ಬರಾಕ್ ಒಬಾಮಾ ಖಾತೆಗೆ ಸಿರಿಯಾ ಹ್ಯಾಕರ್ಸ್ ಲಗ್ಗೆ
ವಾಷಿಂಗ್ಟನ್, ಅ.29: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಅಧಿಕೃತ ಖಾತೆಗಳನ್ನು ಹ್ಯಾಕ್ ಮಾಡಿದ್ದೇವೆ ಎಂದು ಸಿರಿಯನ್ ಎಲೆಕ್ಟ್ರಾನಿಕ್ ಆರ್ಮಿ(SEA) ಮಂಗಳವಾರ(ಅ.29) ಹೇಳಿಕೊಂಡಿದೆ.
ಸಿರಿಯನ್ ಸರ್ಕಾರವನ್ನು ಬೆಂಬಲಿಸುವ ಈ ಅತಿಕ್ರಮಿಗಳು ಈ ಹಿಂದೆ ದಿ ನ್ಯೂಯಾರ್ಕ್ ಟೈಮ್ಸ್, ಅಗೇನ್ಸ್ ಫ್ರಾನ್ಸ್ ಪ್ರೆಸ್ಸ್ ಹಾಗೂ ಇತರೆ ಮಾಧ್ಯಮ ಸಂಸ್ಥೆಗಳ ಅಧಿಕೃತ ಖಾತೆಗಳಿಗೆ ಕನ್ನ ಹಾಕಿತ್ತು. ಸಿರಿಯ ಸರ್ಕಾರದ ಪರ ಹೇಳಿಕೆಗಳನ್ನು ಕನ್ನ ಹಾಕಿದ ಖಾತೆಗಳ ಮೂಲಕ ಪ್ರಸಾರ ಮಾಡಲು ಆರಂಭಿಸಿತ್ತು. ಆದರೆ, ಬರಾಕ್ ಒಬಾಮ ಅವರ ಫೇಸ್ ಬುಕ್ ಅಥವಾ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿಲ್ಲ ಎಂದು ಶ್ವೇತಭವನದ ಮೂಲಗಳು ಹೇಳಿವೆ.

ಆದರೆ, ಒಬಾಮಾ ಅವರ ಖಾತೆಗೆ ಆತಂಕ ಇದ್ದೇ ಇದೆ. ಒಬಾಮಾ ಅವರ ಯೋಜನೆಗಳನ್ನು ಈಗ ಟ್ವಿಟ್ಟರ್ ಬಂದ್ ಮಾಡಲಿದೆ ಎಂದು ಸಿರಿಯನ್ ಗುಂಪು ಹೇಳಿಕೊಂಡಿದೆ. ಆದರೆ, ಸಿರಿಯನ್ ಗುಂಪು ಈ ರೀತಿ ಪ್ರಕಟಣೆ ನೀಡಿದ ಕೆಲ ನಿಮಿಷಗಳಲ್ಲೇ ಒಬಾಮಾ ಅವರ ಖಾತೆ ಎಂದಿನಂತೆ ಕಾರ್ಯ ನಿರ್ವಹಿಸಲು ಆರಂಭಿಸಿದೆ.
ಸಿರಿಯನ್ ಹ್ಯಾಕರ್ಸ್ ಗುಂಪು ಬರಾಕ್ ಒಬಾಮಾ ಅವರ ಖಾತೆಗೆ ಕನ್ನ ಹಾಕಿದ್ದಾರೆ ಎಂಬ ಸುದ್ದಿಯನ್ನು ಎಎಫ್ ಪಿ ವರದಿ ಮಾಡಿತ್ತು. ಆದರೆ, ಈ ಬಗ್ಗೆ ಶ್ವೇತ ಭವನ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಒಬಾಮಾ ಅವರ ಟ್ವಿಟ್ಟರ್ ಖಾತೆ ನಿರ್ವಹಿಸುವ ವಕ್ತಾರರು 'The @BarackObama Twitter account was not compromised; their link shortener was' ಎಂದು ಸಂದೇಶ ಹೊರಡಿಸಿದರು.
ಆದರೆ, ಒಬಾಮಾ ಅವರ ಫೇಸ್ ಬುಕ್, ಟ್ವಿಟ್ಟರ್ ಖಾತೆ ಅಷ್ಟೇ ಅಲ್ಲ ಅವರ ಜೀಮೇಲ್ ಖಾತೆಗೆ ಹಾಗೂ ಅಧಿಕೃತ ವೆಬ್ ತಾಣದ ಪುಟವೊಂದಕ್ಕೆ ಸಿರಿಯನ್ ಹ್ಯಾಕರ್ಸ್ ಆತಂಕ ಒಡ್ಡಿದ್ದಾರೆ. ಒಬಾಮಾ ಅವರ ಉಗ್ರ ವಿರೋಧಿ ಅಭಿಯಾನಕ್ಕೆ ಸಂಬಂಧಿಸಿದ ಅನೇಕ ಇಮೇಲ್ ಗಳನ್ನು ನಾವು ಸಂಗ್ರಹಿಸಿದ್ದೇವೆ ಎಂದು ಸಿರಿಯನ್ ಗುಂಪು ಹೇಳಿಕೊಂಡಿದೆ. ಈ ಬಗ್ಗೆ ಶ್ವೇತಭವನ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ಹಿಂದೆ ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆ ಟ್ವಿಟ್ಟರ್ ಖಾತೆಗೆ ಲಗ್ಗೆ ಇಟ್ಟಿದ್ದ ಸಿರಿಯನ್ ಹ್ಯಾಕರ್ಸ್ 'ಒಬಾಮಾ ಅವರು ಶ್ವೇತಭವನದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ' ಎಂದು ಟ್ವೀಟ್ ಮಾಡಿದ್ದರು. AFP ಫೋಟೊ ಸೇವೆ ಹಾಗೂ ಬಿಬಿಸಿಯ ಸಾಮಾಜಿಕ ಜಾಲ ತಾಣ ಪುಟಗಳು, ಅಲ್ ಜಜೀರಾ ಹಾಗೂ ಫೈನಾನ್ಷಿಯಲ್ ಟೈಮ್ಸ್ ಮತ್ತು ಗಾರ್ಡಿಯನ್ ನ್ಯೂಸ್ ಪೇಪರ್ ಮುಂತಾದ ಸಂಸ್ಥೆಗಳ ಖಾತೆಗೆ ಸಿರಿಯನ್ ಹ್ಯಾಕರ್ಸ್ ಯಶಸ್ವಿಯಾಗಿ ಲಗ್ಗೆ ಇಟ್ಟಿದ್ದರು.












Click it and Unblock the Notifications