Earthquake: ತೈವಾನ್‌ನಲ್ಲಿ ಮತ್ತೆ ಪ್ರಬಲ ಭೂಕಂಪನ: ಅಲುಗಾಡಿದ ಕಟ್ಟಡಗಳು- ಬೆಚ್ಚಿಬಿದ್ದ ಜನ!
ತೈವಾನ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ. ಇದರಿಂದ ಜನ ಆತಂಕದಿಂದ ಮನೆ ಬಿಟ್ಟು ಹೊರ ಓಡಿ ಬಂದಿದ್ದಾರೆ. ಇಂದು ಬೆಳಗ್ಗೆ 6.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರಿಂದಾಗಿ ತೈವಾನ್‌ನಾದ್ಯಂತ ಆತಂಕದ ವಾತಾವರಣ ಮನೆ ಮಾಡಿದೆ.
ತೈವಾನ್‌ನ ಪೂರ್ವ ನಗರವಾದ ಹುವಾಲಿಯನ್‌ನಿಂದ 34 ಕಿಮೀ ದೂರದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ಬಗ್ಗೆ ತೈವಾನ್‌ನ ಭೂಕಂಪನ ಮೇಲ್ವಿಚಾರಣಾ ಸಂಸ್ಥೆ ದೃಢಪಡಿಸಿದೆ. ಭೂಕಂಪದ ತೀವ್ರತೆಗೆ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ಅಲುಗಾಡಿವೆ. ಈ ಭೂಕಂಪನ 9.7ಕಿಮೀ ಆಳದಲ್ಲಿ ಸಂಭವಿಸಿದ್ದು ತಕ್ಷಣಕ್ಕೆ ಯಾವುದೇ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ತೈವಾನ್ ಆಗಾಗ ಭೂಕಂಪನಗಳಿಗೆ ಒಳಗಾಗುವ ಪ್ರದೇಶ. ಆಗಾಗ ಇಲ್ಲಿ ಭೂಮಿ ಕಂಪಿಸುತ್ತಲೇ ಇರುತ್ತದೆ.

ಇದೇ ವರ್ಷ (2024) ಏಪ್ರಿಲ್ ಆರಂಭದಲ್ಲಿ ತೈವಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಇದರಲ್ಲಿ ಒಂಬತ್ತು ಮಂದಿ ಮೃತಪಟ್ಟು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಮಯದಲ್ಲಿ ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಈ ಸಮಯದಲ್ಲಿ 7.2 ತೀವ್ರತೆಯಲ್ಲಿ ಭೂಕಂಪನವಾಗಿತ್ತು.
ಕಂಪನದ ಕೇಂದ್ರ ಬಿಂದು ತೈವಾನ್‌ನ ಪೂರ್ವ ಕರಾವಳಿಯಲ್ಲಿರುವ ಹುವಾಲಿಯನ್‌ನಿಂದ ಸುಮಾರು 18 ಕಿಮೀ ದೂರದಲ್ಲಿ ಮತ್ತು ಸುಮಾರು 35 ಕಿಮೀ ಆಳದಲ್ಲಿ ಇತ್ತು. ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಾನಿ ಉಂಟಾಗಿತ್ತು. ಭೂಕಂಪನದಿಂದ 64 ಜನ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದರು. 24 ಕಡೆ ಭೂಕುಸಿತ ಸಂಭವಿಸಿತ್ತು. 35 ರಸ್ತೆಗಳಲ್ಲಿ ಭಾರೀ ದೊಡ್ಡ ಬಿರುಕು ಕಾಣಿಸಿಕೊಂಡಿತ್ತು. ಹಲವೆಡೆ ಸೇತುವೆ ಸುರಂಗಗಳಿಗೆ ಹಾನಿ ಉಂಟಾಗಿತ್ತು.












Click it and Unblock the Notifications