ಉಕ್ರೇನ್-ರಷ್ಯಾ ಯುದ್ಧ ತ್ಯಜಿಸಿ ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಕರೆ
ಕೀವ್, ಫೆಬ್ರವರಿ 28: ಉಕ್ರೇನ್ ನೆಲದಲ್ಲಿ ಯುದ್ಧ ನಡೆಸುತ್ತಿರುವ ರಷ್ಯಾ ತಕ್ಷಣವೇ ಕದನ ವಿರಾಮವನ್ನು ಘೋಷಿಸಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತುರ್ತು ಅಧಿವೇಶನದಲ್ಲಿ ಕರೆ ನೀಡಲಾಗಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು ಐದನೇ ದಿನಕ್ಕೆ ಕಾಲಿಟ್ಟಿದೆ.
ರಷ್ಯಾ ನಡೆಸುತ್ತಿರುವ ಯುದ್ಧದ ಬೆನ್ನಲ್ಲೇ ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 11ನೇ ತುರ್ತು ಅಧಿವೇಶನ ನಡೆಸಲಾಯಿತು. ಆರಂಭದಲ್ಲಿಯೇ ಒಂದು ನಿಮಿಷ ಮೌನಾಚರಣೆ ಮೂಲಕ ಉಕ್ರೇನ್ ಮೇಲಿನ ಯುದ್ಧದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಅಪರೂಪದ ತುರ್ತು ವಿಶೇಷ ಅಧಿವೇಶನದಲ್ಲಿ ಎಲ್ಲಾ ಪಕ್ಷಗಳು ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ಕರೆ ನೀಡಿದವು. ಸಂಯಮ ಕಾಯ್ದುಕೊಂಡು ಮಾತುಕತೆ ಪ್ರಾರಂಭಿಸಲು ಸಲಹೆ ನೀಡಲಾಯಿತು.

ನಾಗರಿಕರ ರಕ್ಷಣೆಗೆ ಒತ್ತು ನೀಡಲು ಸಲಹೆ
ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, "ಹಿಂಸಾಚಾರವನ್ನು ಹೆಚ್ಚಿಸುವುದು ನಾಗರಿಕರ ಸಾವಿಗೆ ಕಾರಣವಾಗುತ್ತಿದೆ. ಸಾಕು, ಸೈನಿಕರು ಬ್ಯಾರಕ್‌ಗಳಿಗೆ ಹಿಂತಿರುಗಬೇಕಾಗಿದೆ, ನಾಗರಿಕರನ್ನು ರಕ್ಷಿಸಬೇಕು," ಎಂದರು. "ನಾವು ಎಲ್ಲಾ ಪಕ್ಷಗಳಿಂದ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುತ್ತೇವೆ; ಗರಿಷ್ಠ ಸಂಯಮವನ್ನು ರೂಢಿಸಿಕೊಂಡು ಶಾಂತಿ ಮಾತುಕತೆ ಪ್ರಾರಂಭಿಸಿ. ರಾಜತಾಂತ್ರಿಕತೆ ಮತ್ತು ಸಂವಾದ ಮೇಲುಗೈ ಸಾಧಿಸಬೇಕು" ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಹೇಳಲಾಯಿತು.

ವಿಶ್ವಸಂಸ್ಥೆಯ ಮೂಲಕ ಉಕ್ರೇನ್ ಅಧ್ಯಕ್ಷರಿಗೆ ನೆರವು
ರಷ್ಯಾ ದಾಳಿಯಿಂದ ನಲುಗಿದ ಉಕ್ರೇನ್ ಅಧ್ಯಕ್ಷರಿಗೆ ಮಾನವೀಯ ನೆರವು ಅತ್ಯಗತ್ಯವಾಗಿದೆ. ಇದು ಪರಿಹಾರವೇ ಅಲ್ಲ, ಶಾಂತಿ ಮಾತುಕತೆಯ ಮೂಲಕ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಉಕ್ರೇನ್ ಅಧ್ಯಕ್ಷರಿಗೆ ವಿಶ್ವಸಂಸ್ಥೆಯು ನೆರವು ನೀಡುವುದನ್ನು ಮುಂದುವರಿಸುತ್ತೇನೆ, ನಾವು ಅವರ ಕೈ ಬಿಡುವುದಿಲ್ಲ ಎಂಬುದಾಗಿ ಭರವಸೆ ನೀಡುತ್ತೇನೆ," ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

16 ಮಕ್ಕಳು ಸೇರಿದಂತೆ 352 ಉಕ್ರೇನಿಯನ್ನರು ಸಾವು
ರಷ್ಯಾ ನಡೆಸಿದ ನಿರಂತರ ದಾಳಿಯಲ್ಲಿ 16 ಅಮಾಯಕ ಮಕ್ಕಳು ಸೇರಿದಂತೆ ಒಟ್ಟು 352 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಸಂಖ್ಯೆಯು ನಿರಂತರವಾಗಿ ಏರಿಕೆ ಆಗುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ರಷ್ಯಾ ಸೇನೆಯು ಶೆಲ್ ದಾಳಿಯನ್ನು ಮುಂದುವರಿಸುತ್ತಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ಅಧಿವೇಶನದಲ್ಲಿ ಉಕ್ರೇನ್-ರಷ್ಯಾ ಸಂಘರ್ಷದ ಬಗ್ಗೆ ಉಕ್ರೇನ್ ಪ್ರತಿನಿಧಿ ವಿವರಿಸಿದ್ದಾರೆ. ಅಲ್ಲದೇ ಯುದ್ಧದಿಂದ ರಷ್ಯಾದ ಪಡೆಗಳು ನರಳುತ್ತಿದ್ದು, ಈಗಾಗಲೇ 1000 ಸೈನಿಕರನ್ನು ಕಳೆದುಕೊಂಡಿದೆ. ಉಕ್ರೇನ್ ವಿರುದ್ಧದ ಈ ಆಕ್ರಮಣವನ್ನು ಇಲ್ಲಿಗೆ ನಿಲ್ಲಿಸಿ. ಬೇಷರತ್ತಾಗಿ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವಂತೆ ನಾವು ರಷ್ಯಾವನ್ನು ಒತ್ತಾಯಿಸುತ್ತೇವೆ. ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸಂಪೂರ್ಣ ಅನುಸರಣೆಗೆ ಒತ್ತಾಯಿಸುತ್ತೇವೆ ಎಂದಿದ್ದಾರೆ.

ನ್ಯಾಟೋ ಕಡೆಗೆ ಹೋಗುತ್ತಿರುವ ಉಕ್ರೇನ್ ಬಗ್ಗೆ ರಷ್ಯಾ ಉಲ್ಲೇಖ
"ಉಕ್ರೇನ್ ಮತ್ತು ಜಾರ್ಜಿಯಾ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗಲು ಕ್ರಿಯಾ ಯೋಜನೆಯನ್ನು ರೂಪಿಸಿದವು. ಯುಎಸ್ ನೀತಿಯು ರಷ್ಯಾ-ವಿರೋಧಿ ಉಕ್ರೇನ್ ಅನ್ನು ರಚಿಸುವುದು ಮತ್ತು ಅದನ್ನು ನ್ಯಾಟೋಗೆ ಸೇರುವುದೇ ಆಗಿತ್ತು. ನ್ಯಾಟೋಗೆ ಸೇರುವ ಮೂಲಕ ಕೆಂಪು ರೇಖೆಯನ್ನು ದಾಟುವ ಪ್ರಯತ್ನಕ್ಕೆ ಪ್ರತಿರೋಧವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಷ್ಯಾದ ಒಕ್ಕೂಟವು ಈ ಹಗೆತನವನ್ನು ಪ್ರಾರಂಭಿಸಲಿಲ್ಲ. ರಷ್ಯನ್ನರು ಈ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ," ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ಅಧಿವೇಶನದಲ್ಲಿ ರಷ್ಯಾ ಪರ ಪ್ರತಿನಿಧಿ ಹೇಳಿದ್ದಾರೆ.












Click it and Unblock the Notifications