US Election: ಭಾರತೀಯ ಅಮೆರಿಕನ್ನರ ಜೊತೆ ಜೈ ಬೈಡನ್ ದೀಪಾವಳಿ; ಶ್ವೇತಭವನದಲ್ಲಿ ಸಂಭ್ರಮ
ಅಮೆರಿಕ ಅಧ್ಯಕ್ಷರ ನಿವಾಸ ಶ್ವೇತಭವನದಲ್ಲಿ ಇದೀಗ ದೀಪಾವಳಿ ಸಂಭ್ರಮ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದ್ದು, ವಿಶ್ವದ ಗಮನ ಸೆಳೆದಿದೆ. ಈ ನಡುವೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಸಂಭ್ರಮ ಡಬಲ್ ಆಗಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಭಾರತೀಯ ಅಮೆರಿಕನ್ನರ ಜೊತೆ ದೀಪಾವಳಿ ಆಚರಿಸಿದ್ದಾರೆ.
"ಬ್ಲೂ ರೂಮ್‌ನಲ್ಲಿ ದೀಪವನ್ನು ಬೆಳಗಿಸುವ ಮೂಲಕ ಜೋ ಬೈಡನ್ ದೀಪಾವಳಿ ಆಚರಣೆಗೆ ಚಾಲನೆ ನೀಡಿದರು. ಹಲವು ವರ್ಷಗಳಿಂದ ನಡೆದುಕೊಂಡಿರುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ" ಎಂದು ಶ್ವೇತಭವನ ತಿಳಿಸಿದೆ. ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಇದು ಜೋ ಬೈಡನ್ ಶ್ವೇತಭವನದಲ್ಲಿ ಆಚರಿಸುತ್ತಿರುವ ಕೊನೆಯ ದೀಪಾವಳಿಯಾಗಿದೆ.

ಈ ಸಂದರ್ಭದಲ್ಲಿ ಬಾಹ್ಯಾಕಾಶದಲ್ಲಿರುವ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ವಿಶೇಷ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು. ಬಾಹ್ಯಾಕಾಶದಿಂದಲೇ ಸುನಿತಾ ವಿಲಿಯಮ್ಸ್ ದೀಪಾವಳಿ ಶುಭಾಶಯಗಳನ್ನು ರವಾನಿಸಿದ್ದರು. ಭಾರತೀಯರ ಕೊಡುಗೆಗಳನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಿರುವ ಜೋ ಬೈಡನ್‌ಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಕೂಡ ತಿಳಿಸಿದ್ದಾರೆ.
"ಸುನಿತಾ ವಿಲಿಯಮ್ಸ್ ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಈ ಹಿಂದೆ ಕೂಡ ಜಗತ್ತಿನಾದ್ಯಂತ ದೀಪಾವಳಿ ಆಚರಿಸುವವರಿಗೆ ಬಾಹ್ಯಾಕಾಶ ಕೇಂದ್ರದಿಂದ ದೀಪಾವಳಿ ಶುಭಾಶಯ ಕಳಿಸಿದ್ದಾರೆ. ಹಿಂದೂ ಧರ್ಮದ ಭಾಗವಾಗಿರುವ ಭಗವದ್ಗೀತೆ ಮತ್ತು ಉಪನಿಷತ್ತುಗಳ ಪ್ರತಿಗಳನ್ನು ಒಳಗೊಂಡಂತೆ ಅನೇಕ ಆಧ್ಯಾತ್ಮಿಕ ವಸ್ತುಗಳನ್ನು ಸಹ ತಂದಿದ್ದಾರೆ" ಎಂದು ಶ್ವೇತಭವನ ತಿಳಿಸಿದೆ.
ದಕ್ಷಿಣ ಏಷ್ಯಾದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಮೇಳ, ಮರೈನ್ ಕಾರ್ಪ್ಸ್ ಬ್ಯಾಂಡ್ ಮೂಲಕ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ್ದ ಭಾರತೀಯ ಅಮೆರಿಕನ್ನರನ್ನು ರಂಜಿಸಲಾಯಿತು. ಈ ದೀಪಾವಳಿ ಕಾರ್ಯಕ್ರಮದಲ್ಲಿ ವೈಸ್ ಅಡ್ಮಿರಲ್ ವಿವೇಕ್ ಎಚ್. ಮೂರ್ತಿ ಸೇರಿದಂತೆ ಭಾರತೀಯ ಮೂಲದ 650ಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು. ಹಿಂದೆಂದೂ ಆಚರಿಸದಷ್ಟೂ ವೈಭವವಾಗಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿರುವುದು ಖುಷಿ ತಂದಿದೆ ಎಂದು ಜೋ ಬೈಡನ್ ಹೇಳಿದ್ದಾರೆ.
ರಂಗೇರಿದ ಅಧ್ಯಕ್ಷೀಯ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡ ರಂಗೇರಿದೆ. ರಿಪಬ್ಲಿಕ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದು ಎರಡನೇ ಬಾರಿ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್‌ಗೆ ಪ್ರಮುಖ ಉದ್ಯಮಿ ಎಲಾನ್ ಮಸ್ಕ್ ಬೆಂಬಲ ನೀಡಿರುವುದರಿಂದ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ.












Click it and Unblock the Notifications