ಮಾನನಷ್ಟ ಮೊಕದ್ದಮೆ; ಸಿಂಗಪುರ ಪ್ರಧಾನಿಗೆ 100,000 ಡಾಲರ್ ಕೊಡಲು ಕೋರ್ಟ್ ಸೂಚನೆ
ಸಿಂಗಪುರ, ಮಾರ್ಚ್ 24: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 100,000 ಡಾಲರ್ ಹಣ ಪರಿಹಾರ ನೀಡಬೇಕೆಂದು ಬ್ಲಾಗರ್‌ಗೆ ಸಿಂಗಪುರ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಮಲೇಷ್ಯಾದ ರಾಜ್ಯ ನಿಧಿಯಲ್ಲಿ ನಡೆದ ಹಣಕಾಸಿನ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಉಲ್ಲೇಖಿಸಿ ಆರ್ಥಿಕ ಸಲಹೆಗಾರ ಲಿಯಾಂಗ್ ಶೆ ಹಿಯಾನ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಲಿಯಾಂಗ್ ವಿರುದ್ಧ ಪ್ರಧಾನಿ ಮೊಕದ್ದಮೆ ಹೂಡಿದ್ದರು.
ಈ ಪೋಸ್ಟ್ ಹಂಚಿಕೊಂಡ ಮೂರು ದಿನದ ನಂತರ ಲಿಯಾಂಗ್ ನವೆಂಬರ್ 2018ರಲ್ಲಿ ಫೇಸ್‌ಬುಕ್ ಪೋಸ್ಟ್ ಅಳಿಸಿ ಹಾಕಿದ್ದರು. ಈ ಬಗ್ಗೆ ವಿಚಾರಣೆ ಕೈಗೊಂಡ ನ್ಯಾಯಾಧೀಶ ಎಡಿತ್ ಅಬ್ದುಲ್ಲಾ ಅವರು, "ಲಿಯಾಂಗ್, ಪ್ರಧಾನಿ ವಿರುದ್ಧ ಮಾನಹಾನಿಕರ ಪದಗಳನ್ನು ಬಳಸಿಲ್ಲ ಎಂದು ಹೇಳಿಕೊಳ್ಳುವ ಅಂಶಗಳು ಕಾಣುತ್ತಿಲ್ಲ" ಎಂದು ಹೇಳಿದ್ದು, ಲಿಯಾಂಗ್ ಹಂಚಿಕೊಂಡ ಸುದ್ದಿ ಪ್ರಧಾನಿ ಅವರು ಗಂಭೀರ ಹಾಗೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸೂಚಿಸುವಂತಿದೆ ಎಂದು ಹೇಳಿ 100,000 ಡಾಲರ್ ಹಣ ಪರಿಹಾರ ನೀಡಬೇಕೆಂದು ಸೂಚಿಸಿದ್ದಾರೆ.

ಲಿಯಾಂಗ್ ಅವರ ಪೋಸ್ಟ್‌ಗೆ ಒಟ್ಟು 45 ಜನರು ಪ್ರತಿಕ್ರಿಯಿಸಿದ್ದರು. ಮಲೇಷಿಯನ್ ಆನ್‌ಲೈನ್ ಸುದ್ದಿ ಮಾಧ್ಯಮದಿಂದ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದು, ಸುದ್ದಿಯಲ್ಲಿ ಏನನ್ನೂ ಬದಲಾಯಿಸದೇ ಹಂಚಿಕೊಂಡಿರುವುದಾಗಿ ಲಿಯಾಂಗ್ ಉಲ್ಲೇಖಿಸಿದ್ದರು.












Click it and Unblock the Notifications