ಶ್.. ಇದು ಉಗ್ರರ ಆಡಳಿತ.. ಕೊಲೆ ಮಾಡಿದವರನ್ನೇ ಕೊಲೆ ಮಾಡ್ತಾರೆ!
ಕೊಲೆ, ಸುಲಿಗೆ, ದರೋಡೆ ಇಂತಹ ಘಟನೆಗಳು ನಾಗರಿಕ ಸಮಾಜಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತವೆ. ಆದರೆ ಹೀಗೆ ಕೊಲೆ, ಸುಲಿಗೆ, ದರೋಡೆ ನಡೆಯುತ್ತಿರುವುದು ಇಂದು & ನಿನ್ನೆಯಿಂದ ಅಲ್ಲ. ಲಕ್ಷಾಂತರ ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಹೀಗಾಗಿ ಇಂತಹ ಕೃತ್ಯಗಳನ್ನ ಅಂತ್ಯ ಮಾಡಲು ಮನುಷ್ಯ ಕಾನೂನನ್ನು ರೂಪಿಸಿ, ಆರೋಪಿಗಳಿಗೆ ಆ ಮೂಲಕ ಶಿಕ್ಷೆ ನೀಡುತ್ತಾ ಬಂದಿದ್ದಾನೆ. ಆದರೆ ಉಗ್ರರ ಆಡಳಿತದಲ್ಲಿ ಏನಾಗುತ್ತಿದೆ ಗೊತ್ತೆ?
ಹೌದು, ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈಗೆ ಸಿಲುಕಿದ ನಂತರ ನಲುಗಿ ಹೋಗಿದೆ. ಈ ದೇಶದಲ್ಲಿ ಕೊಲೆ ಆರೋಪಿಗಳನ್ನ ಗುಂಡಿಟ್ಟು ಕೊಲೆ ಮಾಡುವುದು ಮಾಮೂಲಾಗಿದೆ. ಈ ಮೂಲಕ ಮರಣ ದಂಡನೆ ಶಿಕ್ಷೆಯ ನೀಡುತ್ತಿದ್ದೇವೆ ಅಂತಿದೆ ತಾಲಿಬಾನ್ ಉಗ್ರರ ಸರ್ಕಾರ. ಕಳೆದ 5 ದಿನದಲ್ಲಿ ಸಾಲು ಸಾಲಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಇದೀಗ ಮತ್ತೊಂದು ಇಂತಹದ್ದೇ ಘಟನೆ ವರದಿಯಾಗಿದೆ. ಹಾಗಾದ್ರೆ ತಾಲಿಬಾನ್ ಉಗ್ರರ ಯಾವ ಪ್ರದೇಶದಲ್ಲಿ ಈ ರೀತಿ ಕೊಲೆ ಆರೋಪಿ ಮೇಲೆ ಫೈರಿಂಗ್ ನಡೆದಿದೆ? ಬನ್ನಿ ತಿಳಿಯೋಣ.

ಉಗ್ರರ ಕ್ರೌರ್ಯಕ್ಕೆ ಜನ ತತ್ತರ!
ಅಫ್ಘಾನಿಸ್ತಾನ ಉತ್ತರ ಪ್ರಾಂತ್ಯದಲ್ಲಿ ಸಾರ್ವಜನಿಕವಾಗಿ ಮರಣ ದಂಡನೆ ಜಾರಿಗೊಳಿಸಲಾಗಿದೆ. ಕೊಲೆ ಅಪರಾಧ ಸಾಬೀತಾದ ಹಿನ್ನೆಲೆ ತಾಲಿಬಾನ್ ಉಗ್ರರ ಸರ್ಕಾರ ಈಗ, ನಜರ್ ಮೊಹಮ್ಮದ್ ಎಂಬಾತನಿಗೆ ಕ್ರೀಡಾಂಗಣ ಒಂದರಲ್ಲಿ ಗುಂಡು ಹಾರಿಸಿ ಮರಣ ದಂಡನೆ ಶಿಕ್ಷೆಯನ್ನು ನೀಡಿದೆ. ಕಳೆದ ವಾರದಲ್ಲಿ ಸಾಲು ಸಾಲಾಗಿ ಇಂತಹ ಘಟನೆಗಳು ನಡೆದಿವೆ. ಅದರಲ್ಲೂ ಐದು ದಿನ ಅವಧಿಯಲ್ಲಿ ಈ ರೀತಿಯಾಗಿ ಮರಣ ದಂಡನೆ ಜಾರಿಗೊಳಿಸಿದ ಮೂರನೇ ಪ್ರಕರಣ ಇದಾಗಿದ್ದು ತಾಲಿಬಾನ್ ಆಡಳಿತದ ಕ್ರೌರ್ಯ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ಸಹೋದರನೆ ಶಿಕ್ಷೆ ಕೊಡಬೇಕು!
ಹೀಗೆ ತಾಲಿಬಾನ್ ಉಗ್ರರು ಮರಣ ದಂಡನೆ ನೀಡುವಲ್ಲಿ ಮತ್ತೊಂದು ವಿಶೇಷ ರೀತಿಯನ್ನ ಅನುಸರಿಸಿದ್ದಾರೆ. ಇದೀಗ ಕೊಲೆ ಆಗಿದ್ದ ವ್ಯಕ್ತಿಯ ಸಹೋದರನೇ ರೈಫಲ್‌ನಿಂದ ಐದು ಬಾರಿ ಗುಂಡು ಹಾರಿಸಿ, ಕೊಲೆ ಮಾಡಿದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ನೀಡಿದ್ದಾನೆ. ಹೀಗಾಗಿ ಮೊದಲೇ ಉಗ್ರರ ಆಡಳಿತ ಎಂಬ ಕೆಟ್ಟ ಹೆಸರು ಪಡೆದ ತಾಲಿಬಾನ್ ಕಂಡು ಜನರು ಈಗ ಮತ್ತಷ್ಟು ಹೆದರುವಂತಾಗಿದೆ.

