ಶ್ರೀಲಂಕಾ ಚುನಾವಣೆ ಅಖಾಡದಲ್ಲಿ ಹೊಸ ಸಂಚಲನ, ಯಾರಿಗೆ ಗೆಲುವು?
ಭಾರತದ ನೆರೆಯ ದೇಶ, ದ್ವೀಪರಾಷ್ಟ್ರ ಶ್ರೀಲಂಕಾ ಚುನಾವಣೆ ಇಡೀ ಜಗತ್ತಿನ ಗಮನವನ್ನು ಸೆಳೆದಿತ್ತು. ಆರ್ಥಿಕ ಹಿನ್ನಡೆ, ಪ್ರವಾಸೋದ್ಯಮ ಕುಸಿತ, ಹೀಗೆ ನಾನಾ ಸಮಸ್ಯೆಯ ಸುಳಿಗೆ ಸಿಲುಕಿ ದಂಗೆಯನ್ನೇ ಎದುರಿಸಿದ್ದ ಶ್ರೀಲಂಕಾ ದೇಶದಲ್ಲಿ ಹೊಸ ಗಾಳಿ ಬೀಸುವ ಲಕ್ಷಣಗಳು ಕಂಡಿದ್ದವು. ಅದು ಇದೀಗ ನಿಜವಾಗಿದ್ದು, ಶ್ರೀಲಂಕಾ ಚುನಾವಣೆ ಫಲಿತಾಂಶದಲ್ಲಿ ಗೆದ್ದಿದ್ದು ಯಾರು ಗೊತ್ತೆ? ಬನ್ನಿ ತಿಳಿಯೋಣ.
ಅಷ್ಟಕ್ಕೂ ಶ್ರೀಲಂಕಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಎನ್‌ಪಿಪಿ ಭರ್ಜರಿ ಗೆಲುವು ಕಂಡಿದೆ. ಶ್ರೀಲಂಕಾ ಅಧ್ಯಕ್ಷರಾಗಿ ಇತ್ತೀಚೆಗೆ ಅನುರಾ ಕುಮಾರ ದಿಸ್ಸನಾಯಕೆ ಆಯ್ಕೆ ಆಗಿದ್ದರು. ಇದೇ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ ಚುನಾವಣೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಒಟ್ಟು 225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ಈಗ ನ್ಯಾಷನಲ್ ಪೀಪಲ್ಸ್ ಪವರ್ ಗೆದ್ದಿರುವುದು ಎಷ್ಟು ಸ್ಥಾನ ಗೊತ್ತೆ? ಮುಂದೆ ಓದಿ.

1.7 ಕೋಟಿಗೂ ಹೆಚ್ಚು ಮತದಾರರು...
225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿಗೆ ಗುರುವಾರ ಅಂದ್ರೆ ನವೆಂಬರ್ 14 ರಂದು ಎಲೆಕ್ಷನ್ ನಡೆದಿತ್ತು. ಹೀಗೆ ಈ ಚುನಾವಣೆಯಲ್ಲಿ 1 ಕೋಟಿ 70 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದರು. ಹೀಗಿದ್ದಾಗ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದ ಎನ್‌ಪಿಪಿ ಇದೀಗ 225 ಸ್ಥಾನಗಳ ಪೈಕಿ 159 ಸ್ಥಾನಗಳನ್ನು ಗೆದ್ದು ಬೀಗಿದೆ. ಹಾಗೇ ವಿರೋಧ ಪಕ್ಷಗಳು ಈಗ 40 ಸ್ಥಾನ ಪಡೆಯುವುದಕ್ಕೂ ಒದ್ದಾಡಿ ಹೋಗಿವೆ. ಈ ಮೂಲಕ ದಿಸ್ಸನಾಯಕೆ ಕೈ ಮತ್ತಷ್ಟು ಬಲವಾಗಿದೆ.
ಮತದಾರರ ಆಕ್ರೋಶ ಹೀಗೆ ಹೊರಬಿತ್ತಾ?
ಶ್ರೀಲಂಕಾ ಸುಂದರವಾದ ದೇಶ, ಶ್ರೀಲಂಕಾ ನೈಸರ್ಗಿಕ ಸಂಪನ್ಮೂಲದ ಮೂಲಕ ಜಾಗತಿಕ ಮಟ್ಟದಲ್ಲಿ ಕೂಡ ಗಮನ ಸೆಳೆಯುತ್ತದೆ. ಆದರೆ ಶ್ರೀಲಂಕಾ ಇತ್ತೀಚಿನ ವರ್ಷಗಳಲ್ಲಿ ಭಾರಿ ದೊಡ್ಡ ಸಂಕಷ್ಟಕ್ಕೆ ತುತ್ತಾಗಿತ್ತು. ಇದರ ಪರಿಣಾಮ, ಶ್ರೀಲಂಕಾ ಜನರು ತುತ್ತು ಅನ್ನಕ್ಕೂ ಪರದಾಡುವ ವಾತಾವರಣ ನಿರ್ಮಾಣ ಆಗಿತ್ತು. ಈ ಸಿಟ್ಟು ಸ್ಫೋಟಗೊಂಡು ಪ್ರತಿಭಟನೆಯ ರೂಪ ಕೂಡ ಪಡೆದಿತ್ತು. ಹೀಗಿದ್ದಾಗ, ಶ್ರೀಲಂಕಾ ದೇಶದಲ್ಲಿ ಹಿಂದೆ ಆಡಳಿತ ನಡೆಸಿರುವ ಪಕ್ಷಗಳು ಈ ಚುನಾವಣೆಯಲ್ಲಿ ಧೂಳಿಪಟ ಆಗಿ ಹೋಗಿವೆ.
ಭಾರತಕ್ಕೂ ಮುಖ್ಯ ಲಂಕಾ ಚುನಾವಣೆ!
ಶ್ರೀಲಂಕಾ & ಭಾರತ ಅಕ್ಕಪಕ್ಕದ ದೇಶಗಳು, ಇದಕ್ಕಿಂತ ಹೆಚ್ಚಾಗಿ ಹಿಂದೂ ಮಹಾಸಾಗರದ ಮೇಲೆ ಭಾರತ ತನ್ನ ಬಲ ಪ್ರದರ್ಶನ ಮಾಡಲು ಶ್ರೀಲಂಕಾ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತದೆ. ಹೀಗಿದ್ದಾಗ ಶ್ರೀಲಂಕಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಭಾರತದ ಜೊತೆಗೆ ಹೊಸ ಅಧ್ಯಕ್ಷ & ಹೊಸ ಸರ್ಕಾರ ಯಾವ ರೀತಿ ಸಂಬಂಧ ಗಟ್ಟಿಗೊಳಿಸುತ್ತೆ? ಎಂಬುದನ್ನ ಕಾದು ನೋಡಬೇಕು.












Click it and Unblock the Notifications