Ukraine War: ಉಕ್ರೇನ್ ಯುದ್ಧಕ್ಕೆ ಮೊದಲ ಬ್ರೇಕ್, ರಷ್ಯಾ & ಉಕ್ರೇನ್ ಮಹತ್ವದ ನಿರ್ಧಾರ!
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಎನ್ನುವ ಅಮೆರಿಕದ ಕನಸು ಇದೀಗ ನನಸಾಗುತ್ತಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ನೂತನವಾಗಿ ಅಧಿಕಾರಕ್ಕೆ ಬಂದ ನಂತರ ಈ ರೀತಿಯಾಗಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಭಾರಿ ದೊಡ್ಡ ಚರ್ಚೆ ಆರಂಭ ಆಗಿತ್ತು. ಕಳೆದ 2 ತಿಂಗಳಿಂದ ನಿರಂತರವಾಗಿ ಯುದ್ಧ ನಿಲ್ಲಿಸಲು ಪ್ರಯತ್ನಗಳನ್ನ ಮಾಡಿ, ಸಭೆಗಳನ್ನು ಕೂಡ ನಡೆಸಲಾಗಿತ್ತು. ಇಷ್ಟೆಲ್ಲಾ ಒತ್ತಡದ ನಡುವೆ ಇದೀಗ ಭರ್ಜರಿಯಾದ ಸುದ್ದಿ ಸಿಕ್ಕೇಬಿಟ್ಟಿದೆ.
ಅದು 2022ರ ಫೆಬ್ರವರಿ ತಿಂಗಳು, ನ್ಯಾಟೋ ಪಡೆಗಳ ವಿರುದ್ಧ ರೊಚ್ಚಿಗೆದ್ದಿದ್ದ ರಷ್ಯಾ ಭಾರಿ ದೊಡ್ಡ ವಾರ್ನಿಂಗ್ ಕೊಟ್ಟಿತ್ತು. ಜೋ ಬೈಡನ್ ಅವರ ಸರ್ಕಾರ ಅಮೆರಿಕದಲ್ಲಿ ಆಡಳಿತವನ್ನ ನಡೆಸುತ್ತಿದ್ದ ಸಮಯ ಅದು. ಅದೇ ಸಮಯದಲ್ಲಿ ರಷ್ಯಾ ರೊಚ್ಚಿಗೆದ್ದು, ಉಕ್ರೇನ್ ದೇಶವು ನ್ಯಾಟೋ ಸದಸ್ಯತ್ವ ಪಡೆಯುತ್ತಿದೆ ಅಂತಾ ಆಕ್ರೋಶದಲ್ಲಿ ಯುದ್ಧ ಸಾರಿತ್ತು. ಹೀಗೆ 3 ವರ್ಷದ ಹಿಂದೆ ಶುರುವಾಗಿದ್ದ ರಷ್ಯಾ VS ಉಕ್ರೇನ್ ಯುದ್ಧ ಈಗಲೂ ಹೊತ್ತಿ ಉರಿಯುತ್ತಿದೆ. ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಭೀಕರ ಯುದ್ಧ ಈಗಲೂ ತಣ್ಣಗಾಗುತ್ತಿಲ್ಲ. ಆದರೆ ಟ್ರಂಪ್ ಅವರ ಸರ್ಕಾರ ಇದೀಗ ಯುದ್ಧಕ್ಕೆ ಮೊದಲ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ.

ಕಪ್ಪು ಸಮುದ್ರದಲ್ಲಿ ಯುದ್ಧ ಇಲ್ಲ!
ಹೌದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಮೊದಲ ಭಾಗವಾಗಿ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿವೆ. ಈಗ ಕಪ್ಪು ಸಮುದ್ರ ಭಾಗದಲ್ಲಿ ಯುದ್ಧ ನಡೆಸದಂತೆ ರಷ್ಯಾ & ಉಕ್ರೇನ್ ಒಪ್ಪಂದಕ್ಕೆ ಬಂದಿವೆ. ಈ ಮೂಲಕ ಎರಡೂ ದೇಶಗಳ ಸೇನೆಗಳು ಯಾವುದೇ ರೀತಿ ತಿಕ್ಕಾಟವನ್ನ ಈ ಭಾಗದಲ್ಲಿ ಮಾಡುವಂತೆ ಇಲ್ಲ. ಪ್ರಮುಖವಾಗಿ, ಉಕ್ರೇನ್ ದೇಶಕ್ಕೆ ಇದೇ ಮಾರ್ಗದಿಂದ ಹಡಗುಗಳ ಮೂಲಕ ಸರಕು ಸರಬರಾಜು ಆಗುತ್ತದೆ. ಹೀಗಾಗಿಯೇ ಕಪ್ಪು ಸಮುದ್ರ ಯುದ್ಧದ ಜಾಗ ಆಗಬಾರದು ಎಂಬ ನಿರ್ಧಾರಕ್ಕೆ ಬರಲಾಗಿದೆ.
ರೂಲ್ಸ್ ಹಾಕಿದ ರಷ್ಯಾ ಪಡೆ
ರಷ್ಯಾ ಇದೀಗ ಉಕ್ರೇನ್ ಜೊತೆ ತಿಕ್ಕಾಟಕ್ಕೆ ಬ್ರೇಕ್ ಹಾಕಲು ಮೊದಲ ಹಂತದ ಒಪ್ಪಿಗೆ ನೀಡಿದೆ. ಮತ್ತೊಂದು ಕಡೆ ಈ ಒಪ್ಪಂದಕ್ಕೆ ಓಕೆ ಎನ್ನಲು ರಷ್ಯಾ ಕೂಡ ಹಲವು ರೂಲ್ಸ್ ಹಾಕಿದ್ದು, ಆ ಮೂಲಕ ಉಕ್ರೇನ್ ಏನು ಮಾಡಬಾರದು? ಎಂಬುದನ್ನ ರಷ್ಯಾ ಇದೀಗ ನಿಯಮ ವಿಧಿಸಿ ಆದೇಶ ಹೊರಡಿಸಿದೆ. ಉಕ್ರೇನ್ ಅಧಿಕಾರಿಗಳು ಕೂಡ ರಷ್ಯಾದ ಮಾತಿಗೆ ಓಕೆ ಎಂದಿದ್ದಾರೆ.
ಹೀಗಾಗಿಯೇ ಇದೀಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಮೊದಲ ಪ್ರಯತ್ನ ಯಶಸ್ವಿಯಾಗಿದೆ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಕದನ ವಿರಾಮ ಘೋಷಣೆ ಆಗುತ್ತೆ ಎನ್ನಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ಸರ್ಕಾರದ ಅಧಿಕಾರಿಗಳು ಇದೀಗ ರಷ್ಯಾ & ಉಕ್ರೇನ್ ಅಧಿಕಾರಿಗಳ ಜೊತೆಗೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿ ಇದೀಗ ಮಹತ್ವದ ಸಭೆ ನಡೆಯುತ್ತಿದೆ.












Click it and Unblock the Notifications