ಸುಡಾನ್ ಹಿಂಸೆಗೆ 600 ಜನ ಬಲಿ, 7 ಲಕ್ಷ ಜನ ಬೀದಿಗೆ
ಖರ್ಟೋಮ್, ಸುಡಾನ್: ಎಲ್ಲೆಲ್ಲೂ ತುಂಬಿರುವ ಹೊಗೆ, ಜೀವ ಉಳಿಸಿಕೊಳ್ಳಲು ಕೈಯಲ್ಲಿ ಹಸುಗೂಸನ್ನು ಹಿಡಿದುಕೊಂಡು ಹೋಗುತ್ತಿರುವ ಬಾಣಂತಿ. ಮಕ್ಕಳು & ಮಹಿಳೆಯರ ಮುಖ ನೋಡದೆ ಹಲ್ಲೆ ನಡೆಸುವ ಸೈನಿಕರು, ಪೊಲೀಸರು. ಹಲೋ ಎಕ್ಸ್‌ಕ್ಯೂಸ್ ಮಿ.. ಇದು ಯಮಲೋಕದ ನರಕವಲ್ಲ.. ಭೂಮಿ ಮೇಲಿನ ಅಕ್ಷರಶಃ ಸುಡುಗಾಡು ಸುಡಾನ್‌ನ ಚಿತ್ರಣ.
ಯಾರೂ ಬಯಸದ ನರಕವೊಂದು ಭೂಮಿ ಮೇಲೆ ಸೃಷ್ಟಿಯಾಗಿದೆ. ಅಧಿಕಾರದ ಆಸೆ & ಸೇನಾಧಿಕಾರಿಗಳ ಸ್ವಾರ್ಥದ ಪರಿಣಾಮ ಸುಡಾನ್ ಅಕ್ಷರಶಃ ಸುಡುಗಾಡಂತೆ ಕಾಣುತ್ತಿದೆ. ಈವರೆಗೂ 7 ದಂಗೆ ನೋಡಿರುವ ಈ ಪುಟಾಣಿ ದೇಶ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಎಂದ ತಕ್ಷಣತಿಳಿಯುವುದು ಬಡತನ, ಹಸಿವಿನ ಜೊತೆಗೆ ಹಿಂಸೆ. ಅದರಲ್ಲೂ ಈ ಸುಡಾನ್ ಇದೆಯಲ್ಲ ಇದು ಹಿಂಸಾಚಾರದ ತವರು. ಯಾಕಂದ್ರೆ ಸುಡಾನ್ ನೆಲದಲ್ಲಿ ನಡೆದಷ್ಟು ಸಂಘರ್ಷಗಳು ಇಡೀ ಆಫ್ರಿಕಾದಲ್ಲಿ ಯಾವ ದೇಶದಲ್ಲೂ ನಡೆದಿಲ್ಲ ಅಂದರೆ ಅಲ್ಲಿನ ಪರಿಸ್ಥಿತಿ ನೀವೆ ಲೆಕ್ಕ ಹಾಕಿ.

600 ಸಾವು, 7 ಲಕ್ಷ ಜನ ಬೀದಿಗೆ
1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ. ಇದೀಗ ಏಪ್ರಿಲ್ 15ರಿಂದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಹೊತ್ತಿರುವ ಬೆಂಕಿಯಿಂದ ಈವರೆಗೂ 600 ಜನ ಮೃತಪಟ್ಟಿದ್ದು, 7 ಲಕ್ಷ ಜನ ಬೀದಿಗೆ ಬಿದ್ದಿದ್ದಾರೆ.
ವಿಶ್ವಸಂಸ್ಥೆ ಮಾತಿಗೆ ಬೆಲೆ ಇಲ್ಲ!
ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿದೆ. ಇದೇ ಕಾರಣಕ್ಕೆ ಸುಡಾನ್‌ನ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಸಂಧಾನ ಕೂಡ ಮಾಡಿಸಲು ಚರ್ಚೆ ನಡೆಸಿತ್ತು. ಆದರೆ ಸೇನೆ ಮತ್ತು ಅರೆಸೇನಾ ಪಡೆಗಳು ಸುಡಾನ್‌ನಲ್ಲಿ ನೆಮ್ಮದಿ ತರಲು ಮನಸ್ಸು ಮಾಡಿಲ್ಲ. ಹೀಗಾಗಿ ಹಿಂಸೆ ಭುಗಿಲೆದ್ದು ಎಲ್ಲೆಂದರಲ್ಲಿ ಬಾಂಬ್ ಬೀಳುತ್ತಿವೆ. ಜೀವ ಉಳಿಸಿಕೊಳ್ಳಲು ಬಡವರು ತಮ್ಮ ವಸ್ತುಗಳನ್ನ ತಲೆ ಮೇಲಿಟ್ಟು, ಊರು ಬಿಡುತ್ತಿದ್ದಾರೆ. ಜೀವ ಭಯದಲ್ಲೇ ನೆರೆ ದೇಶಗಳಿಗೆ ಓಡಿ ಹೋಗುತ್ತಿದ್ದಾರೆ.
