ಉಕ್ರೇನ್ ಬುಡಕ್ಕೆ ಬಾಂಬ್ ಇಟ್ಟ ರಷ್ಯಾ ಅಧ್ಯಕ್ಷ ಪುಟಿನ್!
ಯುದ್ಧದಲ್ಲಿ ಮತ್ತೊಂದು ಚಾಣಾಕ್ಷ್ಯ ನಡೆ ಮುಂದಿಟ್ಟಿರುವ ರಷ್ಯಾ ಅಧ್ಯಕ್ಷ ಪುಟಿನ್, ಈಗ ಉಕ್ರೇನ್ ಬುಡ ಅಲ್ಲಾಡಿ ಹೋಗುವಂತೆ ಮಾಡಿದ್ದಾರೆ. ಇಷ್ಟುದಿನ ಕೇವಲ ಉಕ್ರೇನ್ ಜಾಗ & ಉಕ್ರೇನ್ ಸೇನೆ ಮೇಲೆ ದಾಳಿ ಮಾಡುತ್ತಿದ್ದ ರಷ್ಯಾ ಇದೀಗ ಇಡೀ ಉಕ್ರೇನ್‌ನ ನುಂಗಲು ಪ್ಲ್ಯಾನ್ ಮಾಡಿದೆ. ಹಾಗಾದರೆ ಪುಟಿನ್ ರೂಪಿಸಿರುವ ರಣತಂತ್ರ ಹೇಗಿದೆ? ರಷ್ಯಾ ನಿಗೂಢ ನಡೆಯ ಹಿಂದಿನ ಉದ್ದೇಶ ಏನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಈಗಾಗಲೇ ಉಕ್ರೇನ್‌ನ ಭಾಗಶಃ ಭೂಮಿ ರಷ್ಯಾ ಹಿಡಿತಕ್ಕೆ ಸಿಕ್ಕಿದ್ದು, ಹೀಗಾಗಿ ಆ ಜಾಗವನ್ನ ಶಾಶ್ವತವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಅಧ್ಯಕ್ಷರು ತಂತ್ರ ರೂಪಿಸಿದ್ದಾರೆ. ಈಗ ಇದೇ ರಣತಂತ್ರದ ಭಾಗವಾಗಿ ವ್ಲಾದಿಮಿರ್ ಪುಟಿನ್ ಹೊಸ ಹೇಳಿಕೆ ನೀಡಿದ್ದಾರೆ. ಅಮೆರಿಕ ಮತ್ತು ನ್ಯಾಟೋ ಒಕ್ಕೂಟಕ್ಕೆ ಈ ಮೂಲಕ ಶಾಕ್ ಮೇಲೆ ಶಾಕ್ ಕೊಡ್ತಿದ್ದಾರೆ ವ್ಲಾದಿಮಿರ್ ಪುಟಿನ್. ಹಾಗಾದರೆ ತನ್ನ ಶತ್ರುಗಳಿಗೆ ಪುಟಿನ್ ಕೊಟ್ಟ ಸಂದೇಶ ಎಂತಹದ್ದು? ಇದರಿಂದ ರಷ್ಯಾ ಹಾಗೂ ಉಕ್ರೇನ್ ಯುದ್ಧ ಮತ್ತಷ್ಟು ಭೀಕರವಾಗುತ್ತಾ?

