ಮಾಡುವುದಾಗಿ ಕುವೈತ್ ಹೇಳಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಕುವೈತ್‌ನಲ್ಲಿ ಧರಣಿ ಅಥವಾ ಪ್ರತಿಭಟನೆಗಳನ್ನು ನಿಷೇಧಿಸುವ ದೇಶದ ಕಾನೂನು ಮತ್ತು ನಿಬಂಧನೆಗಳನ್ನು ಪ್ರತಿಭಟನಾಕಾರರು ಉಲ್ಲಂಘಿಸಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಅಧಿಕಾರಿಗಳು ಪ್ರತಿಭಟನೆ ನಡೆಸಿದ ವಲಸಿಗರನ್ನು ಬಂಧಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಯಾವುದೇ ಪ್ರತಿಭಟನೆಗಳಿಗೆ ಅವಕಾಶ ನೀಡಬಾರದು: ಮುಸ್ಲಿಂ ಇಮಾಮ್ಸ್ ಸಂಘ
ಅವರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲು ಗಡಿಪಾರು ಕೇಂದ್ರಕ್ಕೆ ಕಳುಹಿಸುತ್ತಾರೆ ಎಂದು ಅರಬ್ ಟೈಮ್ಸ್ ಅನ್ನು ಉಲ್ಲೇಖಿಸಿ ವರದಿ ಹೇಳಿದೆ. ಮುಂದೆ ವಲಸಿಗರು ಮತ್ತೆ ಕುವೈತ್‌ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ವರದಿ ಹೇಳಿದೆ.
ಪ್ರವಾದಿ ಹೇಳಿಕೆ: ಶೂ ಪ್ರಿಂಟ್ನೊಂದಿಗೆ ನೂಪುರ್ ಪೋಸ್ಟರ್- ಗುಜರಾತ್ನಲ್ಲಿ 8 ಬಂಧನ
ಯಾವುದೇ ರೀತಿಯ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದು. ಕುವೈತ್‌ನಲ್ಲಿರುವ ಎಲ್ಲಾ ವಲಸಿಗರು ದೇಶದ ಕಾನೂನುಗಳನ್ನು ಗೌರವಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಆದರೆ ಪ್ರತಿಭಟನೆ ನಡೆಸಿದ ಅನಿವಾಸಿಗಳ ದೇಶವನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ.

ಬಲವಾದ ಪ್ರತಿಭಟನೆ ದಾಖಲು
ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಸದ್ಯ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗಳು ಗಲ್ಫ್‌ನಲ್ಲಿ ಭಾರೀ ವಿವಾದಗಳನ್ನು ಹುಟ್ಟುಹಾಕಿದ್ದವು. ಅಲ್ಲದೆ ಭಾರತೀಯ ರಾಯಭಾರಿಗಳನ್ನು ಅರಬ್ ರಾಷ್ಟ್ರಗಳು ಈ ವಿಷಯದ ಬಗ್ಗೆ ಬಲವಾದ ಪ್ರತಿಭಟನೆಗಳನ್ನು ದಾಖಲಿಸಲು ಕರೆಸಿದ್ದವು.

ಆಕ್ಷೇಪಾರ್ಹ ಟ್ವೀಟ್‌ಗಳಿಗೆ ಕಳವಳ
ಆದರೆ ಭಾರತವು ಈ ಟೀಕೆಗಳನ್ನು ತನಗೆ ಸಂಬಂಧವಿಲ್ಲ ಎಂದು ತಳ್ಳಿಹಾಕಿದ್ದು, ಅಲ್ಪಸಂಖ್ಯಾತರ ವಿರುದ್ಧ ಟ್ವಿಟರ್‌ನಲ್ಲಿ ವಿವಾದಾತ್ಮಕ ಟೀಕೆಗಳನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭಾರತದಲ್ಲಿ ಪ್ರವಾದಿ ವಿರುದ್ಧ ನವೀನ್ ಕುಮಾರ್ ಜಿಂದಾಲ್ ಮಾಡಿರುವ ಟ್ವೀಟ್‌ಗಳ ಕುರಿತು ಕುವೈತ್ ವಿದೇಶಾಂಗ ಸಚಿವಾಲಯ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ವಕ್ತಾರರು, "ರಾಯಭಾರಿ ಸಿಬಿ ಜಾರ್ಜ್ ಅವರು ವಿದೇಶಾಂಗ ಕಚೇರಿಯಲ್ಲಿ ಸಭೆ ನಡೆಸಿದರು. ಇದರಲ್ಲಿ ಭಾರತದಲ್ಲಿನ ವ್ಯಕ್ತಿಗಳ ಕೆಲವು ಆಕ್ಷೇಪಾರ್ಹ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಲಾಯಿತು ಎಂದು ಹೇಳಿದರು.

ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ
ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಧರ್ಮಗಳನ್ನು ಗೌರವಿಸುವ, ಯಾವುದೇ ಧಾರ್ಮಿಕ ಮುಖಂಡರ ವ್ಯಕ್ತಿತ್ವವನ್ನು ಖಂಡಿಸುವ ಅಥವಾ ಯಾವುದೇ ಧರ್ಮ ಅಥವಾ ಪಂಥವನ್ನು ಕೀಳಾಗಿಸುವಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಭಾರತ- ಕುವೈತ್ ಸಂಬಂಧಗಳಿಗೆ ವಿರುದ್ಧವಾಗಿರುವ ಪಟ್ಟಭದ್ರ ಹಿತಾಸಕ್ತಿಗಳು ಈ ಅವಹೇಳನಕಾರಿ ಹೇಳಿಕೆಯನ್ನು ಬಳಸಿಕೊಂಡು ಜನರನ್ನು ಪ್ರಚೋದಿಸುತ್ತಿವೆ. ಭಾರತೀಯ ಜನತಾ ಪಕ್ಷವು ತನ್ನ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರ ಪ್ರಚೋದನಾತ್ಮಕ ಹೇಳಿಕೆಗಳಿಗಾಗಿ ಪಕ್ಷ ಉಚ್ಚಾಟಿಸಿದೆ.

ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವ
ಈ ಟ್ವೀಟ್‌ಗಳು ಯಾವುದೇ ರೀತಿಯಲ್ಲಿ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ರಾಯಭಾರಿ ತಿಳಿಸಿದ್ದಾರೆ. ಇವುಗಳು ನಕರಾತ್ಮಕ ಅಂಶಗಳ ಅಭಿಪ್ರಾಯಗಳಾಗಿವೆ. ನಮ್ಮ ದೇಶದ ಪರಂಪರೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಬಲವಾದ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ ಎಂದು ವಕ್ತಾರರು ಹೇಳಿದರು.