Plane Crash: ವಿಮಾನ ಅಪಘಾತಕ್ಕೆ 15 ಪ್ರಯಾಣಿಕರು ಬಲಿ, ದಕ್ಷಿಣ ಅಮೆರಿಕದಲ್ಲಿ ಘೋರ ದುರಂತ
ವಿಮಾನ ಪ್ರಯಾಣ ಸೇಫ್ ಅಂತಾ ಹೇಳುತ್ತಿದ್ದ ದಿನಗಳು ಇದೀಗ ಮಾಯ ಆಗುತ್ತಿದ್ದು, ಒಂದಾದ ನಂತರ ಒಂದು ವಿಮಾನ ಅಪಘಾತಗಳು ಸಂಭವಿಸುತ್ತಿರುವ ಕಾರಣ ಪ್ರಯಾಣಿಕರು ಭಯಪಡುವ ವಾತಾವರಣ ನಿರ್ಮಾಣ ಆಗಿದೆ. ಭಾರತದ ಪ್ರಮುಖ ರಾಜ್ಯ ಮಹಾರಾಷ್ಟ್ರದಲ್ಲಿ ನಿನ್ನೆ ಭೀಕರ ವಿಮಾನ ದುರಂತ ಅಲ್ಲಿನ ಡಿಸಿಎಂ ಅಜಿತ್ ಪವಾರ್ ಸೇರಿದಂತೆ 5 ಜನರನ್ನು ಬಲಿ ಪಡೆದಿತ್ತು. ಈ ಕಹಿ ಘಟನೆ ಬೆನ್ನಲ್ಲೇ ದೂರದ ದಕ್ಷಿಣ ಅಮೆರಿಕ ಘೋರ ದುರಂತಕ್ಕೆ ಸಾಕ್ಷಿಯಾಗಿದೆ. ವಿಮಾನ ಅಪಘಾತಕ್ಕೆ 15 ಪ್ರಯಾಣಿಕರು ಈಗ ಬಲಿಯಾಗಿದ್ದು, ದುರಂತದಲ್ಲಿ ಮೃತಪಟ್ಟವರ ಪೈಕಿ ಸಂಸದ ಕೂಡ ಸೇರಿದ್ದಾರೆ.
ಜಗತ್ತಿನಲ್ಲಿ ವಿಮಾನ ಸೇವೆ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತದೆ, ಏಕೆಂದರೆ ಹೀಗೆ ವಿಮಾನ ಸೇವೆಯಲ್ಲಿ ಒಂದು ಸಣ್ಣ ಎಡವಟ್ಟು ಮಾಡಿಕೊಂಡರೂ ಅದು ನೂರಾರು ಪ್ರಯಾಣಿಕರ ಜೀವದ ಜೊತೆಗೆ ಚಲ್ಲಾಟ ಆಡಿದಂತೆ. ಅದರಲ್ಲೂ ಸಣ್ಣಪುಟ್ಟ ವಿಮಾನ ಇದ್ದರೆ ಅಪಘಾತ ಆಗುವ ಸಾಧ್ಯತೆಗಳು ಹೆಚ್ಚು ಎಂಬ ವಾದ ಇತ್ತೀಚೆಗೆ ಶುರುವಾಗಿದೆ. ಏಕೆಂದರೆ ಸಾಲು ಸಾಲು ಪುಟಾಣಿ ವಿಮಾನ ಇದೀಗ ಅಪಘಾತಕ್ಕೆ ತುತ್ತಾಗಿ ಪ್ರಯಾಣಿಕರ ಜೀವ ತೆಗೆಯುತ್ತಿವೆ. ಅದೇ ರೀತಿ ಇದೀಗ ದಿಢೀರ್ ದೂರದ ಕೊಲಂಬಿಯಾ ಕೂಡ ಭೀಕರ ವಿಮಾನ ದುರಂತಕ್ಕೆ ಸಾಕ್ಷಿಯಾಗಿದೆ.

