ಓಮಿಕ್ರಾನ್ ರೂಪಾಂತರಿಯನ್ನು ತಟಸ್ಥಗೊಳಿಸಲಿದೆ 'ಪ್ಯಾಕ್ಸ್ಲೋವಿಡ್' ಮಾತ್ರೆ
ನವದೆಹಲಿ, ಡಿಸೆಂಬರ್ 15: ಫೈಜರ್ ಕಂಪೆನಿಯ ಮಾತ್ರೆ ಕೊರೊನಾ ವಿರುದ್ಧ ಪರಿಣಾಮಕಾರಿ ಆಗಿದೆ. ಕೊರೊನಾ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಇದು ತಡೆಯುತ್ತದೆ.
ಫೈಜರ್ ಕಂಪನಿಯ 'ಪ್ಯಾಕ್ಸ್ಲೋವಿಡ್' ಮಾತ್ರೆ ಓಮಿಕ್ರಾನ್ ರೂಪಾಂತರಿಯನ್ನು ತಟಸ್ಥಗೊಳಿಸಲಿದೆ ಎಂದು ಹೇಳಲಾಗಿದೆ. ಕೇವಲ ಮೂರೇ ದಿನಗಳಲ್ಲಿ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹೈ ರಿಸ್ಕ್ ರೋಗಿಗಳಲ್ಲಿ ಶೇ.89ರಷ್ಟು ಸಾವನ್ನು ಈ ಮಾತ್ರೆ ತಡೆಯುತ್ತದೆ. ಫೈಜರ್ ಮಾತ್ರೆಯಿಂದ ಕೊರೊನಾ ರೋಗಿಗಳ ಚಿಕಿತ್ಸೆ ಸುಲಭವಾಗಲಿದೆ. ಇನ್ಮುಂದೆ ಮಾತ್ರೆಗಳ ವೈದ್ಯಕೀಯ ಪರೀಕ್ಷೆ ನಡೆಸಲ್ಲ ಎಂದು ಫೈಜರ್ ಹೇಳಿಕೆ ನೀಡಿದೆ.
ಫೈಜರ್ ಮಾತ್ರೆ ನಿರೀಕ್ಷೆಗೂ ಮೀರಿ ಪರಿಣಾಮಕಾರಿಯಾಗಿದೆ. ತುರ್ತು ಬಳಕೆಗೆ ಅನುಮತಿ ಕೋರಿ ಡಾಟಾ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ. ಮಾತ್ರೆಯ ಡಾಟಾ ಅಮೆರಿಕದ ಡ್ರಗ್ಸ್ ರೆಗ್ಯುಲೇಟರ್‌ಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಫೈಜರ್ ಕಂಪನಿಯಿಂದ ಕೊರೊನಾ ವಿರುದ್ಧ ಮಾತ್ರೆ ಅಭಿವೃದ್ಧಿಪಡಿಸಲಾಗಿದೆ. ಮಾತ್ರೆ ಅಭಿವೃದ್ಧಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಫೈಜರ್ ಕಂಪನಿಯ ಷೇರುಗಳ ಬೆಲೆಯಲ್ಲಿ ಶೇಕಡಾ 11ರಷ್ಟು ಏರಿಕೆ ಕಂಡುಬಂದಿದೆ.
ರೋಗಲಕ್ಷಣ ಕಂಡುಬಂದ 3 ದಿನಗಳಲ್ಲಿ ಮಾತ್ರೆ ಸೇವಿಸಬೇಕು. ಐದು ದಿನಗಳಲ್ಲಿ 30 ಮಾತ್ರೆಗಳನ್ನು ನೀಡಬೇಕಾಗುತ್ತದೆ. HIVಯ ಹಳೆಯ ಔಷಧ ಜೊತೆ ಮಾತ್ರೆ ನೀಡಬೇಕು ಎಂದು ತಿಳಿಸಲಾಗಿದೆ. ವಿವಿಧ ವೈರಸ್ಗಳಿಗೆ ಒಂದೇ ರೀತಿಯಾಗಿದ್ದ ಆಂಟಿ ವೈರಲ್ ಡ್ರಗ್ ಬಳಸುತ್ತಾರೆ. ಫೈಜರ್ ಮಾತ್ರೆ ಹೆಚ್ಚು ದೇಹದಲ್ಲಿ ಸಕ್ರೀಯವಾಗಲು ಹೆಚ್ಐವಿ ಔಷಧಿ ಬಳಸಲಾಗುತ್ತೆ ಎಂದು ತಿಳಿಸಿದ್ದಾರೆ.
ಕೊವಿಡ್ ಸೋಂಕಿತರಿಗೆ ಮೆರ್ಕ್ ಮಾತ್ರೆ ನೀಡಲು ಬ್ರಿಟನ್ ಒಪ್ಪಿಗೆ: ಅಮೆರಿಕದ ಔಷಧ ತಯಾರಿಕ ಕಂಪೆನಿ ಮೆರ್ಕ್ (MRK) ತಯಾರಿಸಿರುವ ಮಾತ್ರೆಗಳನ್ನು ಕೊರೊನಾ ಸೋಂಕಿತರಿಗೆ ನೀಡಲು ಬ್ರಿಟನ್ ಔಷಧ ನಿಯಂತ್ರಣಾ ಸಂಸ್ಥೆ ಗುರುವಾರ ಅನುಮೋದನೆ ನೀಡಿತ್ತು. ಬ್ರಿಟನ್ ಈ ಮಾತ್ರೆಯ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎನಿಸಿತ್ತು. ಮೊಲ್ನುಪಿರವಿರ್ ಹೆಸರಿನಲ್ಲಿ ಈ ಮಾತ್ರೆಯು ಬ್ರಿಟನ್ನಲ್ಲಿ ಜನರಿಗೆ ಲಭ್ಯವಾಗಲಿದೆ.