ಒಂದೇ ಕಲ್ಲಿಗೆ ಎರಡು ಹಕ್ಕಿ!
ರಷ್ಯಾ ಅಧ್ಯಕ್ಷ ಪುಟಿನ್ ಅವರ ನಡೆ ಈಗ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ ಇದೆ. ಅತ್ತ ಉಕ್ರೇನ್‌ಗೆ ಬುದ್ಧಿ ಕಲಿಸಿದಂತೆಯೂ ಇದೆ ಮತ್ತೊಂದು ಕಡೆ ಸೋವಿಯತ್ ರಷ್ಯಾ ಈ ಹಿಂದೆ ಕಳೆದುಕೊಂಡ ಜಾಗಗಳನ್ನು ವಾಪಸ್ ಪಡೆಯಲು ಸಹಾಯ ಮಾಡುತ್ತಿದೆ. ಇದೀಗ ಈ ಬಗ್ಗೆ ವಿಶೇಷ ಸಂದೇಶ ನೀಡಿದ ಪುಟಿನ್, ಈ ತಿಂಗಳು ಉಕ್ರೇನ್ ನೆಲದಲ್ಲಿ ನಡೆದಿರುವ ಸ್ಥಳೀಯ ಚುನಾವಣೆಗಳಿಂದ ರಷ್ಯಾಗೆ ಸೇರುವ ಆಯ್ಕೆ ಬಲಪಡಿಸಲಾಗಿದೆ ಎಂದಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಬೇಕು ಅಂತಲೇ ರಷ್ಯಾ ಹೀಗೆ ಉಕ್ರೇನ್ ನೆಲದಲ್ಲಿ ಚುನಾವಣೆ ನಡೆಸಿ, ತಮಗೆ ಬೇಕಾದವರಿಗೆ ಅಧಿಕಾರ ನೀಡಿ ಆ ಭಾಗಗಳನ್ನು ತಮ್ಮ ಜೊತೆ ಸೇರಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪುಟಿನ್ ಹೇಳಿಕೆಯಿಂದ ಬಲ ಸಿಕ್ಕಂತಾಗಿದೆ.
ಒಂದು ವರ್ಷದ ಹಿಂದೆ ಉಕ್ರೇನ್‌ನ ನಾಲ್ಕು ಭಾಗಗಳನ್ನು ರಷ್ಯಾಗೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಆ ನಿರ್ಧಾರಕ್ಕೆ ಒಂದು ವರ್ಷ ತುಂಬುವಾಗ ರಷ್ಯಾ ಅಧ್ಯಕ್ಷ ಪುಟಿನ್ ಹೊಸ ಬಾಂಬ್ ಸಿಡಿಸಿದ್ದಾರೆ. ಸೆಪ್ಟೆಂಬರ್ ಆರಂಭದಲ್ಲಿ ಉಕ್ರೇನ್ ಹಲವು ಪ್ರಾಂತ್ಯಗಳಲ್ಲಿ ಸ್ಥಳೀಯ ಚುನಾವಣೆ ಎದುರಿಸಿತ್ತು. ರಷ್ಯಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಡೊನೆಟ್ಸ್ಕ್, ಲುಹಾನ್ಸಕ್, ಕೆರ್ಸಾನ್ & ಝಪೊರಿಝಿಯಾ ಪ್ರದೇಶದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಹೀಗೆ ಚುನಾವಣೆ ನಡೆದು ಫಲಿತಾಂಶ ಬಂದ ನಂತರ ಪುಟಿನ್ ಈ ರೀತಿಯಾಗಿ ಹೇಳಿಕೆ ನೀಡಿರುವುದು ಸಹಜವಾಗಿ ಉಕ್ರೇನ್‌ಗೆ ಆಘಾತ ನೀಡಿದೆ.

ಅಮೆರಿಕದ ಬಲಕ್ಕೆ ಬಲವಾದ ಪೆಟ್ಟು?
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡುತ್ತಿದೆ. ಇದೇ ಕಾರಣಕ್ಕೆ ರಷ್ಯಾ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿ ಉಕ್ರೇನ್‌ನ ಹೃದಯ ಭಾಗಗಳಿಗೆ ಆಘಾತ ನೀಡುತ್ತಿದೆ. ಇಷ್ಟೆಲ್ಲಾ ಸಾಲದು ಎಂಬಂತೆ ದಿಢೀರ್ ರಷ್ಯಾ ಅಧಿಕಾರಿಗಳು ಉಕ್ರೇನ್‌ನ, ರಷ್ಯಾ ವಶದಲ್ಲಿ ಇರುವ ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಿದ್ದರು. ಅಲ್ಲದೆ ಆ ಜಾಗದಲ್ಲಿ ಈಗ ಹೊಸ ಆಡಳಿತ ಅಧಿಕಾರಕ್ಕೆ ಬಂದಿದ್ದು, ಶೀಘ್ರದಲ್ಲೇ ಅವರು ರಷ್ಯಾಗೆ ಸೇರುವ ಪ್ರಕ್ರಿಯೆ ಮುಗಿಸುವ ಸಾಧ್ಯತೆ ಇದೆ. ಆದರೆ ಈಗ ಅಮೆರಿಕ ಏನು ಮಾಡುತ್ತೆ?
ಹೀಗೆ ರಷ್ಯಾ & ಉಕ್ರೇನ್ ಯುದ್ಧವು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ದಿನಕ್ಕೊಂದು ಆಘಾತವನ್ನ ಕೊಡುತ್ತಿದೆ. ಅದರಲ್ಲೂ ಪುಟಿನ್ ಏನು ಮಾಡ್ತಿದ್ದಾರೆ? ಇದರಿಂದ ಅಮೆರಿಕ & ಮಿತ್ರ ದೇಶಗಳಿಗೆ ಯಾವ ರೀತಿ ಆಘಾತ ಸಿಗಲಿದೆ? ಎಂದು ಊಹೆ ಮಾಡುವುದು ಕೂಡ ಕಷ್ಟವಾಗಿದೆ. ಇಷ್ಟೆಲ್ಲಾ ಪ್ರಕ್ರಿಯೆ ಮೂಲಕ ಉಕ್ರೇನ್‌ನಲ್ಲಿ ತಾವು ವಶಕ್ಕೆ ಪಡೆದ ಜಾಗಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ರಷ್ಯಾ ಅಧ್ಯಕ್ಷರು ಮುಂದಾಗಿದ್ದಾರೆ.












Click it and Unblock the Notifications