13 ಪ್ರಯಾಣಿಕರು & ಇಬ್ಬರು ಸಿಬ್ಬಂದಿ
ದಕ್ಷಿಣ ಅಮೆರಿಕದ ಕೊಲಂಬಿಯಾ ಮತ್ತು ವೆನೆಝುವೆಲಾ ಗಡಿ ಭಾಗದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, ವಿಮಾನ ಅಪಘಾತದಲ್ಲಿ ಸಂಸತ್ ಸದಸ್ಯ ಸೇರಿ 13 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದೀಗ ಬಲಿಯಾಗಿದ್ದಾರೆ. ಕೊಲಂಬಿಯಾದ ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾಗೆ ಸೇರಿದ ವಿಮಾನವೇ ಇದೀಗ ಘೋರ ಅಂತ್ಯ ಕಂಡಿದೆ. ಕುಕುಟಾದಿಂದ ಟೇಕಾಫ್ ಆಗಿದ್ದ ವಿಮಾನ, ಲ್ಯಾಂಡಿಂಗ್ ಆಗುವ ಸಮಯಕ್ಕೆ ಮೊದಲೇ ನಿಯಂತ್ರಣ ಗೋಪುರದೊಂದಿಗೆ ತನ್ನ ಸಂಪರ್ಕ ಕಡಿದುಕೊಂಡಿದೆ. ನಂತರ ಈ ವಿಮಾನ ಭೀಕರ ದುರಂತಕ್ಕೆ ತುತ್ತಾಗಿದ್ದು, ಈ ಘಟನೆ ವಿಮಾನ ಪ್ರಯಾಣದ ಬಗ್ಗೆ ಮತ್ತಷ್ಟು ಆತಂಕ ಹೆಚ್ಚು ಮಾಡಿದೆ.
ಮೃತದೇಹ ಹೊರಗೆ ತೆಗೆಯಲು ಪರದಾಟ
ಭೀಕರ ವಿಮಾನ ದುರಂತ ಸಂಭವಿಸಿರುವ ಕುಕುಟಾ ಪರ್ವತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಘೋರ ಹವಾಮಾನ ಪರಿಸ್ಥಿತಿ ಎದುರಾಗುತ್ತದೆ. ಅಲ್ಲದೆ ಈ ಪ್ರದೇಶ ಗೆರಿಲ್ಲಾ ಗುಂಪು ನ್ಯಾಷನಲ್ ಲಿಬರೇಶನ್ ಆರ್ಮಿ ನಿಯಂತ್ರಣದಲ್ಲಿ ಇದೆ. ಹೀಗಿದ್ದಾಗ ವಿಮಾನ ದುರಂತದ ನಂತರ ಮೃತದೇಹ ರಕ್ಷಣೆ ಮಾಡಿ, ಕುಟುಂಬಗಳಿಗೆ ತಲುಪಿಸುವುದು ಕಷ್ಟಕರವಾಗಿದೆ. ಹೀಗಾಗಿ ಇದೀಗ ವಿಶೇಷ ತಂಡ ರಚನೆ ಮಾಡಿರುವ ಅಲ್ಲಿನ ಸರ್ಕಾರ ಪರ್ವತ ಭಾಗದಲ್ಲಿ ಮೃತದೇಹಗಳ ಹುಡುಕಾಟಕ್ಕೆ ಎಲ್ಲಾ ರೀತಿಯ ಪ್ರಯತ್ನ ಕೂಡ ಮಾಡುತ್ತಿದೆ. ಆದರೆ ವಿಮಾನದಲ್ಲಿದ್ದ ಯಾರು ಉಳಿದುಕೊಂಡಿಲ್ಲ ಎಂಬ ವಿಚಾರವನ್ನ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಕೊಲಂಬಿಯಾ ವಿಮಾನ ದುರಂತ ಕಂಡು ಇಡೀ ದಕ್ಷಿಣ ಅಮೆರಿಕ ಬೆಚ್ಚಿಬಿದ್ದಿದೆ.












Click it and Unblock the Notifications