ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್
ಇಸ್ಲಾಮಾಬಾದ್, ಡಿಸೆಂಬರ್ 7: ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಮನಸ್ತಾಪ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳು ಕಂಡುಬರುತ್ತಿವೆ.
ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ ನೆರವನ್ನು ಕಡಿತಗೊಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಲ್ಡ್ ಟ್ರಂಪ್, ಇಮ್ರಾನ್ ಖಾನ್ ಅವರೊಂದಿಗೆ ಟ್ವಿಟ್ಟರ್‌ನಲ್ಲಿ ವಾಗ್ವಾದ ನಡೆಸಿದ್ದರು.
ಅಲ್ಲದೆ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಕಾಪಾಡಲು ಪಾಕಿಸ್ತಾನ ಮುಂದಾಗಬೇಕು ಎಂದು ಅಮೆರಿಕ ಒತ್ತಾಯಿಸಿತ್ತು.

ಅಮೆರಿಕದಿಂದ ಒತ್ತಡ ಹೆಚ್ಚುತ್ತಿರುವಂತೆಯೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿರುಗೇಟು ನೀಡಿದ್ದಾರೆ. ವಾಷಿಂಗ್ಟನ್ ಪೋಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ಅಮೆರಿಕದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ಮುಖಂಡರ ಬೆಳವಣಿಗೆಗೆ ಪಾಕಿಸ್ತಾನವೇ ಕಾರಣ ಎಂದ ಟ್ರಂಪ್ ಆರೋಪಿಸಿದ್ದರು. ಆದರೆ, ಪಾಕಿಸ್ತಾನದಲ್ಲಿ ಯಾವ ತಾಲಿಬಾನಿಗಳೂ ಇಲ್ಲ. ನಮ್ಮ ನೆಲದಲ್ಲಿ 2.7 ಮಿಲಿಯನ್ ಆಫ್ಘನ್ ನಿರಾಶ್ರಿತರಿದ್ದಾರೆ. ಅವರಿಗಾಗಿ ಬೃಹತ್ ನಿರಾಶ್ರಿತರ ಶಿಬಿರ ತೆರೆಯಲಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿಯಲ್ಲಿ ಭಾರಿ ಭದ್ರತೆ, ಕಣ್ಗಾವಲಿದೆ. ಅಮರಿಕದ ಉಪಗ್ರಹಗಳು, ಡ್ರೋಣ್‌ಗಳಿವೆ. ಈ ಜನರು ಗಡಿ ದಾಟುವುದುನ್ನು ಅದರಲ್ಲಿ ನೋಡಬಹುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ತಾಲಿಬಾನಿಗಳನ್ನು ಪಾಕಿಸ್ತಾನ ಪೋಷಿಸುತ್ತಿಲ್ಲ. 9/11ರ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವೇ ಇಲ್ಲ. ಅದರಲ್ಲಿ ಪಾಕಿಸ್ತಾನಿಗಳಾರೂ ಭಾಗಿಯಾಗಿಲ್ಲ. ಅಮೆರಿಕದ ಜೊತೆಗೂಡಿ ಜಿಹಾದಿಗಳ ವಿರುದ್ಧ ಕಾರ್ಯಾಚರಣೆ ಮಾಡಿದ್ದೇವೆ. ಅದಕ್ಕಾಗಿ ಭಾರಿ ಬೆಲೆ ತೆರಬೇಕಿದೆ. ಇಲ್ಲಿಗೆ ಹೂಡಿಕೆದಾರರು ಬರುವುದಿಲ್ಲ. ಕ್ರೀಡಾ ತಂಡಗಳೂ ಕಾಲಿಡುವುದಿಲ್ಲ. ಪಾಕಿಸ್ತಾನವು ಜಗತ್ತಿನಲ್ಲಿ ಅತಿ ಅಪಾಯಕಾರಿ ದೇಶ ಎನಿಸಿಕೊಂಡು ಬಿಟ್ಟಿದೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ಸೇನಾ ಕಾರ್ಯಾಚರಣೆ ಅಗತ್ಯವಿಲ್ಲ ಎಂದು ಹಲವು ವರ್ಷಗಳಿಂದ ಹೇಳಿದ್ದೆ. ಆಗ ನನ್ನನ್ನು 'ತಾಲಿಬಾನ್ ಖಾನ್' ಎಂದು ಕರೆಯಲಾಯಿತು. ನೀವು ಅಮೆರಿಕದ ನೀತಿಗಳನ್ನು ಒಪ್ಪದೆ ಇದ್ದರೆ, ನೀವು ಅಮೆರಿಕ ವಿರೋಧಿ.
ಯಾರದ್ದೋ ಯುದ್ಧಕ್ಕಾಗಿ ಹಣ ಕೊಟ್ಟು ಬಾಡಿಗೆ ಪಿಸ್ತೂಲುದಾರನಾಗಿ ಪಾಕಿಸ್ತಾನವನ್ನು ಬಳಸಿಕೊಳ್ಳುವ ಸಂಬಂಧ ನಮಗೆ ಬೇಡ. ಈ ಪರಿಸ್ಥಿತಿಯಲ್ಲಿ ಮತ್ತೆ ನಾವು ಸಿಲುಕಲು ಬಯಸುವುದಿಲ್ಲ. ಇದು ಜನರ ಜೀವದ ಬೆಲೆ ತೆರವುದು ಮಾತ್ರವಲ್ಲ, ನಮ್ಮ ಬುಡಕಟ್ಟು ಪ್ರದೇಶಗಳ ನಾಶವಾಗುತ್ತದೆ ಜೊತೆಗೆ ನಮ್ಮ ಘನತೆಯೂ ಮಣ್ಣುಪಾಲಾಗುತ್ತದೆ. ನಮಗೆ ಅಮೆರಿಕದೊಂದಿಗೆ ಸೂಕ್ತವಾದ ಸಂಬಂಧ ಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.












Click it and Unblock the Notifications