ಮೋದಿ-ರಾಜಕುಮಾರ ಭೇಟಿ: ಭಾರತದಲ್ಲಿ ಸೌದಿ ಹೂಡಿಕೆ ಹೆಚ್ಚಳ ನಿರೀಕ್ಷೆ
ಬುನೊಸ್ ಏರ್ಸ್ (ಅರ್ಜೆಂಟೀನಾ), ನವೆಂಬರ್ 30: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಅರ್ಜೆಂಟೀನಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿ ಆರ್ಥಿಕತೆ, ಸಂಸ್ಕೃತಿ ಮತ್ತು ಇಂಧನ ಒಪ್ಪಂದಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು.
ತಂತ್ರಜ್ಞಾನ, ನವೀಕರಿಸಬಹುದಾದ ಇಂಧನಗಳು ಮತ್ತು ಆಹಾರ ಭದ್ರತೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಬಗ್ಗೆ ಸಹ ಸಮಾಲೋಚನೆ ನಡೆಸಿದರು.
ಜಿ20 ರಾಷ್ಟ್ರಗಳ ಎರಡು ದಿನಗಳ ಶೃಂಗಸಭೆಯು ಶನಿವಾರ ಮತ್ತು ಭಾನುವಾರ ನಡೆಯಲಿದೆ. ಈ ಸಂದರ್ಭದಲ್ಲಿ ಜಾಗತಿಕ ವಿಚಾರಗಳ ಚರ್ಚೆಯ ಜೊತೆಗೆ, ಅದರ ಮಗ್ಗುಲಲ್ಲಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.
ಜಿ-20 ಸಮಾವೇಶದಲ್ಲಿ ವ್ಯಾಪಕ ಪ್ರಮಾಣದ ಸಂವಾದ ನಡೆಯುವ ಬಗ್ಗೆ ನಿರೀಕ್ಷಿಸಲಾಗಿದ್ದು, ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟೀನಾ ತಲುಪಿದ ಬಳಿಕ ಟ್ವೀಟ್ ಮಾಡಿದ್ದರು.
ಮೋದಿ ಅವರು ಈ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರನ್ನು ಕೂಡ ಭೇಟಿ ಮಾಡಿ ಸಭೆ ನಡೆಸಲಿದ್ದಾರೆ ಎಂದು
|
ಫಲಪ್ರದ ಒಪ್ಪಂದ
ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರೊಂದಿಗೆ ಫಲಪ್ರದ ಮಾತುಕತೆ ನಡೆಯಿತು. ಭಾರತ-ಸೌದಿ ಅರೇಬಿಯಾ ಸಂಬಂಧಗಳ ಬಹು ಆಯಾಮಗಳು ಹಾಗೂ ಆರ್ಥಿಕತೆ, ಸಂಸ್ಕೃತಿ ಮತ್ತು ಇಂಧನ ಒಪ್ಪಂದಗಳನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚಿಸಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಹೂಡಿಕೆ ಹೆಚ್ಚಳದ ಚರ್ಚೆ
ಕಾರ್ಯತಂತ್ರ ಒಪ್ಪಂದಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಸೌದಿ ರಾಜಕುಮಾರ ಅವರನ್ನು ಜಿ20 ಸಮಾವೇಶದ ಸಂದರ್ಭದಲ್ಲಿ ಭೇಟಿ ಮಾಡಿದ್ದಾರೆ. ತಂತ್ರಜ್ಞಾನ, ಮೂಲಸೌಕರ್ಯ, ಪೆಟ್ರೋಲಿಯಂ, ನವೀಕರಿಸಬಹದಾದ ಸಂಪನ್ಮೂಲ, ಆಹಾರ ಭದ್ರತೆ ಮತ್ತು ರಕ್ಷಣಾ ವಲಯಗಳಲ್ಲಿ ಸೌದಿಯ ಹೂಡಿಕೆಯನ್ನು ಹೆಚ್ಚಿಸುವ ಕುರಿತು ಮಾತನಾಡಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಸೌದಿ ಪಾಲುದಾರಿಕೆ ವಿಸ್ತರಣೆ
ಇತ್ತೀಚಿನ ವರ್ಷಗಳಲ್ಲಿ ಸೌದಿ ರಾಜಮನೆತನವು ಭಾರತದ ಮೌಲ್ಯಯುತ ಪಾಲುದಾರನಾಗಿದೆ. ಈ ಸಂಬಂಧವು ಭಾರತೀಯ ಸಮುದಾಯದ ನಂಟಿನ ಆಚೆಗೂ ಆರ್ಥಿಕತೆ, ಇಂಧನ ಮತ್ತು ಭದ್ರತೆಗೂ ವಿಸ್ತರಿಸಿದೆ. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಯ ಎಲ್ಲ ಸಮಸ್ಯೆಗಳ ಕುರಿತೂ ಚರ್ಚಿಸಲಾಗುವುದು ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.
|
ಗುಟೆರೆಸ್ ಜತೆ ಭೇಟಿ
ಬಳಿಕ ಮೋದಿ ಅವರು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಅವರನ್ನು ಭೇಟಿ ಮಾಡಿದರು. ಎರಡು ತಿಂಗಳಲ್ಲಿ ಮೋದಿ ಅವರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಭೇಟಿ ಮಾಡುತ್ತಿರುವುದು ಇದು ಎರಡನೆಯ ಬಾರಿ.
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಇಬ್ಬರೂ ನಾಯಕರು ಪರಸ್ಪರ ಮಾತುಕತೆ ನಡೆಸಿದರು.

ಟ್ರಂಪ್-ಮೋದಿ-ಅಬೆ ಭೇಟಿ
ಎರಡು ದಿನ ನಡೆಯಲಿರುವ 13ನೇ ಜಿ-20 ಸಮಾವೇಶದ ಬದಿಯಲ್ಲಿ ಮೋದಿ, ಡೊನಾಲ್ಡ್ ಟ್ರಂಪ್ ಮತ್ತು ಜಪಾನಿ ಪ್ರಧಾನಿ ಶಿಂಜೊ ಅಬೆ ತ್ರಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಶಕ್ತಿಯನ್ನು ಬಲಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಶನಿವಾರ ಮತ್ತು ಭಾನುವಾರದ ಸಮಾವೇಶದ ವೇಳೆ ಟ್ರಂಪ್ ಮತ್ತು ಅಬೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಬಳಿಕ ಅವರನ್ನು ಸೇರಿಕೊಳ್ಳಲಿದ್ದಾರೆ.












Click it and Unblock the Notifications