G-20 ಶೃಂಗಸಭೆ: ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿ
ಇಂಡೋನೇಷ್ಯಾ, ನವೆಂಬರ್ 15: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ-20 ನಾಯಕರ ವಿಶೇಷ ಔತಣಕೂಟದಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಖಾಮುಖಿಯಾದರು.
ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಹಸ್ತಲಾಘವ ಮಾಡುತ್ತಿರುವ ವಿಡಿಯೋ ಕೂಡ ಹೊರಬಿದ್ದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಉಭಯ ನಾಯಕರು ಭೇಟಿಯಾದ ಸಂದರ್ಭದಲ್ಲಿ ಕ್ಸಿ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿ ಮಾತನ್ನು ಕೇಳುತ್ತಿದ್ದರು. ಇದೇ ವೇಳೆ ಜಿ 20 ಔತಣಕೂಟದಲ್ಲಿ ಪ್ರಧಾನಿ ಮೋದಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರನ್ನು ಭೇಟಿಯಾದರು.
ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಆಯೋಜಿಸಿದ್ದ ಜಿ-20 ಔತಣಕೂಟದಲ್ಲಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಹಸ್ತಲಾಘವ ಮಾಡಿದರು. 2020ರ ಏಪ್ರಿಲ್‌ನಲ್ಲಿ ಲಡಾಖ್‌ನಲ್ಲಿ ಚೀನಾ ಸೇನೆ ಮತ್ತು ಭಾರತೀಯ ಸೇನೆಯ ನಡುವಿನ ಬಿಕ್ಕಟ್ಟಿನ ನಂತರ ಉಭಯ ನಾಯಕರ ಮೊದಲ ಭೇಟಿ ಇದಾಗಿದೆ.

ಎಸ್‌ಸಿಒ (SCO) ಶೃಂಗಸಭೆಯಲ್ಲಿ ಭೇಟಿಯಾಗಿರಲಿಲ್ಲ
ಸೆಪ್ಟೆಂಬರ್‌ನಲ್ಲಿ ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಿದ್ದರು. ಆದರೆ, ಆ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ಹಸ್ತಲಾಘವ ಅಥವಾ ಶುಭಾಶಯ ವಿನಿಮಯದ ಸುದ್ದಿ ಇರಲಿಲ್ಲ.
ಜಿ20 ಶೃಂಗಸಭೆ ಮತ್ತು ಅದರಾಚೆಗಿನ ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸೋಮವಾರ ಬಾಲಿಗೆ ಭೇಟಿ ನೀಡಿದ್ದಾರೆ. ಎರಡು ದಿನಗಳ G20 ಶೃಂಗಸಭೆಯು ಮಂಗಳವಾರ ಪ್ರಾರಂಭಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವದ 20 ಪ್ರಮುಖ ಆರ್ಥಿಕತೆಗಳ ನಾಯಕರು ಭಾಗವಹಿಸಿದ್ದಾರೆ. ಈ ಜಿ-20 ಸಮ್ಮೇಳನದ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮೋದಿ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲೂ ಭಾಗವಹಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ರಕ್ತಸಿಕ್ತ ಘರ್ಷಣೆಯೂ ನಡೆದಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಾಲ್ಕು ಬಾರಿ ದ್ವಿಪಕ್ಷೀಯ ಮಾತುಕತೆ ನಡೆದಿದ್ದರೂ ಉನ್ನತ ಮಟ್ಟದಲ್ಲಿ ಯಾವುದೇ ಸಭೆ ನಡೆದಿಲ್ಲ. ಸೆಪ್ಟೆಂಬರ್ 2022ರ ಮೊದಲ ವಾರದಲ್ಲಿ, ಪೂರ್ವ ಲಡಾಖ್‌ನ ಉದ್ವಿಗ್ನ ಪ್ರದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವುದನ್ನು ಚೀನಾ ಮತ್ತು ಭಾರತದ ನಡುವೆ ಘೋಷಿಸಲಾಯಿತು. ಆದರೆ, ಭಾರತವು ಇದರಿಂದ ತೃಪ್ತರಾಗಿಲ್ಲ ಮತ್ತು ಏಪ್ರಿಲ್, 2020ರ ಮೊದಲು ಯಥಾಸ್ಥಿತಿಯನ್ನು ಜಾರಿಗೆ ತರಲು ಭಾರತ ಒತ್ತಾಯಿಸುತ್ತಿದೆ.












Click it and Unblock the Notifications