Bomb Blast: ತಾಲಿಬಾನ್ ವಿರುದ್ಧ ಅಟ್ಯಾಕ್ ಮಾಡುತ್ತಾ ಪಾಕಿಸ್ತಾನ?
ಇಸ್ಲಾಮಾಬಾದ್: ಉಗ್ರರ ತವರು ಪಾಕಿಸ್ತಾನ ಅದೇ ಉಗ್ರರಿಂದ ನಲುಗುತ್ತಿದೆ. ಕೆಲ ದಿನಗಳ ಹಿಂದೆ ಪಾಕ್‌ನ ಖೈಬರ್ ಪಖ್ತುಂಖ್ವಾ ಭಾಗದಲ್ಲಿ ರಾಜಕೀಯ ಸಭೆ ವೇಳೆ ಸೂಸೈಡ್ ಬಾಂಬರ್ ತನ್ನನ್ನೇ ಸ್ಫೋಟಿಸಿಕೊಂಡಿದ್ದ. ಘಟನೆಯಲ್ಲಿ 56 ಜನ ಮೃತಪಟ್ಟಿದ್ದು, ಈ ಘಟನೆ ಬಳಿಕ ಪಾಕಿಸ್ತಾನ ತಾಲಿಬಾನ್ ವಿರುದ್ಧ ರೊಚ್ಚಿಗೆದ್ದಿದೆ. ಅಷ್ಟಕ್ಕೂ ಪಾಕ್ ಹೀಗೆ ಕೋಪಗೊಳ್ಳಲು ಕಾರಣ ಏನು? ಸಂಪೂರ್ಣ ಮಾಹಿತಿ ತಿಳಿಯಿರಿ.
ಅಂದಹಾಗೆ ಪಾಕಿಸ್ತಾನದಲ್ಲಿ ಪದೇ ಪದೆ ಉಗ್ರರ ದಾಳಿಗಳು ನಡೆಯುತ್ತಿವೆ. ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, 2023ರ ಮೊದಲ 7 ತಿಂಗಳಲ್ಲಿ 18 ಕೇಸ್ ನಡೆದಿವೆ. 200ಕ್ಕೂ ಹೆಚ್ಚು ಜನ ಮೃತಪಟ್ಟು, 450 ಜನ ಗಾಯಗೊಂಡಿದ್ದಾರೆ. ಹೀಗೆ ದಿನ ದಿನಕ್ಕೂ ಉಗ್ರರ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರು ರೊಚ್ಚಿಗೆದ್ದಿದ್ದಾರೆ. ಈ ಬಗ್ಗೆ ನೆರೆ ದೇಶ ಅಫ್ಘಾನಿಸ್ತಾನಕ್ಕೆ ವಾರ್ನಿಂಗ್ ನೀಡಿರುವ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ, ನಿಮ್ಮ ದೇಶಕ್ಕೆ ನುಗ್ಗಿ ಉಗ್ರರನ್ನ ನಾವೇ ಹೊಡೆಯುತ್ತೇವೆ ಅಂತಾ ತಾಲಿಬಾನ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸ್ಫೋಟದ ಜಾಗದಲ್ಲಿ ಹೆಣಗಳ ರಾಶಿ
ಹೌದು ಪಾಕಿಸ್ತಾನದಲ್ಲಿ ಜೀವಕ್ಕೆ ಬೆಲೆಯೇ ಇಲ್ಲ. ಅಲ್ಲಿ ಒಂದು ಕಡೆ ಪಾಕಿಸ್ತಾನ ಸರ್ಕಾರ ಹಾಗೂ ಅಲ್ಲಿನ ಸೇನೆಯೇ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಆರೋಪ ಇದೆ. ಇದು ಸಾಲದು ಎಂಬಂತೆ ಉಗ್ರರು ಕೂಡ ಪದೇ ಪದೆ ದಾಳಿ ನಡೆಸುತ್ತಿದ್ದಾರೆ. ಹೀಗೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಭಾಗದಲ್ಲಿ ರಾಜಕೀಯ ಪಕ್ಷದ ಸಭೆ ವೇಳೆ ಸೂಸೈಡ್ ಬಾಂಬರ್ ತನ್ನನ್ನೇ ಸ್ಫೋಟಿಸಿಕೊಂಡಿದ್ದ. ತಕ್ಷಣ ಸಮಾವೇಷ ನಡೆಯುತ್ತಿದ್ದ ಜಾಗ ಸ್ಮಶಾನವಾಗಿತ್ತು. 56 ಜನರು ಮೃತಪಟ್ಟು 150ಕ್ಕೂ ಹೆಚ್ಚು ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಪಾಕಿಸ್ತಾನ ಸರ್ಕಾರವನ್ನ ರೊಚ್ಚಿಗೆಬ್ಬಿಸಿದೆ. ಇದೇ ಕಾರಣಕ್ಕೆ ವಿದೇಶಾಂಗ ಸಚಿವ ಬಿಲಾವಲ್ ಬುಟ್ಟೋ ತಾಲಿಬಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಾಳಿ ಮಾಡಿದರೆ ಉಗ್ರರು ಪೀಸ್ ಪೀಸ್!