50 ಲಕ್ಷ ಜನರ ಜೀವಕ್ಕೆ ಅಪಾಯ
ನೋಡ ನೋಡುತ್ತಲೇ ಸುಡಾನ್ ಸಂಘರ್ಷ 5ನೇ ವಾರಕ್ಕೆ ಕಾಲಿಟ್ಟಿದೆ. ಇಬ್ಬರು ಸೇನಾಧಿಕಾರಿಗಳ ಒಣ ಪ್ರತಿಷ್ಠೆಗೆ 50 ಲಕ್ಷ ಜನರ ಜೀವ ಅಪಾಯದಲ್ಲಿ ಸಿಲುಕಿದೆ. ಆಹಾರ, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಯ ವ್ಯತ್ಯಯ ಆಗುತ್ತಿರುವ ಕಾರಣ ಲಕ್ಷಾಂತರ ಜನ ಒದ್ದಾಡುತ್ತಿದ್ದಾರೆ. ಅದೆಷ್ಟೋ ಜನ ಆಹಾರ ಸಿಗದೆ ಉಸಿರು ಚೆಲ್ಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೆಪ್ಪಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಬದಲು ಯುದ್ಧ ಮುಂದುವರಿಸಿದ್ದಾರೆ ಸುಡಾನ್ ಸೇನಾಧಿಕಾರಿಗಳು. ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಿರುವ ದೇಶಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ನೆರೆ ದೇಶದಲ್ಲೂ ಸುಡಾನ್ ಪ್ರಜೆಗಳಿಗೆ ಹಿಂಸೆ
ಸುಡಾನ್ ಅಕ್ಕಪಕ್ಕದ ಈಜಿಫ್ಟ್, ಇಥಿಯೋಪಿಯಾ, ಚಾಡ್, ದಕ್ಷಿಣ ಸುಡಾನ್ ದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸುಡಾನ್ ಪ್ರಜೆಗಳು ಓಡಿ ಹೋಗಿದ್ದಾರೆ. 75 ಸಾವಿರ ಜನ ಸುಡಾನ್ ರಾಜಧಾನಿ ಖಾರ್ಟೂಮ್ ತೊರೆದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಿ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಭೀಕರ ಸಮಸ್ಯೆ ಎದುರಾಗಬಹುದು. ಸುಡಾನ್ ಅಕ್ಕಪಕ್ಕದ ದೇಶಗಳು ಕೂಡ ಹಿಂಸಾಚಾರ ಕಂಡು ಬೆಚ್ಚಿಬಿದ್ದಿವೆ. ಈ ನಡುವೆ ಸುಡಾನ್ ವಲಸಿಗರ ಮೇಲೆ ನೆರೆ ದೇಶಗಳೂ ದಬ್ಬಾಳಿಕೆ ನಡೆಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ & ಅರೆಸೇನಾ ಪಡೆಯ ದಾಗಲೊ ಕಿತ್ತಾಟದಲ್ಲಿ ಎಲ್ಲಾ ಹಾಳಾಗಿ ಹೋಗಿದೆ. ನೂರಾರು ಜನ ಜೀವ ಕಳೆದುಕೊಂಡರೆ, ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಹಿಂಸಾಚಾರ ನಿಲ್ಲಿಸಲು ವಿಶ್ವಸಂಸ್ಥೆ ಮಾಡಿದ ಪ್ರಯತ್ನಗಳು ವರ್ಕೌಟ್ ಆಗಿಲ್ಲ. ಹೀಗಾಗಿ ವಿಶ್ವಸಂಸ್ಥೆ ಬೇರೆಯದ್ದೇ ಕ್ರಮಕ್ಕೆ ಯೋಜಿಸುತ್ತಿದೆ. ಮುಂದೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಸುಡಾನ್‌ಗೆ ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications