Smit Machchhar: ಭಾರತೀಯ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ನಿಂದ ಶೌರ್ಯ ಪ್ರಶಸ್ತಿ
Smit Machchhar: ಇತ್ತೀಚೆಗಷ್ಟೇ ಫ್ಲೈದುಬೈ ವಿಮಾನದ ಭೀಕರ ಅವಘಡ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇಸ್ರೇಲ್ 'ಶೌರ್ಯ ಪ್ರಶಸ್ತಿ' ಘೋಷಣೆ ಮಾಡಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
'ಫ್ಲೈದುಬೈ' ವಿಮಾನ ಹಾರಾಟದ ಸಮಯದಲ್ಲಿ ಕಾಕ್‌ಪಿಟ್‌ನಲ್ಲಿದ್ದ ಓಮನ್ ಪ್ರಜೆಯಾದ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ ಎಂಬಾತ ದಿಢೀರ್ ವಿಮಾನವನ್ನು ಪತನಗೊಳಿಸಲು ಯತ್ನಿಸಿದನು. ಅಷ್ಟೇ ಅಲ್ಲದೆ ಕಾಕ್‌ಪಿಟ್‌ನಲ್ಲಿದ್ದ ಕ್ರಾಶ್ ಆಕ್ಸ್ (ಕೊಡಲಿ) ತೆಗೆದುಕೊಂಡು ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದನು.

ಎದೆಗುಂದದ ಸ್ಮಿತ್ ಮಚ್ಚರ್
ಸಹ-ಪೈಲಟ್ ನಡೆಸಿದ ಹಲ್ಲೆಯಿಂದಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಗಂಭೀರವಾಗಿ ಗಾಯಗೊಂಡು, ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಆದರೆ, ಇಂತಹ ಕ್ಷಣದಲ್ಲೂ ಎದೆಗುಂದದ ಸ್ಮಿತ್, ತಮ್ಮ ಸಂಪೂರ್ಣ ಶಕ್ತಿಯನ್ನು ಒಟ್ಟುಗೂಡಿಸಿ ಕಾಕ್‌ಪಿಟ್‌ನ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು.
174 ಜನರ ಪ್ರಾಣ ಉಳಿಸಿದ ಸ್ಮಿತ್ ಮಚ್ಚರ್
ಕಾಕ್‌ಪಿಟ್ ಬಾಗಿಲು ತೆರೆಯುತ್ತಿದ್ದಂತೆಯೇ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ತಕ್ಷಣವೇ ಒಳಗಡೆ ನುಗ್ಗಿ, ಹಲ್ಲೆ ನಡೆಸುತ್ತಿದ್ದ ಸಹ-ಪೈಲಟ್‌ನನ್ನು ಹಿಡಿದುಕೊಂಡು ಎಳೆದೊಯ್ದರು. ಸ್ಮಿತ್ ಮಚ್ಚಾರ್ ಅವರ ಈ ಸಾಹಸ ಮತ್ತು ಕ್ಷಣಮಾತ್ರದ ನಿರ್ಧಾರದಿಂದಾಗಿ ಭಾರಿ ದುರಂತವೊಂದು ತಪ್ಪಿ, ವಿಮಾನದಲ್ಲಿದ್ದ 174 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾದರು.
ಇಸ್ರೇಲ್ ಅಧ್ಯಕ್ಷರಿಂದ ಶೌರ್ಯ ಪ್ರಶಸ್ತಿ ಘೋಷಣೆ
ಭಾರತೀಯ ಪೈಲಟ್‌ನ ಈ ಸಾಹಸ ಹಾಗೂ ಸಮಯ ಪ್ರಜ್ಞೆಯನ್ನು ಗೌರವಿಸಿ, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ 'ಇಸ್ರೇಲಿ ಶೌರ್ಯ' ಪ್ರಶಸ್ತಿಯನ್ನು ಸ್ಮಿತ್ ಮಚ್ಚರ್‌ಗೆ ಘೋಷಿಸಿದ್ದಾರೆ. ಇನ್ನೂ ಭಾರತದ ಪೈಲಟ್‌ನ ಈ ಸಾಹಸಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏನಿದು ಭೀಕರ ಘಟನೆ?
