ಪುಟಿದೆದ್ದ ಪುಟಿನ್: ಉಕ್ರೇನ್ ಸೋಲಿಸಿಯೇ ತೀರುತ್ತೇನೆ ಎನ್ನುತ್ತಿರುವ ರಷ್ಯಾ!
ಕೀವ್, ಮಾರ್ಚ್ 29: ಉಕ್ರೇನ್ ವಿರುದ್ಧ ಸಿಡಿದು ನಿಂತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಾವುದೇ ಕಾರಣಕ್ಕೂ ಯುದ್ಧದಿಂದ ಹಿಂದೆ ಸರಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ, ಶಾಂತಿ ಸಂಧಾನಕ್ಕೆ ಸ್ವತಃ ಉಕ್ರೇನ್ ಅಧ್ಯಕ್ಷರೇ ಮುಂದೆ ಬರುತ್ತಿದ್ದರೂ, ಪುಟಿನ್ ಮಾತ್ರ ಮತ್ತೆ ಮತ್ತೆ ಪುಟಿದು ಏಳುತ್ತಿದ್ದಾರೆ.
ರಷ್ಯಾ ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ ಉಕ್ರೇನ್ ಸರ್ವನಾಶವಾಗಿದೆ. ಇಡೀ ದೇಶದ ಚಿತ್ರಣವೇ ಬದಲಾಗಿದ್ದು, ಇನ್ನಾದರೂ ಯುದ್ಧವನ್ನು ನಿಲ್ಲಿಸಬೇಕು ಎಂದು ವ್ಲಾಡಿಮಿರ್ ಪುಟಿನ್ ಅವರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶಾಂತಿ ಪತ್ರ ರವಾನಿಸಿದ್ದಾರೆ.
ಶಾಂತಿ ಪತ್ರವನ್ನು ತೆಗೆದುಕೊಂಡು ಹೋಗಿರುವ ಸಂಧಾನಕಾರನ ವಿರುದ್ಧವೇ ಕೆರಳಿಸಿದ ವ್ಲಾಡಿಮಿರ್ ಪುಟಿನ್, "ಆ ಉಕ್ರೇನ್ ಅಧ್ಯಕ್ಷರಿಗೆ ಹೇಳಿ. ನಾನು ಅವರನ್ನು ಸೋಲಿಸಿಯೇ ತೀರುತ್ತೇನೆ," ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಶಾಂತಿ-ಸಂಧಾನದ ನಡುವೆ ಸಂಧಾನಕಾರರಿಗೇ ರಷ್ಯಾ ವಿಷವುಣಿಸಿದೆಯಾ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. 34 ದಿನಗಳ ಯುದ್ಧಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳೇನುು ಎಂಬುದರ ಸುತ್ತಲಿನ ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಉಕ್ರೇನ್ ಪರ ರಷ್ಯಾ ಜೊತೆ ರೋಮನ್ ಅಬ್ರಮೊವಿಚ್ ಮಾತು
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿಗೆ ಸ್ಪಂದಿಸಿದ ರೋಮನ್ ಅಬ್ರಮೊವಿಚ್ ಸಂಧಾನ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಕಳೆದ ಫೆಬ್ರವರಿ 24ರಂದು ರಷ್ಯಾ ಘೋಷಿಸಿದ ಯುದ್ಧಕ್ಕೆ ಅಂತ್ಯ ಹಾಡುವಂತೆ ಸಂಧಾನಕ್ಕೆ ಮುಂದಾದರು. ಟರ್ಕಿಯ ಇಸ್ತಾಂಬುಲ್, ರಷ್ಯಾ ರಾಜಧಾನಿ ಮಾಸ್ಕೋ ಹಾಗೂ ಉಕ್ರೇನ್ ರಾಜಧಾನಿ ಕೀವ್ ನಡುವಿನ ಸಂಧಾನದ ಸಂದೇಶಗಳನ್ನು ಪರಸ್ಪರ ಆಯಾ ರಾಷ್ಟ್ರದ ಅಧ್ಯಕ್ಷರಿಗೆ ತಲುಪಿಸುವ ಕಾರ್ಯವನ್ನು ಮಾಡಿದರು.

ಉಕ್ರೇನ್ ಪರವಾಗಿ ಬಂದ ಸಂಧಾನಕಾರನಿಗೆ ಎಚ್ಚರಿಕೆ ಸಂದೇಶ
ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬರೆದಿರುವ ಶಾಂತಿ-ಸಂಧಾನದ ಪತ್ರವನ್ನು ಸಂಧಾನಕಾರ ರೋಮನ್ ಅಬ್ರಮೊವಿಚ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದರು. ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಸಂಧಾನ ಮಾತುಕತೆಗೆ ಮುಂದಾದರು. ಆದರೆ, ಈ ವೇಳೆ ಕೆರಳಿದ ಪುಟಿನ್, ಆ ಉಕ್ರೇನ್ ಅಧ್ಯಕ್ಷರನ್ನು ನಾನು ಸೋಲಿಸಿಯೇ ತೀರುತ್ತೇನೆ ಎಂದು ಗುಡುಗಿದ್ದಾರೆ ಎಂಬುದಾಗಿ ವರದಿಯಾಗಿದೆ.