ಮತ್ತೊಂದು ಕಡೆ ಹೀಗೆ ಕೊಲೆ ಅಪರಾಧಿಗೆ ಮರಣ ದಂಡನೆ ಶಿಕ್ಷೆಯನ್ನ ನೀಡುವ ಸಮಯದಲ್ಲಿ ಕ್ರೀಡಾಂಗಣದ ಸುತ್ತಲೂ ಬಿಗಿ ಭದ್ರತೆ ಇತ್ತು. ಸಾರ್ವಜನಿಕವಾಗಿ ಶಿಕ್ಷೆಯ ವಿಧಿಸುವ ತಾಲಿಬಾನ್ ಸರ್ಕಾರದ ಕ್ರಮವನ್ನು ವಿಶ್ವ ಸಂಸ್ಥೆ ಖಂಡಿಸಿದ್ದರೂ ತಾಲಿಬಾನಿ ಉಗ್ರರು ಈ ಮಾತಿಗೆ ಕೇರ್ ಮಾಡುತ್ತಿಲ್ಲ. ಹೀಗಾಗಿ ತಮ್ಮ ಕೆಲಸ ಮುಂದುವರಿಸಿದ್ದಾರೆ.
ಈ ಮೊದಲು ಇದೇ ರೀತಿ ಇತ್ತು!
1990ರ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಸರ್ಕಾರ ಆಡಳಿತ ನಡೆಸುತ್ತಿತ್ತು. ಕೊಲೆ ಆರೋಪಿಗಳು, ಕಳ್ಳತನ ಆರೋಪಿಗಳ ವಿರುದ್ಧವೂ ಸಾರ್ವಜನಿಕವಾಗಿ ಮರಣ ದಂಡನೆ & ಥಳಿಸುವ ಶಿಕ್ಷೆ ನೀಡುತ್ತಿತ್ತು. ಹಾಗೇ ಕಲ್ಲಲ್ಲಿ ಹೊಡೆಯುವ ಶಿಕ್ಷೆಗಳನ್ನೂ ಜಾರಿಗೊಳಿಸುತ್ತಿತ್ತು ತಾಲಿಬಾನ್ ಸರ್ಕಾರ. ಆ ನಂತರ ತಾಲಿಬಾನ್ ಸರ್ಕಾರ ಬಿದ್ದು ಹೋಗಿ, ಅಮೆರಿಕದ ಬೆಂಬಲಿತ ಸರ್ಕಾರ ಆಡಳಿತಕ್ಕೆ ಬಂದಿತ್ತು. 2021ರಲ್ಲಿ ಅಮೆರಿಕ ಸೇನೆಯು ಅಫ್ಘಾನಿಸ್ತಾನ ಬಿಟ್ಟು ಹೋದ ನಂತರ ಪರಿಸ್ಥಿತಿ ಮತ್ತೆ ಕೈಮೀರಿ ಹೋಗಿದೆ. ತಾಲಿಬಾನ್ ಉಗ್ರರ ಆಡಳಿತದ ಹುಚ್ಚಾಟಗಳಿಗೆ ಬ್ರೇಕ್ ಹಾಕಲು ಯಾರೂ ಇಲ್ಲದಂತಾಗಿದೆ.












Click it and Unblock the Notifications