Pervez Musharraf: ದುಬೈನಿಂದ ಕರಾಚಿಗೆ ಪರ್ವೇಜ್ ಮುಷರಫ್ ಪಾರ್ಥಿವ ಶರೀರ, ಮಂಗಳವಾರ ಅಂತ್ಯಕ್ರಿಯೆ
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅಂತ್ಯಕ್ರಿಯೆ ಪಾಕಿಸ್ತಾನದಲ್ಲಿ ನಡೆಯಲಿದ್ದು, ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ದುಬೈನಿಂದ ಕರಾಚಿಗೆ ತರಲಾಗಿದೆ.
ಇಸ್ಲಮಾಬಾದ್, ಫೆಬ್ರವರಿ 7: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದ್ದು, ಅವರ ಪಾರ್ಥೀವ ಶರೀರವನ್ನು ದುಬೈನಿಂದ ವಿಶೇಷ ವಿಮಾನದಲ್ಲಿ ಸೋಮವಾರ ತರಲಾಗಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 79 ವರ್ಷದ ಅವರು ದುಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮಂಗಳವಾರ ಸೇನಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಕೊನೆಯ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಅವರು 2016 ರಿಂದ ದುಬೈನಲ್ಲಿ ವಾಸಿಸುತ್ತಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ದುಬೈನ ಅಮೇರಿಕನ್ ಹಾಸ್ಪಿಟಲ್‌ನಲ್ಲಿ ಅಮಿಲೋಯ್ಡೋಸಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಕೊನೆಯುಸಿರೆಳೆದಿದ್ದರು.

ಪರ್ವೇಜ್ ಮುಷರಫ್ ಅವರ ಪತ್ನಿ ಸಬಾ, ಮಗ ಬಿಲಾಲ್, ಪುತ್ರಿ ಮತ್ತು ಇತರ ಹತ್ತಿರದ ಸಂಬಂಧಿಗಳು ಯುಎಇ ಅಧಿಕಾರಿಗಳು ಏರ್ಪಡಿಸಿದ ಮಾಲ್ಟಾ ಏವಿಯೇಷನ್‌ನ ವಿಶೇಷ ಏರ್‌ಬಸ್ 319 ವಿಮಾನದಲ್ಲಿ ಪಾರ್ಥಿವ ಶರೀರದೊಂದಿಗೆ ಕರಾಚಿಗೆ ಆಗಮಿಸಿದ್ದಾರೆ.
ವಿಮಾನವು ದುಬೈನ ಅಲ್ ಮಖ್ತೂಮ್ ವಿಮಾನ ನಿಲ್ದಾಣದಿಂದ ಭಾರೀ ಭದ್ರತೆಯ ನಡುವೆ ವಿಮಾನವು ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಳೆಯ ಟರ್ಮಿನಲ್ ಪ್ರದೇಶಕ್ಕೆ ಪ್ರವೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಮಲಿರ್ ಕ್ಯಾಂಟ್‌ನಲ್ಲಿ ವ್ಯವಸ್ಥೆಗಳು ಪೂರ್ಣಗೊಂಡಿವೆ. ಕರಾಚಿಯ ಹಳೆಯ ಸೇನಾ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಿ ಸಮಾಧಿ ಮಾಡಲಾಗುತ್ತದೆ. ಅಂತ್ಯಕ್ರಿಯೆಯ ಪ್ರಾರ್ಥನೆಗಳು ಮಲಿರ್ ಕ್ಯಾಂಟ್‌ನಲ್ಲಿರುವ ಗುಲ್ಮೊಹರ್ ಪೋಲೋ ಮೈದಾನದಲ್ಲಿ ನಡೆಯಲಿದೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ.

"ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮಲಿರ್ ಕ್ಯಾಂಟ್‌ನಲ್ಲಿರುವ ಪೋಲೋ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ 1:45 ಕ್ಕೆ ಸಲ್ಲಿಸಲಾಗುವುದು" ಎಂದಿದ್ದಾರೆ.
ಪರ್ವೇಜ್ ಮುಷರಫ್ ಅವರು ಆಗಸ್ಟ್ 11, 1943 ರಂದು ದೆಹಲಿಯಲ್ಲಿ ಜನಿಸಿದರು. 1947 ರಲ್ಲಿ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು. ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು.
ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, 1999 ರಲ್ಲಿ ಯಶಸ್ವಿ ಮಿಲಿಟರಿ ದಂಗೆಯ ನಂತರ ಪಾಕಿಸ್ತಾನದ ಹತ್ತನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು 1998 ರಿಂದ 2001 ರವರೆಗೆ ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ (ಸಿಜೆಸಿಎಸ್‌ಸಿ) 10 ನೇ ಅಧ್ಯಕ್ಷರಾಗಿ ಮತ್ತು 1998 ರಿಂದ 2007 ರವರೆಗೆ 7 ನೇ ಉನ್ನತ ಜನರಲ್ ಆಗಿ ಸೇವೆ ಸಲ್ಲಿಸಿದರು.
2007 ರಲ್ಲಿ ಪಾಕ್ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದ ಪರ್ವೇಜ್ ಮುಷರಫ್ ಕಳೆದ ಎಂಟು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ತನ್ನ ಉಳಿದ ಜೀವನವನ್ನು ತನ್ನ ತಾಯ್ನಾಡಿನಲ್ಲಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಸಾಧ್ಯವಾದಷ್ಟು ಬೇಗ ಪಾಕಿಸ್ತಾನಕ್ಕೆ ಮರಳಲು ಬಯಸುವುದಾಗಿ ತಿಳಿಸಿದ್ದರು. ಪಾಕಿಸ್ತಾನವನ್ನು ಆಳಿದ ಕೊನೆಯ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಷರಫ್.












Click it and Unblock the Notifications