
2 ವಾರ ವರ್ಕ್ ಫ್ರಮ್ ಹೋಂಗೆ ಸೂಚಿಸಿದ ಶ್ರೀಲಂಕಾ, ಏಕೆ?
ಕೊಲಂಬೋ, ಜು. 18: ಆರ್ಥಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ನೆರೆಯ ಶ್ರೀಲಂಕಾ ಸರ್ಕಾರ ಭಾರೀ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದೆ. ಹಲವು ದೇಶಗಳ ನೆರವಿನ ಹೊರತಾಗಿಯೂ ಶ್ರೀಲಂಕಾ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ಇಲ್ಲ. ಕಾಗದದ ಕೊರತೆಯಿಂದ ಪರೀಕ್ಷೆಗಳನ್ನೇ ನಿಲ್ಲಿಸಿದ್ದ ಸರ್ಕಾರ ಈಗ ಇಂಧನ ಕೊರತೆಯಿಂದ ತನ್ನ ಸರ್ಕಾರಿ ನೌಕಕರಿಗೆ 2 ವಾರಗಳ ಕಾಲ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದೆ.
ಶ್ರೀಲಂಕಾ ತನ್ಮೂಲಕ ಅಗತ್ಯವಿರುವ ಇಂಧನ ಆಮದುಗಳನ್ನು ಪಾವತಿಸಲು ವಿದೇಶಿ ವಿನಿಮಯವನ್ನು ಹುಡುಕಲು ಪರದಾಡುತ್ತಿದೆ. ಸರ್ಕಾರದ ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹವು ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಸರ್ಕಾರದ ದುರಾಡಳಿತ ಮತ್ತು ಕೋವಿಡ್- 19 ಸಾಂಕ್ರಾಮಿಕದ ಕಾರಣದಿಂದ 22 ಮಿಲಿಯನ್ ಜನರಿರುವ ದೇಶ ನಿರೀಕ್ಷಿಸಲಾಗದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ.
ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ
ಇಂಧನ ಪೂರೈಕೆಯ ಮೇಲಿನ ತೀವ್ರ ಮಿತಿಗಳು, ದುರ್ಬಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಖಾಸಗಿ ವಾಹನಗಳನ್ನು ಬಳಸುವಲ್ಲಿನ ತೊಂದರೆಗಳನ್ನು ಪರಿಗಣಿಸಿ ಈ ಸುತ್ತೋಲೆಯು ಕನಿಷ್ಟ ಸಿಬ್ಬಂದಿಯನ್ನು ಸೋಮವಾರದಿಂದ ಕೆಲಸಕ್ಕೆ ಬರುವಂತೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸಾರ್ವಜನಿಕ ಆಡಳಿತ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. ಸರ್ಕಾರದ ಸರಿಸುಮಾರು ಒಂದು ಮಿಲಿಯನ್ ಸರ್ಕಾರಿ ನೌಕರರಲ್ಲಿ, ಆರೋಗ್ಯ ಸೇವೆಯಂತಹ ಅಗತ್ಯ ಸೇವೆಗಳನ್ನು ಒದಗಿಸುವವರು ತಮ್ಮ ಕಚೇರಿಗಳಲ್ಲಿ ಕರ್ತವ್ಯಕ್ಕೆ ಬರುವುದನ್ನು ಮುಂದುವರಿಸುತ್ತಾರೆ ಎಂದು ಸುತ್ತೋಲೆ ಹೇಳಿದೆ.

ಕಿಲೋಮೀಟರ್‌ಗಳಷ್ಟು ವಾಹನಗಳ ಸಾಲು
ಈ ವಾರದ ಆರಂಭದಲ್ಲಿ ದೀರ್ಘಕಾಲದ ಇಂಧನ ಕೊರತೆಯನ್ನು ನಿಭಾಯಿಸಲು ಮತ್ತು ಆಹಾರವನ್ನು ಬೆಳೆಯುವುದನ್ನು ಪ್ರೋತ್ಸಾಹಿಸಲು ಸಾರ್ವಜನಿಕ ವಲಯದ ಕಾರ್ಮಿಕರಿಗೆ ನಾಲ್ಕು ದಿನಗಳ ಕೆಲಸವನ್ನು ಸರ್ಕಾರ ಅನುಮೋದಿಸಿತು. ಈ ವಾರ ದೇಶಾದ್ಯಂತ ಅನೇಕ ಗ್ಯಾಸ್ ಸ್ಟೇಷನ್‌ಗಳಲ್ಲಿ ಹಲವಾರು ಕಿಲೋಮೀಟರ್‌ಗಳಷ್ಟು ವಾಹನಗಳ ಸಾಲುಗಳು ರೂಪುಗೊಂಡಿವೆ. ಕೆಲವು ಜನರು ಇಂಧನಕ್ಕಾಗಿ 10 ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದಾರೆ. ಸೋಮವಾರ ಕೊಲಂಬೊದಲ್ಲಿ ತನ್ನ ನಿಯೋಗದೊಂದಿಗೆ ಪ್ಯಾಕೇಜ್‌ಗಾಗಿ ದೇಶವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೊಂದಿಗೆ ಮಾತುಕತೆ ನಡೆಸುತ್ತಿದೆ.
ಆರ್ಥಿಕ ಬಿಕ್ಕಟ್ಟಿಗೆ ನಮ್ಮ ತಪ್ಪುಗಳೇ ಕಾರಣ: ದಿವಾಳಿಯಾದ ಮೇಲೆ ಒಪ್ಪಿಕೊಂಡ ಶ್ರೀಲಂಕಾ ಅಧ್ಯಕ್ಷ

ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 300 ರೂಪಾಯಿ
ಮುಂದಿನ ನಾಲ್ಕು ತಿಂಗಳುಗಳಲ್ಲಿ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾದ 1.7 ಮಿಲಿಯನ್ ಶ್ರೀಲಂಕಾದವರಿಗೆ ನೆರವು ನೀಡಲು 47 ಮಿಲಿಯನ್ ಡಾಲರ್ ಸಂಗ್ರಹಿಸುವ ಯೋಜನೆಯನ್ನು ವಿಶ್ವಸಂಸ್ಥೆಯು ವಿವರಿಸಿದೆ. ಮುಂಬರುವ ತಿಂಗಳುಗಳಲ್ಲಿ 5 ಮಿಲಿಯನ್ ಶ್ರೀಲಂಕಾದವರು ಆಹಾರದ ಕೊರತೆ ಭೀಕರ ಪರಿಣಾಮ ಎದುರಿಸಬಹುದು ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಇರುವ ಸಾಲಕ್ಕೆ ಬಡ್ಡಿ ಕಟ್ಟುವ ಸಾಮರ್ಥ್ಯವೂ ಲಂಕಾಗೆ ಕಡಿಮೆ ಆಗಿದೆ. ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 300 ರೂಪಾಯಿಗೂ (ಲಂಕಾ ರೂ) ಹೆಚ್ಚು ಬೆಲೆಗೆ ಏರಿದೆ. ಬಹುತೇಕ ಕಡೆ ನಿತ್ಯ 12 ತಾಸು ಪವರ್ ಕಟ್ ಮಾಡುವ ಸ್ಥಿತಿ ಇನ್ನೂ ಇದೆ ಎನ್ನಲಾಗಿದೆ.

ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿದೆ
ಶ್ರೀಲಂಕಾದ ವಿವಿಧ ಸರಕಾರಗಳು ಆರ್ಥಿಕ ಶಿಸ್ತು ಅಥವಾ ವಿತ್ತೀಯ ಶಿಸ್ತು ಕಾಯ್ದುಕೊಳ್ಳದೇ ಹೋಗಿವೆ. ಹೀಗಾಗಿ, ಇವತ್ತಿನ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುವ ಸಾಮರ್ಥ್ಯ ಲಂಕಾಗೆ ಕುಂಠಿತವಾಗಿದೆ. ಲಂಕಾದ ಬಜೆಟ್‌ನಲ್ಲಿ ಸತತವಾಗಿ ವಿತ್ತೀಯ ಕೊರತೆ ಎದುರಾಗಿದೆ. ಹಾಗೆಯೇ, ಕರೆಂಟ್ ಅಕೌಂಟ್ ಕೊರತೆಯೂ ಸತತವಾಗಿ ಕಾಡಿದೆ. ಇವೆರಡೂ ಕೂಡ ಒಂದು ಆರ್ಥಿಕತೆಯನ್ನ ಅಪಾಯಕ್ಕೆ ದೂಡುತ್ತವೆ. ವಿತ್ತೀಯ ಕೊರತೆಯಾಗಲೀ (Budget Deficit) ಚಾಲ್ತಿ ಖಾತೆ ಕೊರತೆಯಾಗಲೀ (Current Account Deficit) ದೇಶದ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಇದು ದೀರ್ಘ ಕಾಲ ಮುಂದುವರಿದರೆ ಅದರ ದುಷ್ಪರಿಣಾಮಗಳಿಂದ ಆರ್ಥಿಕ ಶಕ್ತಿ ತೀರಾ ದುರ್ಬಲಗೊಳ್ಳುತ್ತದೆ ಎಂಬುದು ತಜ್ಞರ ಅನಿಸಿಕೆ.

ಹಣ ಎರಡು ವರ್ಷದಲ್ಲಿ ಶೇ. 70ರಷ್ಟು ಕಡಿಮೆ
ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಶ್ರೀಲಂಕಾವನ್ನು ಉಪೇಕ್ಷಿಸಿದ ಪರಿಣಾಮವಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಲಂಕಾಗೆ ಸಾಲ ಸಿಗುವುದು ದುಸ್ತರವಾಯಿತು. ಇದು ಈಗಿನ ದಿಢೀರ್ ಆರ್ಥಿಕ ಹೊಡೆತಕ್ಕೆ ಎಡೆ ಮಾಡಿಕೊಟ್ಟಿತು. ಅದರ ವಿದೇಶ ವಿನಿಯಮ ಮೀಸಲು ಹಣ ಎರಡು ವರ್ಷದಲ್ಲಿ ಶೇ. 70ರಷ್ಟು ಕಡಿಮೆ ಆಗಿದೆ. ಶ್ರೀಲಂಕಾ ಸರಕಾರ ಸಾವಯವ ಕೃಷಿಗೆ ಪುಷ್ಟಿ ನೀಡುವ ಭರದಲ್ಲಿ ಎಲ್ಲಾ ರಸಗೊಬ್ಬರಗಳನ್ನು ನಿಷೇಧ ಮಾಡಿತು. ಇದರಿಂದ ರೈತರ ಬೆಳೆ ಇಳುವರಿ ತೀರಾ ಕಡಿಮೆ ಆಯಿತು. ಇದೂ ಕೂಡ ಲಂಕಾದ ಆರ್ಥಿಕ ಹಿನ್ನಡೆಗೆ ಕಾರಣವಾಯಿತು.
(ಒನ್ಇಂಡಿಯಾ ಸುದ್ದಿ)