ಆರ್ಥಿಕ ಅಧೋಗತಿಗೆ ಕುಸಿದಿರುವ ಪಾಕಿಸ್ತಾನಕ್ಕೆ ಕತಾರ್ $3 ಬಿಲಿಯನ್ ನೆರವು
ಇಸ್ಲಾಮಾಬಾದ್, ಜೂನ್ 25: ಒಂದೆಡೆ ಹುಣದುಬ್ಬರ, ಇನ್ನೊಂದೆಡೆ ವಿದೇಶಗಳಿಂದ ಬರುವ ಹಣಕಾಸಿನ ಹರಿವಿಗೆ ಕತ್ತರಿಯಿಂದಾಗಿ ತತ್ತರಿಸಿದ್ದ ಪಾಕಿಸ್ತಾನಕ್ಕೆ ನೆರವಾಗಲು ಕತಾರ್ ಮುಂದಾಗಿದೆ.
ತೈಲ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀಮಂತ ದೇಶಗಳಲ್ಲಿ ಒಂದಾದ ಕತಾರ್, ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದೆ.
ಕತಾರ್‌ನ ರಾಜ ಇಮಿರ್ ಶೇಕ್ ತಮಿಮ್ ಬಿನ್ ಹಮದ್ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡಿ ವ್ಯಾಪಾರ, ಹಣ ವರ್ಗಾವಣೆ ತಡೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವನ್ನು ತಡೆಗಟ್ಟುವ ಸಂಬಂಧ ಸಹಕಾರ ನೀಡುವ ಒಪ್ಪಿಗೆ ಸೂಚಿಸಿದ ಮರು ದಿನವೇ ಈ ಘೋಷಣೆ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದು, ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ. ಕಳೆದ 11 ತಿಂಗಳಿನಿಂದ ಪ್ರಧಾನಿ ಇಮ್ರಾನ್ ಖಾನ್ ದೇಶದ ಆರ್ಥಿಕ ಸ್ಥಿತಿಯನ್ನು ತಹಬದಿಗೆ ತರಲು ಸಾಹಸಪಡುತ್ತಿದ್ದು, ಕತಾರ್ ಆರ್ಥಿಕ ನೆರವು ನೀಡಲು ಮುಂದೆ ಬಂದಿರುವ ನಾಲ್ಕನೆಯ ದೇಶವಾಗಿದೆ.
ಇದಕ್ಕೂ ಮುನ್ನ ಚೀನಾ ಠೇವಣಿ ಮತ್ತು ವಾಣಿಜ್ಯ ಸಾಲದ ರೂಪದಲ್ಲಿ 4.6 ಬಿಲಿಯನ್ ಡಾಲರ್ ನೀಡಿತ್ತು. ಸೌದಿ ಅರೇಬಿಯಾ 3 ಬಿಲಿಯನ್ ಡಾಲರ್ ನಗದು ಠೇವಣಿ ಒದಗಿಸಿತ್ತು. ಜತೆಗೆ 3.2 ಬಿಲಿಯನ್ ಡಾಲರ್ ಮೊತ್ತದ ತೈಲ ಸೌಲಭ್ಯ ನೀಡಿತ್ತು. ಯುನೈಟೆಡ್ ಅರಬ್ ಎಮಿರೈಟ್ಸ್ ಸಹ 2 ಬಿಲಿಯನ್ ಡಾಲರ್ ನಗದು ಪೂರೈಸಿತ್ತು.












Click it and Unblock the Notifications