ಕೊವಿಡ್ ಸೋಂಕಿತರಿಗೆ ಈ ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ನೀಡಲಾಗುವುದು. ಸೋಂಕು ದೃಢಪಟ್ಟ ಮೊದಲ ಐದು ದಿನಗಳ ಒಳಗೆ ಮನೆಗಳಲ್ಲಿಯೇ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದಾಗಿದೆ. ಕ್ಲಿನಿಕಲ್ ಟ್ರಯಲ್ಗಳ ವೇಳೆ ಈ ಮಾತ್ರೆಯ ಪರಿಣಾಮ ಸಾಬೀತಾಗಿತ್ತು. ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆಯನ್ನು, ಸೋಂಕಿನ ಲಕ್ಷಣಗಳನ್ನು ಮತ್ತು ಸಾವು ಸಂಭವಿಸುವ ಸಾಧ್ಯತೆಗಳನ್ನು ಇದು ಕಡಿಮೆ ಮಾಡಿತ್ತು.
ಕ್ಲಿನಿಕಲ್ ಟ್ರಯಲ್ನಲ್ಲಿ ಪಾಲ್ಗೊಂಡಿದ್ದ 775 ರೋಗಿಗಳ ಪೈಕಿ ಮೊದಲ 29 ದಿನಗಳಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ. 'ಬ್ರಿಟನ್‌ನ ಇತಿಹಾಸದಲ್ಲಿ ಇದು ಮಹತ್ವದ ದಿನ. ಕೊವಿಡ್ ಚಿಕಿತ್ಸೆಗೆ ಮನೆಯಲ್ಲಿಯೇ ಔಷಧ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿರುವುದು ಮಹತ್ವದ ನಿರ್ಧಾರ' ಎಂದು ಬ್ರಿಟನ್‌ನ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್ ಜಾವಿದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
ಫೈಜರ್ ಹಾಗೂ ಆಸ್ಟ್ರಾಜೆನೆಕಾದ 2 ಡೋಸ್ ಲಸಿಕೆಯನ್ನು ಪಡೆದವರಲ್ಲಿಯೂ ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಆರು ತಿಂಗಳ ಒಳಗಾಗಿಯೇ ನಶಿಸಲು ಆರಂಭಿಸುತ್ತದೆ ಎಂಬುದನ್ನು ಬ್ರಿಟನ್ ಸಂಶೋಧಕರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಹೀಗಾಗಿ ಕೊರೋನಾದಿಂದ ರಕ್ಷಣೆಗೆ ಬೂಸ್ಟರ್ ಡೋಸ್ ನೀಡಬೇಕು ಎಂಬ ತಜ್ಞರ ಅಭಿಪ್ರಾಯಕ್ಕೆ ಇನ್ನಷ್ಟುಬಲ ಬಂದಿದೆ.
ಬ್ರಿಟನ್‌ನ ಎನ್‌ಜಿಒ ಝಡ್‌ಒಇ ಕೋವಿಡ್ ಅಧ್ಯಯನ ಕೇಂದ್ರದ ಸಂಶೋಧಕರು 12 ಲಕ್ಷ ಪರೀಕ್ಷಾ ಮಾದರಿಗಳನ್ನು ವಿಶ್ಲೇಷಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. 2 ಡೋಸ್ ಫೈಜರ್ ಲಸಿಕೆ ಪಡೆದವರಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ 5ರಿಂದ 6 ತಿಂಗಳ ಬಳಿಕ ಶೇ. 88ರಿಂದ ಶೇ.74ಕ್ಕೆ ಇಳಿಕೆ ಆಗಿರುವುದು ಕಂಡುಬಂದಿದೆ. ಅದೇ ರೀತಿ ಆಸ್ಟ್ರಾಜೆನೆಕಾದ ಪ್ರಭಾವ ಶೇ.74ರಿಂದ ಶೇ.74ಕ್ಕೆ ಇಳಿಕೆ ಕಂಡಿದೆ.
ಇದೇ ವೇಳೆ ಭಾರತದಲ್ಲಿ ಬಳಕೆ ಆಗುತ್ತಿರುವ ಕೋವಿಶೀಲ್ಡ್‌ನ ಪ್ರಭಾವ 4ರಿಂದ 5 ತಿಂಗಳಿನಲ್ಲಿ ಶೇ.77ರಿಂದ ಶೇ.67ಕ್ಕೆ ಇಳಿಕೆ ಆಗಿದೆ. ಆದಾಗ್ಯೂ ಅತ್ಯಂತ ವೇಗವಾಗಿ ಹರಡಬಲ್ಲ ಡೆಲ್ಟಾಪ್ರಭೇದದಿಂದ ಈಗಲೂ ಲಸಿಕೆ ಅತ್ಯುತ್ತಮ ರಕ್ಷಣೆಯನ್ನು ಒದಗಿಸುತ್ತಿದೆ. ಗಂಭೀರ ಪ್ರಕರಣಗಳನ್ನು ತಗ್ಗಿಸುದರಲ್ಲಿ ಲಸಿಕೆ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.












Click it and Unblock the Notifications