Ukraine VS Russia: 19 ಮುಗಿಸಿ 20ನೇ ತಿಂಗಳಿಗೆ ಕಾಲಿಟ್ಟ ವಾರ್!
ನೋಡ ನೋಡುತ್ತಲೇ ಜಗತ್ತನ್ನು ಇಬ್ಭಾಗ ಮಾಡಿದ ರಷ್ಯಾ & ಉಕ್ರೇನ್ ಯುದ್ಧವು ಇದೀಗ 20ನೇ ತಿಂಗಳಿಗೆ ಎಂಟ್ರಿ ಕೊಟ್ಟಿದೆ. 2022ರಲ್ಲಿ ಯುದ್ಧವು ಶುರುವಾದಾಗ ಒಂದೆರಡು ವಾರ ಅಷ್ಟೇ ಅಂತಾ ಜಗತ್ತೇ ಅಂದುಕೊಂಡಿತ್ತು. ಹೀಗೆ ರಷ್ಯಾ & ಉಕ್ರೇನ್ ಯುದ್ಧ ಬಹುಬೇಗ ನಿಂತು ಹೋಗುತ್ತೆ ಅಂತಾ ಎಲ್ಲರೂ ಊಹಿಸಿದ್ದರು. ಆದ್ರೆ ನಡೆದಿರುವುದೇ ಬೇರೆ, ಯುದ್ಧ ಭೀಕರತೆ ಹೇಗಿದೆ ಅಂದ್ರೆ ಇನ್ನೂ 10 ವರ್ಷ ಕಳೆದರೂ ಈ ಯುದ್ಧ ನಿಲ್ಲಲ್ಲ ಬಿಡಿ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ 2022ರ ಫೆಬ್ರವರಿ 24ರಂದು ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದರು. ಈ ಮೂಲಕ ಶುರುವಾದ ಯುದ್ಧ ಲಕ್ಷಾಂತರ ಜನರ ಜೀವ ಬಲಿಪಡೆದು, ಲೆಕ್ಕವಿಲ್ಲದಷ್ಟು ಜನರ ಬದುಕನ್ನು ಬೀದಿಗೆ ತಳ್ಳಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ಸಮಾಧಾನ ಆಗಿಲ್ಲ. ಪರಿಸ್ಥಿತಿ ಹಿಡಿತಕ್ಕೆ ಸಿಗದ ಕಾರಣ ಉಕ್ರೇನ್ ಜನ ಕೂಡ ಭಯದಲ್ಲೇ ಜೀವನ ಕಳೆಯುತ್ತಿದ್ದು ಇಂದಿಗೂ ಮದ್ದು ಗುಂಡಿನ ಮೊರೆತ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದೆ.

ಭೀಕರ ದಾಳಿ ನಡೆಸಿದ ರಷ್ಯಾ
ಉಕ್ರೇನ್ ನೆಲದ ಮೇಲೆ ರಷ್ಯಾ ತನ್ನ ಭೀಕರ ದಾಳಿಯನ್ನು ಮುಂದುವರಿಸಿದ್ದು, ಇಬ್ಬರನ್ನ ಬಲಿಪಡೆದ ರಷ್ಯಾ ದಾಳಿ 8 ಜನರನ್ನು ಗಾಯಗೊಳಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಹಾಗೇ ರಷ್ಯಾದ ಸೇನೆ ಬೆರಿಸ್ಲೇವ್ ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಹಲವು ಮನೆ ಧ್ವಂಸಗೊಳಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟು ಪೊಲೀಸ್ ಅಧಿಕಾರಿ ಸೇರಿ ಐವರು ಗಾಯಗೊಂಡಿದ್ದಾರಂತೆ. ಹಾಗೇ ಇನ್ನೊಂದು ಕಡೆ ಲ್ವೋವ್ ಹಳ್ಳಿ ಮೇಲೆ ರಷ್ಯಾದ ವಾಯುದಾಳಿಗೆ 67 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಈಗ ಉಕ್ರೇನ್ ಆರೋಪಿಸಿದೆ.
ಕರಾವಳಿ ಭಾಗದ ಮೇಲೂ ಭೀಕರ ದಾಳಿ?
ಇನ್ನು ಕಪ್ಪು ಸಮುದ್ರದ ಭಾಗದಲ್ಲಿ ರಷ್ಯಾ ಸೇನೆ ಉಕ್ರೇನ್‌ಗೆ ಭಾರಿ ತೊಂದರೆ ಮಾಡುತ್ತಿದೆ ಎಂಬ ಆರೋಪ ಮುಂದುವರಿದಿದೆ. ರಷ್ಯಾ ಸೇನೆ ಉಕ್ರೇನ್ ಆಹಾರ ಧಾನ್ಯಗಳ ದಾಸ್ತಾನು ಮೇಲೆ ಮತ್ತೊಮ್ಮೆ ದಾಳಿ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಲಕ್ಷಾಂತರ ಟನ್ ಧಾನ್ಯಗಳು ಮಣ್ಣುಪಾಲಾಗಿ ಹೋಗಿದ್ದು, ಇದೀಗ ಮತ್ತೆ ಅದೇ ರೀತಿಯ ಭೀಕರ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷರು ಅಮೆರಿಕ ಹಾಗೂ ಕೆನಡಾ ಪ್ರವಾಸ ಕೈಗೊಂಡ ನಂತರ ಈ ದಾಳಿ ದುಪ್ಪಟ್ಟಾಗಿರುವ ಆರೋಪ ಕೇಳಿಬಂದಿದೆ.
ಒಟ್ನಲ್ಲಿ ರಷ್ಯಾ VS ಉಕ್ರೇನ್ ಯುದ್ಧಕ್ಕೆ 19 ತಿಂಗಳು ತುಂಬಿದ್ದು 90 ತಿಂಗಳು ತುಂಬಿದ್ರೂ ಯುದ್ಧ ಮುಗಿಯುವ ಲಕ್ಷಣ ಕಾಣ್ತಿಲ್ಲ. ಹೀಗಾಗಿ ಉಕ್ರೇನ್‌ನ ಲಕ್ಷಾಂತರ ಪ್ರಜೆಗಳು ತಮ್ಮ ತವರು ಬಿಟ್ಟು ಓಡಿ ಹೋಗಿದ್ದಾರೆ. ಅದ್ರಲ್ಲೂ ರಷ್ಯಾ ಜೊತೆ ಗಡಿ ಹಂಚಿಕೊಂಡ ಉಕ್ರೇನ್ ಪ್ರಾಂತ್ಯಗಳ ಜನ ನಿತ್ಯವೂ ನರಳುತ್ತಿದ್ದಾರೆ. ಹೀಗಾಗಿ ಯುದ್ಧ ನಿಲ್ಲಿಸಿ ಎಂಬ ಕೂಗು ಕೂಡ ಜೋರಾಗಿದೆ. ಆದರೆ ಯುದ್ಧ ನಿಲ್ಲಿಸಲು ರಷ್ಯಾ ಹಾಗೂ ಉಕ್ರೇನ್ ಇಬ್ಬರೂ ತಯಾರಿಲ್ಲ. ಈ ಕಾರಣಕ್ಕೆ ದಿನದಿಂದ ದಿನಕ್ಕೆ ದ್ವೇಷ ಹೆಚ್ಚಾಗುತ್ತಲೇ ಇದೆ, ಬಾಂಬ್ ಸ್ಫೋಟವಾಗುತ್ತಲೇ ಇವೆ.












Click it and Unblock the Notifications