‘ನಾವಿದ್ದೀವಿ ಟೆನ್ಷನ್ ಬೇಡ ಮಗಾ’ ಅಂತು ರಷ್ಯಾ!
ಮಾಸ್ಕೋ: ಯುದ್ಧದ ಅಮಲಿನಲ್ಲಿ ಜಗತ್ತು 2 ಭಾಗವಾಗಿ ಹೋಗುತ್ತಿದೆ. ಅದರಲ್ಲೂ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ವಿಚಾರದಲ್ಲಿ ಈ ಫೈಟ್ ಇನ್ನೂ ಜೋರಾಗಿದೆ. ಒಂದ್ಕಡೆ ದಕ್ಷಿಣ ಕೊರಿಯಾ ಜೊತೆ ಸಂಬಂಧ ಗಟ್ಟಿಗೊಳಿಸಲು ಅಮೆರಿಕ ಮೇಲೆ ಬೀಳುತ್ತಿದೆ. ಇದೇ ಸಮಯಕ್ಕೆ ರಷ್ಯಾ ಎಂಟ್ರಿಯಾಗಿದ್ದು, ಉತ್ತರ ಕೊರಿಯಾಗೆ ವಿನಾಶಕಾರಿ ಅಸ್ತ್ರ ಕೊಡುವ ಭರವಸೆ ನೀಡಿದೆಯಂತೆ.
ಅಸಲಿ ಕಹಾನಿ ಶುರುವಾಗಿದ್ದೇ ಇಲ್ಲಿ, ತನ್ನ ಪಾಡಿಗೆ ಸುಮ್ಮನಿರದೆ ದಕ್ಷಿಣ ಕೊರಿಯಾ (south korea) ಆಪತ್ತನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಇದೇ ದಕ್ಷಿಣ ಕೊರಿಯಾ ಮಧ್ಯಪ್ರವೇಶ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಇದು ರಷ್ಯಾ (russia) ಅಧ್ಯಕ್ಷರಿಗೆ ಕೆಂಡದಂಥ ಕೋಪ ತರಿಸಿದೆ. ಇದೇ ಕಾರಣಕ್ಕೆ ಕಿಮ್ ಜಾಂಗ್ ಉನ್ (kim jong un) ಪರವಾಗಿ ರಷ್ಯಾ ನಿಲ್ಲುತ್ತಿದೆ. ಉತ್ತರ ಕೊರಿಯಾ (north korea) ಬೇಡಿಕೆ ಇಟ್ಟಿರುವ ಶಸ್ತ್ರಾಸ್ತ್ರ ಪೂರೈಕೆಗೆ ರಷ್ಯಾ ಒಪ್ಪಿದೆಯಂತೆ.

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಈಗಾಗಲೇ ರಷ್ಯಾ ಮತ್ತು ಉಕ್ರೇನ್ ಜಗಳದಲ್ಲಿ ಜಗತ್ತು 2 ಭಾಗವಾಗಿದೆ. ಮತ್ತೊಂದು ಕಡೆ ದಕ್ಷಿಣ ಚೀನಾ ಸಮುದ್ರ ಪ್ರದೇಶ ಬೂದಿ ಮುಚ್ಚಿದ ಕೆಂಡವಾಗಿದೆ. ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾ ಪರವಾಗಿ ರಷ್ಯಾ ಬ್ಯಾಟ್ ಬೀಸುತ್ತಿರುವುದು ಈಗಿನ ಪರಿಸ್ಥಿತಿಯಲ್ಲಿ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅದರಲ್ಲೂ ಕೊತಕೊತ ಕುದಿಯುತ್ತಿರುವ ಅಮೆರಿಕ ರಷ್ಯಾದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಕೂಡ ಇದೆ. ಇಷ್ಟೆಲ್ಲದರ ಮಧ್ಯೆ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡಿದೆ ರಷ್ಯಾ.
ಜಂಟಿ ಸಮರಭ್ಯಾಸ ತಂದ ಕಂಟಕ?
ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್ ಜಂಟಿಯಾಗಿ ದಕ್ಷಿಣ ಕೊರಿಯಾ ಕಡಲ ತೀರದಲ್ಲಿ ಕ್ಷಿಪಣಿ ನಿಗ್ರಹ ಸಮರಾಭ್ಯಾಸ ನಡೆಸಿವೆ. ಸಮರಾಭ್ಯಾಸದಲ್ಲಿ ಸುಮಾರು 110 ಯುದ್ಧ ವಿಮಾನಗಳ ಭಾಗಿಯಾಗಿವೆ. ಏಪ್ರಿಲ್ 28ರ ವರೆಗೂ ಈ ಜಂಟಿ ಸಮರಭ್ಯಾಸ ನಡೆಸಲು ಅಮೆರಿಕ, ದಕ್ಷಿಣ ಕೊರಿಯಾ ನಿರ್ಧಾರ ಮಾಡಿವೆ. ಈ ಹೊತ್ತಲ್ಲೇ ಕಿಮ್ ಜಾಂಗ್ ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್ ನಾಯಕರಿಗೆ ಖಡಕ್ ಮೆಸೇಜ್ ಕೊಡುತ್ತಿದ್ದಾನೆ. ಮತ್ತೊಂದು ಕಡೆ ಈ ಮೂರು ರಾಷ್ಟ್ರಗಳ ಸಮಾನ ಶತ್ರು ರಷ್ಯಾ ಜೊತೆಗೆ ಕೈಜೋಡಿಸುತ್ತಿದ್ದಾನೆ.