'ಫ್ಲೈದುಬೈ' ಸಂಸ್ಥೆಯ FZ1073 ವಿಮಾನವು ಸುಮಾರು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಕಾಕ್‌ಪಿಟ್‌ನಲ್ಲಿದ್ದ ಸಹ-ಪೈಲಟ್ ಓಮನ್ ಪ್ರಜೆ ಹಮ್ಮಮ್ ಅಲ್-ಹಮ್ಮಮಿ ಎಂಬಾತ ಇದ್ದಕ್ಕಿದ್ದಂತೆ ವಿಮಾನವನ್ನು ಪತನಗೊಳಿಸಲು ಸಂಚು ರೂಪಿಸಿದನು. ಆತ ಪ್ರಾರ್ಥನೆ ಮಾಡುವ ನೆಪದಲ್ಲಿ ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಗಮನವನ್ನು ಬೇರೆಡೆಗೆ ಸೆಳೆದು, ಕಾಕ್‌ಪಿಟ್‌ನಲ್ಲಿ ತುರ್ತು ಸಂದರ್ಭಕ್ಕಾಗಿ ಇರಿಸಲಾಗಿದ್ದ ಕ್ರಾಶ್ ಆಕ್ಸ್ (ಕೊಡಲಿ) ತೆಗೆದುಕೊಂಡು ಸ್ಮಿತ್ ಅವರ ಮೇಲೆ ಹಲ್ಲೆ ನಡೆಸಿದನು.
ಪ್ರಾಣಾಪಾಯದ ನಡುವೆಯೂ ಹೋರಾಟ
ದಾಳಿಯಿಂದಾಗಿ ವಿಮಾನವು ಕೆಲವೇ ಸೆಕೆಂಡುಗಳಲ್ಲಿ 17,000ಕ್ಕೂ ಹೆಚ್ಚು ಅಡಿ ದಿಢೀರ್ ಕೆಳಕ್ಕೆ ಜಾರಿತು ಹಾಗೂ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾದರು. ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೂ ಮತ್ತು ದೃಷ್ಟಿ ಮಂಜಾಗುತ್ತಿದ್ದರೂ, ಕ್ಯಾಪ್ಟನ್ ಸ್ಮಿತ್ ಧೈರ್ಯಗುಂದಲಿಲ್ಲ. ತಮ್ಮ ಜೀವದ ಹಂಗು ತೊರೆದು, ಕಾಕ್‌ಪಿಟ್ ಬಾಗಿಲ ಬಳಿ ತೆರಳಿ, ಅದರ ಲಾಕ್ ಅನ್ನು ತೆರೆಯುವಲ್ಲಿ ಯಶಸ್ವಿಯಾದರು.
ಕಾಕ್‌ಪಿಟ್ ಬಾಗಿಲು ತೆರೆಯುತ್ತಿದ್ದಂತೆಯೇ ವಿಮಾನದಲ್ಲಿದ್ದ ಇಸ್ರೇಲ್‌ನ ವೈದ್ಯ ಡಾ. ಶೋಟಾ ಮುಸಾಯೇವ್, ಝ್ವಿಕಾ ಮನೆಸ್ ಸೇರಿದಂತೆ ಆರು ಮಂದಿ ಸಹ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ನುಗ್ಗಿ, ದಾಳಿಕೋರ ಸಹ-ಪೈಲಟ್‌ನನ್ನು ಹೆಡ್‌ಫೋನ್ ವೈರ್ ಹಾಗೂ ಜಿಪ್ ಟೈಗಳ ನೆರವಿನಿಂದ ಕಟ್ಟಿಹಾಕಿ ಹತೋಟಿಗೆ ತಂದರು.
ಬಳಿಕ ವಿಮಾನದಲ್ಲಿದ್ದ ಹೆಚ್ಚುವರಿ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿ, ದೊಡ್ಡ ವಿಮಾನ ದುರಂತವನ್ನು ತಪ್ಪಿಸಿದರು. ಇನ್ನೂ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಈ ಪ್ರಶಸ್ತಿಯನ್ನು ಪ್ರಕಟಿಸುತ್ತಾ, 'ಸ್ಮಿತ್ ಮಚ್ಚಾರ್ ಅವರ ಧೈರ್ಯವು ಜಗತ್ತನ್ನೇ ಬೆಚ್ಚಿಬೀಳಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸಿದೆ,' ಎಂದು ಶ್ಲಾಘಿಸಿದ್ದಾರೆ.
ಅಷ್ಟೇ ಅಲ್ಲದೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, 'ನೀವು ಇಸ್ರೇಲ್, ಭಾರತ ಹಾಗೂ ಇಡೀ ಜಗತ್ತಿನ ಕಣ್ಣಿಗೆ ನಿಜವಾದ ನಾಯಕ,' ಎಂದು ಕೊಂಡಾಡಿದ್ದಾರೆ. ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಮಿತ್ ಮಚ್ಚಾರ್ ಅವರಿಗೆ ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಸಮಾರಂಭದಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಿದ್ದಾರೆ.
ಸ್ಮಿತ್ ಮಚ್ಚರ್ ಪ್ರಸ್ತುತ ಆರೋಗ್ಯ ಸ್ಥಿತಿ
ಸೌದಿ ಅರೇಬಿಯಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ, ಸ್ಮಿತ್ ಮಚ್ಚಾರ್ ಅವರನ್ನು ಅಬುಧಾಬಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡ ತಕ್ಷಣ ಇಸ್ರೇಲ್‌ನಲ್ಲಿ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿದುಬಂದಿದೆ.


Click it and Unblock the Notifications
