ಹಿಮ ಚಂಡಮಾರುತಕ್ಕೆ ಸ್ಥಬ್ದಗೊಂಡಿದೆ ಬಫೆಲೊ
ನ್ಯೂಯಾರ್ಕ್, ನ. 20: ಅಮೆರಿಕದ ನ್ಯೂ ಯಾರ್ಕ್ ರಾಜ್ಯದ ಬಫೆಲೊ ನಗರದಲ್ಲಿ ಬುಧವಾರ ಬಿದ್ದ ದಾಖಲೆ ಪ್ರಮಾಣದ ಹಿಮ ಮಳೆಯಿಂದ ನಗರ ಹಿಮಾಚ್ಛಾದಿತವಾಗಿದೆ. ಏಳು ಜನ ಸಾವಿಗೀಡಾಗಿದ್ದು, ಓರ್ವ ಗರ್ಭಿಣಿ ಆಸ್ಪತ್ರೆಗೆ ತೆರಳಲಾಗದೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ಎಲ್ಲರ ಮನೆ ಹಾಗೂ ಕಾರುಗಳು ಹಿಮಾಚ್ಛಾದಿತವಾಗಿರುವ ಹಿನ್ನೆಲೆಯಲ್ಲಿ ಜನರು ಮನೆಯ ಬಾಗಿಲನ್ನೂ ತೆರೆಯಲಾಗದೆ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾರೆ. ಹೊರಬಂದವರು ವಿವಿಧ ಮನೆಗಳು ಹಾಗೂ ವಾಹನಗಳ ಮೇಲಿನ ಹಿಮ ತೆಗೆಯುವುದರಲ್ಲಿ ನಿರತರಾಗಿದ್ದಾರೆ.

ಈಗ ಬಂದಿರುವ ಒಂದು ಚಂಡ ಮಾರುತವು ನಗರದಲ್ಲೆಡೆ 5.5 ಅಡಿ ಎತ್ತರದ ಹಿಮದ ಹೊದಿಕೆಯನ್ನು ಸೃಷ್ಟಿಸಿದೆ. ಗುರುವಾರ ಮತ್ತೊಂದು ಚಂಡ ಮಾರುತ ಬರುವ ನಿರೀಕ್ಷೆ ಇದ್ದು, ಹಿಮದ ಹೊದಿಕೆ ಇನ್ನೂ 3 ಅಡಿ ಎತ್ತರವಾಗಬಹುದೆಂದು ಅಂದಾಜಿಸಲಾಗಿದೆ.
ರಾಜ್ಯದ 212 ಕಿ.ಮೀ. ದೂರದವರೆಗೆ ಸುಮಾರು 100 ವಾಹನಗಳು ಹಿಮದಲ್ಲಿ ಹುಗಿದುಕೊಂಡಿವೆ. ರಾಜ್ಯದ ಪ್ರಮುಖ ಹೆದ್ದಾರಿ ಕೂಡ ಬುಧವಾರ ಬಂದ್ ಆಗಿತ್ತು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಯಾಗರ ವಿಶ್ವವಿದ್ಯಾಲಯದ ಬಾಸ್ಕೆಟ್‌ಬಾಲ್ ತಂಡ ಹಿಮ ಮಳೆಯಲ್ಲಿ ಸಿಕ್ಕಿಬಿದ್ದಿದೆ.

ಸಂಪೂರ್ಣ ನಗರವನ್ನು ಸ್ವಚ್ಛಗೊಳಿಸಲು 4ರಿಂದ 5 ದಿನಗಳೇ ಬೇಕು ಎಂದು ನ್ಯೂಯಾರ್ಕ್ ರಾಜ್ಯಪಾಲ ಆಂಡ್ರ್ಯೂ ಕಾಮೊ ತಿಳಿಸಿದ್ದಾರೆ. ಅಲ್ಲದೆ, ನಾವು ಏನೇನನ್ನೋ ಸಾಧಿಸಿದ್ದೇವೆ. ಆದರೆ, ಈ ಹಿಮ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿನ ತಾಪಮಾನ ಘನೀಕರಣಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಮನೆಯೊಳಗೇ ಇರಬೇಕು. ಶೀಘ್ರ ರಸ್ತೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.













Click it and Unblock the Notifications