ಉ.ಕೊರಿಯಾ ಜೊತೆ ಚೀನಾ
ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಅದೇ ಕಿತಾಪತಿ ಮಾಡುತ್ತಿದೆ. ಪದೇಪದೆ ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಲ್ಲೇ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಇದೇ ತಂತ್ರ ಅನುಸರಿಸುತ್ತಿರುವುದು ಚೀನಾ ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಜೊತೆ ಮತ್ತಷ್ಟು ಹತ್ತಿರವಾಗಿ, ಶತ್ರುಗಳನ್ನು ಸದೆಬಡಿಯೋಣ ಎಂಬ ಸಂದೇಶ ಚೀನಾ ನೆಲದಿಂದ ಉತ್ತರ ಕೊರಿಯಾಗೆ ತಲುಪಿದೆ. ಒಂದ್ಕಡೆ ರಷ್ಯಾ ಹಾಗೇ ಇನ್ನೊಂದು ಕಡೆ ಚೀನಾ ಉತ್ತರ ಕೊರಿಯಾ ಬೆನ್ನಿಗೆ ನಿಂತಿರುವುದು ವಿಶೇಷ.

ಒಟ್ನಲ್ಲಿ ಈಗಿನ ಪರಿಸ್ಥಿತಿ ಲೆಕ್ಕ ಹಾಕಿದರೆ ಭವಿಷ್ಯದಲ್ಲಿ ರಷ್ಯಾ, ಚೀನಾ, ಉತ್ತರ ಕೊರಿಯಾ ಪ್ರಬಲವಾದ ಸಂಘಟನೆ ಕಟ್ಟುವ ನಿರೀಕ್ಷೆ ಇದೆ. ಅಮೆರಿಕ ಮತ್ತು ಅದರ ಮಿತ್ರಪಡೆಗಳ ವಿರುದ್ಧ ಈ ಮೂರು ರಾಷ್ಟ್ರಗಳಿಗೆ ಸಿಕ್ಕಾಪಟ್ಟೆ ಕೋಪ ಇದೆ. ಹೀಗಾಗಿ ಶತ್ರುಗಳನ್ನು ಸದೆಬಡಿಯಲು ಒಗ್ಗಟ್ಟು ಅಗತ್ಯ ಎಂಬ ಸತ್ಯವನ್ನ ಅರ್ಥಮಾಡಿಕೊಂಡಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಉತ್ತರ ಕೊರಿಯಾಗೆ ಬೆನ್ನು ತಟ್ಟಲು ರಷ್ಯಾ ಮತ್ತು ಚೀನಾ ಮುಗಿಬೀಳುತ್ತಿವೆ. ಈ ಕುರಿತು ಅಮೆರಿಕದ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿಲ್ಲ. ಆದರೆ ಮುಂದೆ ಘರ್ಷಣೆ ನಿರೀಕ್ಷಿಸಬಹುದು.












Click it and Unblock the Notifications