ಭಾರತದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾದ ಪಾಕಿಸ್ತಾನ: ಸೇನೆಗೆ ಸಂಪೂರ್ಣ ಅಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್
India Pakistan conflict: ಭಾರತ ಸೇನೆಯು ನಡೆಸಿರುವ ದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ. ಇದೇ ವೇಳೆ, ನಿರ್ದಿಷ್ಠ ಪ್ರದೇಶ ಹಾಗೂ ಸಮಯ ನಿರ್ಧರಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನ ಸರ್ಕಾರ ಅಲ್ಲಿನ ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡಿದೆ.
'ಭಾರತವು ನಡೆಸಿರುವ ದಾಳಿಯಲ್ಲಿ ಪಾಕಿಸ್ತಾನದ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ಎಲ್ಲ ರೀತಿಯ ಹಕ್ಕಿದೆ. ದಾಳಿ ನಡೆಸುವ ಪ್ರದೇಶ ಹಾಗೂ ಸಮಯವನ್ನು ನಿರ್ಧರಿಸಿಕೊಳ್ಳಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದೆ' ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿ ಬುಧವಾರ ತಿಳಿಸಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ನಡೆದಿದೆ. ಈ ಸಭೆಯಲ್ಲಿ ಸಂಪುಟ ಸಚಿವರು, ಮುಖ್ಯಮಂತ್ರಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ವಿಶ್ವಸಂಸ್ಥೆಯ 51 ನೇ ವಿಧಿಯ ಪ್ರಕಾರ, ಯಾವುದೇ ದೇಶವು ಮಾಡುವ ದಾಳಿಯಲ್ಲಿ ಅಮಾಯಕರು ಬಲಿಯಾದರೆ, ಅದಕ್ಕೆ ಪ್ರತ್ಯುತ್ತರವಾಗಿ ದಾಳಿ ನಡೆಸುವ ಹಕ್ಕು ಸಂತ್ರಸ್ತ ರಾಷ್ಟ್ರಗಳಿಗೆ ಇದೆ. ಭಾರತ ಸೇನೆಯು ನಡೆಸಿರುವ ದಾಳಿಯಲ್ಲಿ ಅಮಾಯಕ ಪಾಕಿಸ್ತಾನಿಗಳ ಜೀವಕ್ಕೆ ಹಾನಿಯಾಗಿದೆ. ಇದಕ್ಕೆ ನಾವು ಪ್ರತೀಕಾರ ತೀರಿಸಿಕೊಳ್ಳಲು ಸೇನಾ ಪಡೆಗಳಿಗೆ ಸಂಪೂರ್ಣ ಹಕ್ಕು ನೀಡಿದ್ದೇವೆ. ಈ ನಿಟ್ಟಿನಲ್ಲಿ, ಪಾಕಿಸ್ತಾನದ ಸಶಸ್ತ್ರ ಪಡೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಕಳೆದ ತಿಂಗಳು ಕಾಶ್ಮೀರದ ಪಹೆಲ್ಗಾಮ್ನಲ್ಲಿ ಮೂವರು ಉಗ್ರರು ಭಾರತೀಯರ ಮೇಲೆ ಅಮಾನುಷವಾಗಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಒಟ್ಟು 25 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಉಗ್ರರ ದಾಳಿಯನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಅವರು ಕೊಟ್ಟ ಮಾತಿನಂತೆ ಬುಧವಾರ ಬೆಳಿಗ್ಗಿನ ಜಾವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಕ್ಷಿಪಣಿ ದಾಳಿ ನಡೆಸಲಾಗಿದೆ. ನಿಖರವಾಗಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಒಟ್ಟು ಒಂಬತ್ತು ಸ್ಥಳಗಳಲ್ಲಿ ವೈಮಾನಿಕ ದಾಳಿ ನಡೆಸಿರುವ ಭಾರತೀಯ ಸೇನೆಯ ಸರಿಸೂಮಾರು 70 ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಭಾರತ ಸೇನೆ ನಡೆಸಿದ ದಾಳಿಯಲ್ಲಿ ನಾಗರಿಕರು ಹತರಾಗಿದ್ದಾರೆ ಎಂದು ಆರೋಪಿಸಿದೆ. ಇದೇ ವೇಳೆ, ಪಾಕಿಸ್ತಾನವು ಗಡಿ ನಿಯಮ ಉಲ್ಲಂಘಿಸಿ ದಾಳಿ ನಡೆಸಿದೆ ಎಂದು ಭಾರತೀಯ ಸೇನೆಯು ತಿಳಿಸಿದೆ. ಪಾಕ್ ನಡೆಸಿರುವ ದಾಳಿಯನ್ನು 15 ನಾಗರಿಕರು ಬಲಿಯಾಗಿದ್ದಾರೆ ಎಂದು ಹೇಳಿದೆ.












Click it and Unblock the Notifications