ರೋಮನ್ ಅಬ್ರಮೊವಿಚ್ ಮೈಗೆ ಸೇರಿತಾ ವಿಷ?
ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಇತ್ತೀಚಿಗೆ ನಡೆದ ಸಂಧಾನ ಸಭೆಯಲ್ಲಿ ಭಾಗವಹಿಸಿದ ರೋಮನ್ ಅಬ್ರಮೊವಿಚ್ ಅವರಿಗೆ ವಿಷವುಣಿಸಲಾಯಿತೇ ಎಂಬ ಅನುಮಾನಗಳು ಹುಟ್ಟಿಕೊಂಡವು. ಏಕೆಂದರೆ ಅವರ ಮೈಗೆ ವಿಷಕಾರಿ ಅನಿಲವೊಂದು ಸೇರಿಕೊಂಡಿರುವ ಲಕ್ಷಣಗಳು ಗೋಚರಿಸಿದವು. ರೋಮನ್ ಅಬ್ರಮೊವಿಚ್ ಕಣ್ಣು ಕೆಂಪಾಗಿದ್ದು, ಮೈ ಮೇಲಿನ ಚರ್ಮ ಸುಲಿಯುವುದಕ್ಕೆ ಆರಂಭಿಸಿತ್ತು. ಉಕ್ರೇನ್ ಪರವಾಗಿ ಸಂಧಾನಕ್ಕೆ ನಿಂತ ರೋಮನ್ ಅಬ್ರಮೊವಿಚ್ ಆರೋಗ್ಯದಲ್ಲಿ ಈಗ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ಸಂಧಾನ
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿ ಈಗಾಗಲೇ 34 ದಿನಗಳು ಕಳೆದಿವೆ. ಇದರ ಮಧ್ಯೆ ಮೊದಲ ಬಾರಿಗೆ ಮಂಗಳವಾರ ಟರ್ಕಿಯಲ್ಲಿ ಉಭಯ ರಾಷ್ಟ್ರಗಳ ನಡುವೆೆ ಮುಖಾಮುಖಿ ಸಂಧಾನ ಸಭೆಯನ್ನು ನಡೆಸಲಾಗುತ್ತಿದೆ. ಕನಿಷ್ಠ ಮಾನವೀಯತೆಯನ್ನು ಕಾಯ್ದುಕೊಳ್ಳುವುದು ನಮ್ಮ ಸಂಧಾನ ಸಭೆಯ ಮೊದಲ ಆದ್ಯತೆ ಆಗಿರುತ್ತದೆ. ಅಂತಿಮವಾಗಿ ಗರಿಷ್ಠ ಮಟ್ಟದಲ್ಲಿ ಯುದ್ಧವನ್ನು ಅಂತ್ಯಗೊಳಿಸುವದಕ್ಕೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳುವವರೆಗೂ ಚರ್ಚೆ ನಡೆಸಲಾಗುವುದು ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. "ನಾವು ಜನರು, ಭೂಮಿ ಅಥವಾ ಸಾರ್ವಭೌಮತ್ವವನ್ನು ಇಟ್ಟುಕೊಂಡು ವ್ಯಾಪಾರ ಮಾಡುವುದಿಲ್ಲ" ಎಂದು ಹೇಳಿದರು.

34ನೇ ದಿನಗಳವರೆಗೂ ಯುದ್ಧದ ಬೆಳವಣಿಗೆಗಳೇನು?
ರಷ್ಯಾ ಆಕ್ರಮಣವನ್ನು ಶುರು ಮಾಡಿದ 34 ದಿನಗಳಲ್ಲಿ ಮರಿಯುಪೋಲ್ ನಗರವೊಂದರಲ್ಲಿಯೇ ಕನಿಷ್ಠ 5000 ಸಾವಿರ ಜನರು ಸಾವಿನ ಮನೆ ಸೇರಿದ್ದಾರೆ ಎಂದು ಉಕ್ರೇನಿಯನ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಉಪನಗರ ಇರ್ಪಿನ್ ಅನ್ನು ಉಕ್ರೇನ್ ಪಡೆಗಳು ತೊರೆದಿವೆ ಎಂದು ಆಂತರಿಕ ಸಚಿವರು ಮಾಹಿತಿ ನೀಡಿದ್ದಾರೆ.
ರಷ್ಯಾ ನಡೆಸಿರುವ ಆಕ್ರಮಣದಿಂದಾಗಿ ಕೀವ್ ನಗರದ 80,000ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಳೆದ ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಪಡೆಗಳು ಆಕ್ರಮಣ ಶುರು ಮಾಡಿದವು. ಅಂದಿನಿಂದ ಇಂದಿನವರೆಗೂ ಸುಮಾರು 35 ಲಕ್ಷ ಸ್ವದೇಶಿಗಳು ಹಾಗೂ ವಿದೇಶಿಯರು ಉಕ್ರೇನ್ ನಗರಗಳನ್ನು ತೊರೆದು ಹೋಗಿದ್ದಾರೆ. ಎರಡೂ ಕಡೆಗಳಲ್ಲಿ ಯೋಧರು ಸಾವಿರಾರು ಸಂಖ್ಯೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications