ಖಡಕ್ ಎಚ್ಚರಿಕೆ: ರಷ್ಯಾ ಸೈನಿಕರೇ ಉಕ್ರೇನ್ ತೊರೆದು ಜೀವ ಉಳಿಸಿಕೊಳ್ಳಿ ಎಂದ ಝೆಲೆನ್ಸ್ಕಿ!
ಕೀವ್, ಫೆಬ್ರವರಿ 28: ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಬೇಕು ಎಂದಿದ್ದರೆ ಉಕ್ರೇನ್ ಬಿಟ್ಟು ಹೋಗಿ ಎಂದು ರಷ್ಯಾ ಯೋಧರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಯೋಧರು ಉಕ್ರೇನ್ ರಾಷ್ಟ್ರದ ಹಲವು ನಗರಗಳನ್ನು ಈಗಾಗಲೇ ಪ್ರವೇಶಿಸಿದ್ದಾರೆ. ಇದರ ಮಧ್ಯೆ ರಷ್ಯಾ ಆಕ್ರಮಣಕಾರಿ ನಿಲುವಿನ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಷ್ಯಾ ಯೋಧರಿಗೆ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.
ರಷ್ಯಾ ನಡೆಸಿದ ದಾಳಿಯಲ್ಲಿ 350ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. 4,500 ರಷ್ಯಾದ ಸೈನಿಕರು ಉಕ್ರೇನಿಯನ್ ಪಡೆಗಳಿಂದ ಹೊಡೆದುರುಳಿಸಿವೆ ಎಂದು ಉಕ್ರೇನಿಯನ್ ಸರ್ಕಾರ ಹೇಳಿಕೊಂಡಿದೆ. ಆದರೆ ತಮ್ಮ ಸೈನಿಕರ ಸಾವಿನ ಕುರಿತು ರಷ್ಯಾ ಯಾವುದೇ ರೀತಿ ಅಂಕಿ-ಅಂಶಗಳನ್ನು ಹಂಚಿಕೊಂಡಿಲ್ಲ.

ದೇಶದ ಪ್ರತಿಯೊಬ್ಬ ಪ್ರಜೆಯೂ ಅಧ್ಯಕ್ಷರೇ ಎಂದ ಝೆಲೆನ್ಸ್ಕಿ
ನಾನು ಉಕ್ರೇನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಒಂದು ಮಾತನ್ನು ಹೇಳಿದ್ದೆನು. ನಮ್ಮಲ್ಲಿರುವ ಪ್ರತಿಯೊಬ್ಬರೂ ರಾಷ್ಟ್ರದ ಅಧ್ಯಕ್ಷರೇ, ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ದೇಶದ ಕುರಿತು ಜವಾಬ್ದಾರಿ ಇದೆ. ಸುಂದರ ಉಕ್ರೇನ್ ಅನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೇ ಆಗಿರುತ್ತದೆ. ಈಗ ಆ ಸಮಯ ಬಂದಿದೆ. ದೇಶದ ಪ್ರತಿೊಬ್ಬರೂ ಯೋಧರಾಗಬೇಕಿದೆ. ನಿಮ್ಮ ಸ್ಥಳದಲ್ಲಿ ನೀವೇ ಯೋಧರಾಗಿ ಗಟ್ಟಿಯಾಗಿ ನಿಲ್ಲಬೇಕಿದೆ," ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್ ಪರ ಹೋರಾಡುವ ಕೈದಿಗಳಿಗೆ ಬಿಡುಗಡೆ ಭಾಗ್ಯ
ರಷ್ಯಾದ ನಿರಂತರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಉಕ್ರೇನ್ ಯಾವುದೇ ಸಣ್ಣ ಅಸ್ತ್ರವನ್ನು ಬಿಡುತ್ತಿಲ್ಲ. ಈ ಮಧ್ಯೆ ರಣಭಯಂಕರ ಕೈದಿಗಳು ಹಾಗೂ ಮಿಲಿಟರಿ ಹಿನ್ನೆಲೆಯುಳ್ಳ ಆರೋಪಿಗಳನ್ನು ಯುದ್ಧ ಭೂಮಿಗೆ ಕಳುಹಿಸಲು ಉಕ್ರೇನ್ ನಿರ್ಧರಿಸಿದೆ. ಉಕ್ರೇನ್ ನ ರಾಷ್ಟ್ರೀಯ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಈ ನಿರ್ಧಾರವನ್ನು ದೃಢಪಡಿಸಿದೆ.

ಉಕ್ರೇನ್ ರಕ್ಷಿಸಲು ನಿಲ್ಲುವ ಪ್ರಜೆಗಳ ಕೈಗೆ ಶಸ್ತ್ರ
ರಷ್ಯಾ ಆಕ್ರಮಣದ ವಿರುದ್ಧ ಪ್ರತಿರೋಧ ಒಡ್ಡುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶದ ಪ್ರಜೆಗಳಿಗೆ ಮೊದಲಿನಿಂದಲೂ ಕರೆ ನೀಡುತ್ತಿದ್ದಾರೆ. ದೇಶದ ಪರವಾಗಿ ಹೋರಾಡಲು ಅಣಿಯಾಗಿ ನಿಲ್ಲುವ ಪ್ರತಿಯೊಬ್ಬ ಪ್ರಜೆಗಳಿಗೆ ಅಗತ್ಯವಾದ ಶಸ್ತ್ರಾಸ್ತ್ರವನ್ನು ಪೂರೈಸಲಾಗುವುದು ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.

ರಷ್ಯಾ-ಉಕ್ರೇನ್ ಮಧ್ಯೆ ಸಂಧಾನ ಮಾತುಕತೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ಬೆದರಿಕೆಯ ಬಳಿಕ ಉಕ್ರೇನ್ ಶಾಂತಿ ಮಾತುಕತೆಗೆ ಒಪ್ಪಿಗೆ ನೀಡಿದ್ದು, ಬೆಲಾರಸ್ ಗಡಿಯಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಾತುಕತೆಗೆ ಮುಂದಾಗಲಿವೆ. ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಸಂಧಾನ ನಡೆಸಲು ಎಲ್ಲವೂ ಸಿದ್ಧವಾಗಿದೆ. ಉಭಯ ರಾಷ್ಟ್ರಗಳ ನಿಯೋಗಗಳ ಬರುವಿಕೆಗಾಗಿ ಕಾಯಲಾಗುತ್ತಿದೆ ಎಂದು ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ಬೆಲಾರಸ್ ಗಡಿಯಲ್ಲಿ ನಡೆಯುತ್ತಿರುವ ಸಂಧಾನ ಸಭೆಯಲ್ಲಿ ಉಕ್ರೇನ್ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ.












Click it and Unblock the Notifications