ಗಡಿ ಕಿತಾಪತಿ ಮಾಡುವವರಿಗೆ ಭಾರತದ ಶಾಂತಿ ಸಂದೇಶ?
ನವದೆಹಲಿ: ಶಾಂತಿಯುತವಾಗಿ ಸಮುದ್ರದ ಗಡಿ ವಿವಾದಗಳ ಇತ್ಯರ್ಥಕ್ಕೆ ಭಾರತ ಬದ್ಧ ಎನ್ನುವ ಮೂಲಕವಾಗಿ ಚೀನಾಗೆ ಸಂದೇಶ ರವಾನಿಸಿದ್ದಾರೆ ಪ್ರಧಾನಿ ಮೋದಿ. ಜಿ7 ಶೃಂಗ ಸಭೆ ಕಾರಣ ಜಪಾನ್‌ಗೆ ತೆರಳಿರುವ ಪ್ರಧಾನಿ ಮೋದಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಹಾಗಾದ್ರೆ ಯಾವ ವಿಷಯ ಗಮನದಲ್ಲಿ ಇಟ್ಟುಕೊಂಡು ಪಿಎಂ ಮೋದಿ ಈ ಮಾತು ಹೇಳಿದ್ದಾರೆ? ಬನ್ನಿ ನೋಡೋಣ.
ಜಾಗತಿಕ ಮಟ್ಟದಲ್ಲಿ ಜಲ ಗಡಿಯ ವಿಚಾರಕ್ಕೆ ಸಾಕಷ್ಟು ಕಿತ್ತಾಟಗಳು ಶುರುವಾಗಿದ್ದು ಚೀನಾ ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರ ಪ್ರದೇಶ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಹೊತ್ತಲ್ಲೇ ಸಮುದ್ರದ ಗಡಿ ವಿವಾದ ಇತ್ಯರ್ಥಕ್ಕೆ ಭಾರತ ಬದ್ಧ ಎನ್ನುವ ಮೂಲಕ ಶಾಂತಿಯ ಸಂದೇಶವನ್ನ ರವಾನಿಸಿದ್ದಾರೆ ಪ್ರಧಾನಿ ಮೋದಿ. ಹಾಗಾದ್ರೆ ಪ್ರಧಾನಿ ಮೋದಿಯವರ ಹೇಳಿಕೆಯಿಂದ ಏನೆಲ್ಲಾ ಲಾಭವಾಗುತ್ತೆ ನೋಡೋಣ ಬನ್ನಿ.

ಭಾರತದಿಂದ ಶಾಂತಿಯ ಸಂದೇಶ!
ದಕ್ಷಿಣ & ಪೂರ್ವ ಚೀನಾ ಸಮುದ್ರ ಭಾಗ, ತೈವಾನ್ ಜಲಸಂಧಿ ಭಾಗದಲ್ಲಿ ಚೀನಾ ಸೇನಾ ಬಲ ಪ್ರದರ್ಶಿಸುತ್ತಿದೆ. ಇದೇ ಹಿನ್ನೆಲೆ ಜಪಾನ್ ಮೂಲದ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿಯವರು ಬಾಂಗ್ಲಾದೇಶ ಜೊತೆಗಿನ ಸಮುದ್ರದ ಗಡಿ ವಿವಾದವನ್ನು ಭಾರತ ಯಶಸ್ವಿಯಾಗಿ ಬಗೆಹರಿಸಿಕೊಂಡಿದೆ ಎಂದಿದ್ದಾರೆ. ಈ ಮೂಲಕ ಚೀನಾ ಕೂಡ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲಿ ಎಂಬ ಸಂದೇಶ ಹೊರಬಿದ್ದಂತೆ ಆಗಿದೆ ಎನ್ನಬಹುದು.
ಜಿ7 & ಜಿ20 ಶೃಂಗ ಸಭೆಗಳ ಪ್ರಸ್ತಾಪ
ಹಾಗೇ ಇನ್ನೊಂದ್ಕಡೆ ಆಧುನಿಕ ಜಗತ್ತಿನಲ್ಲಿ ಜಿ7 ಸದಸ್ಯ ರಾಷ್ಟ್ರಗಳ ಪಾತ್ರದ ಬಗ್ಗೆಯೂ ಮಾತನಾಡಿದ ಪಿಎಂ ಮೋದಿ, ಜಾಗತಿಕ ಸಹಕಾರಕ್ಕೆ ಜಿ7 ಮತ್ತು ಜಿ20 ಶೃಂಗ ಸಭೆಗಳ ಪಾತ್ರ ನಿರ್ಣಾಯಕ. ಹವಾಮಾನ ವೈಪರೀತ್ಯ & ಆರ್ಥಿಕ ಚೇತರಿಕೆಯೂ ಸೇರಿದಂತೆ ಆರೋಗ್ಯ, ಆಹಾರ ಭದ್ರತೆ ಸೇರಿದಂತೆ ಶಾಂತಿ ಹಾಗೂ ಸುರಕ್ಷತೆ ಕಾಪಾಡಲು ಈ ಸಭೆಗಳ ಪಾತ್ರ ಮಹತ್ವಪೂರ್ಣವಾಗಿದೆ ಎಂದಿದ್ದಾರೆ. ಈ ಮೂಲಕ ಜಾಗತಿಕವಾಗಿ ಭಾರತ ಜಿ7 ಮತ್ತು ಜಿ20 ಒಕ್ಕೂಟಗಳ ಅಗತ್ಯತೆಯನ್ನ ವಿವರಿಸಿದೆ.
ಉಕ್ರೇನ್ ಅಧ್ಯಕ್ಷರ ಜೊತೆ ಚರ್ಚೆ!
ಅತ್ತ ರಷ್ಯಾ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಇನ್ನೊಂದ್ಕಡೆ ಉಕ್ರೇನ್ ಕೂಡ ಯುದ್ಧ ನಿಲ್ಲಿಸಿ ಎಂದು ಭಾರತದ ಬಳಿ ಅಂಗಲಾಚಿದೆ. ಇದೇ ಹೊತ್ತಲ್ಲಿ ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷರ ಚರ್ಚೆಗೆ ಜಪಾನ್ ವೇದಿಕೆ ಒದಗಿಸಿತ್ತು. ಈ ವೇಳೆ ಪ್ರಧಾನಿ ಮೋದಿ ಯುದ್ಧದ ಬದಲು ಮಾನವೀಯತೆಯ ಪಾಠವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಯುದ್ಧ ನಿಲ್ಲಿಸಿ ಎಂದು ಮತ್ತೆ ರಷ್ಯಾಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಉಕ್ರೇನ್ ಪರಿಸ್ಥಿತಿಗೆ ಪಿಎಂ ಮೋದಿ ಕಂಬನಿ
ಉಕ್ರೇನ್ ಯುದ್ಧ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿದೆ. ಇದು ಪ್ರಪಂಚದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದೆ, ಆದರೆ ನಾನು ಇದನ್ನು ರಾಜಕೀಯ ಅಥವಾ ಆರ್ಥಿಕ ಸಮಸ್ಯೆ ಎಂದು ಪರಿಗಣಿಸುವುದಿಲ್ಲ. ಆದರೆ ಇದು ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳ ಸಮಸ್ಯೆಯಾಗಿದೆ. ಯುದ್ಧದ ಸಂಕಟ ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿದ್ದು, ಕಳೆದ ವರ್ಷ ನಮ್ಮ ದೇಶದ ಪ್ರಜೆಗಳು ಉಕ್ರೇನ್‌ನಿಂದ ಹಿಂತಿರುಗಿ ಅಲ್ಲಿನ ಪರಿಸ್ಥಿತಿ ಹೇಳಿದಾಗ ನಿಮ್ಮ ಪ್ರಜೆಗಳ ವೇದನೆ ಚೆನ್ನಾಗಿ ಅರ್ಥಮಾಡಿಕೊಂಡೆ ಎಂದಿದ್ದಾರೆ ಪ್ರಧಾನಿ ಮೋದಿ.
ಕೊನೆಗೂ ಬೇಡಿದ ಉಕ್ರೇನ್!
ಪರಿಸ್ಥಿತಿ ಬದಲಾಗಿದೆ, ಒಂದು ಕಾಲದಲ್ಲಿ ಭಾರತದ ವಿರುದ್ಧವೇ ಮಾತನಾಡುತ್ತಿದ್ದ ಉಕ್ರೇನ್ ಈ ಸಂದರ್ಭದಲ್ಲಿ ಭಾರತದ ಬಳಿ ಬೇಡುವ ಸ್ಥಿತಿ ಬಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಿಎಂ ನರೇಂದ್ರ ಮೋದಿ ಜೊತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಪಾನ್‌ನಲ್ಲಿ ಚರ್ಚೆ ಕೂಡ ನಡೆಸಿದ್ದಾರೆ. ಶೃಂಗಸಭೆ ಜತೆ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸೇರಿದಂತೆ ಜಾಗತಿಕ ನಾಯಕರ ಜೊತೆ ಅವರು ಸರಣಿ ದ್ವಿಪಕ್ಷೀಯ ಸಭೆ ನಡುವೆಯೂ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷರ ಜೊತೆಗೆ ಚರ್ಚೆ ನಡೆಸಿರುವುದು ವಿಶೇಷ.
ಒಟ್ನಲ್ಲಿ ಭಾರತ ಈಗ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಬೇಕು, ಅದರಲ್ಲೂ ಜಪಾನ್ ಮತ್ತು ಉಕ್ರೇನ್ ಇದೀಗ ಭಾರತದ ಸಹಾಯದ ನಿರೀಕ್ಷೆಯಲ್ಲಿವೆ. ಯುದ್ಧ ಪೀಡಿತ ಉಕ್ರೇನ್ ಹಲವು ಸಂಕಷ್ಟಗಳಿಂದ ನರಳುತ್ತಿದ್ದು, ಈ ಹೊತ್ತಲ್ಲೇ ಯುದ್ಧ ನಿಲ್ಲಿಸಲು ಸಹಕಾರ ನೀಡುವಂತೆ ಕೋರಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.












Click it and Unblock the Notifications