ಹಾಗೇ ತಮ್ಮ ಮಾತು ಮುಂದುವರಿಸಿ ತಾಲಿಬಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬುಟ್ಟೋ ನಾವು ದಾಳಿ ಮಾಡಿದರೆ ಪರಿಸ್ಥಿತಿ ನೆಟ್ಟಗಿರಲ್ಲ. ಹೀಗಾಗಿ ನೀವೇ ಕ್ರಮ ಕೈಗೊಳ್ಳಿ, ಅದಕ್ಕೆ ಬೇಕಿರುವ ಸಹಾಯ ನಮ್ಮಿಂದ ಸಿಗಲಿದೆ. ಅಕಸ್ಮಾತ್ ಉಗ್ರರ ದಾಳಿ ಪಾಕಿಸ್ತಾನದ ಮೇಲೆ ಇದೇ ರೀತಿ ಮುಂದುವರಿದರೆ ಪರಿಣಾಮ ನೆಟ್ಟಗಿರಲ್ಲ. ನಮ್ಮ ದೇಶದ ಗಡಿಯ ರಕ್ಷಣೆಗಾಗಿ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನ ಮತ್ತೆ ತನ್ನ ನೆರೆಯ ದೇಶ ಅಫ್ಘಾನಿಸ್ತಾನದ ಜೊತೆ ಕಿರಿಕ್‌ಗೆ ಸಿದ್ಧವಾಗಿದೆ.

ಐಎಸ್‌ಐಎಸ್ ಕೈವಾಡ ಗ್ಯಾರಂಟಿ!
ಘಟನೆ ಬಗ್ಗೆ ಮಾಹಿತಿ ನೀಡಿರುವ ತನಿಖಾಧಿಕಾರಿಗಳು, ನಿಷೇಧಿತ ಸಂಘಟನೆ ಐಸಿಸ್ ಕೈವಾಡ ಇರುವುದು ಗೊತ್ತಾಗಿದೆ ಎಂದಿದ್ದರು. ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಹೀಗೆ ಪಾಕಿಸ್ತಾನ ಪೊಲೀಸರು ಆರೋಪವನ್ನ ಮಾಡಿ ಕೆಲವೇ ಗಂಟೆಗಳಲ್ಲಿ ಐಸಿಸ್ ತನ್ನ ಕೈವಾಡ ಒಪ್ಪಿಕೊಂಡಿತ್ತು. ಸೂಸೈಡ್ ದಾಳಿ ಮಾಡಿದ್ದು ತಾನೇ ಅನ್ನೋದನ್ನ ಹೇಳಿತ್ತು. ಸದಾ ಭಯೋತ್ಪಾದಕರನ್ನು ಬೆಳೆಸುತ್ತಾ, ಭಯೋತ್ಪಾದನೆ ಅನ್ನೋ ವಿಷದ ಮರಕ್ಕೆ ನೀರು ಎರೆಯುವ ಪಾಕಿಸ್ತಾನದಲ್ಲಿ ನಡೆದ ಇಂತಹ ಭೀಕರ ಘಟನೆಯು ಜಗತ್ತಿನ ಗಮನ ಸೆಳೆದಿತ್ತು.
ಒಟ್ನಲ್ಲಿ ಪಾಕಿಸ್ತಾನ ತಾನು ಮಾಡಿದ ತಪ್ಪಿಗೆ ತಾನೇ ಶಿಕ್ಷೆ ಅನುಭವಿಸುವ ಸ್ಥಿತಿ ಬಂದಿದೆ. ಇನ್ನು ಮುಂದೆಯಾದರೂ ಬುದ್ಧಿ ಕಲಿತು ಒಳ್ಳೆಯ ದಾರಿಯಲ್ಲಿ ಪಾಕಿಸ್ತಾನ ನಡೆಯಬೇಕು ಅನ್ನೋ ಮಾತು ಕೇಳಿಬರುತ್ತಿದೆ. ಆದ್ರೆ ಸದಾ ಭಾರತದ ಜೊತೆ ಕಿರಿಕ್ ತೆಗೆಯುವ ಪಾಕ್, ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳುತ್ತಾ? ಅಥವಾ ಇದೇ ರೀತಿ ಉಗ್ರರಿಗೆ ಬೆಂಬಲವನ್ನು ನೀಡುತ್ತಾ ಮತ್ತದೇ ಹಾದಿಯಲ್ಲಿ ನಡೆಯುತ್ತಾ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications