ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಭಾರತದ ಗೀಳು!
ಇಸ್ಲಮಾಬಾದ್, ಏಪ್ರಿಲ್ 1: ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷ ನಾಯಕ ಶೆಹಬಾಜ್ ಷರೀಫ್ ವಾಗ್ದಾಳಿ ಮುಂದುವರಿಸಿದರು. "ಭಾರತದ ವಿದೇಶಾಂಗ ನೀತಿಯ ಬಗ್ಗೆ ಇಮ್ರಾನ್ ಖಾನ್ ತುಂಬಾ ಗೀಳನ್ನು ಹೊಂದಿದ್ದಾರೆ" ಎಂದು ಶೆಹಬಾಜ್ ಷರೀಫ್ ದೂಷಿಸಿದ್ದಾರೆ.
ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, "ಪಾಕಿಸ್ತಾನಕ್ಕೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೇಗೆ ರೂಪಿಸಿದರು ಎಂದು ಒತ್ತಿ ಹೇಳಿದರು. "ಭಾರತ ವಿರೋಧಿ ಅಲ್ಲ, ಯುಎಸ್ ವಿರೋಧಿ ಅಲ್ಲ, ಯುರೋಪ್ ವಿರೋಧಿ ಅಲ್ಲ, ಸ್ವತಂತ್ರ ನೀತಿಯನ್ನು ಹೊಂದಿರಬೇಕು" ಎಂದು ಹೇಳಿದರು.
ಶುಕ್ರವಾರ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಸಹೋದರರೂ ಆಗಿರುವ ಶೆಹಬಾಜ್ ಷರೀಫ್, ಇಮ್ರಾನ್ ಖಾನ್ ವಿರುದ್ಧ ಕಿಡಿ ಕಾರಿದರು. "ಈಗಾಗಲೇ ಅವಿಶ್ವಾಸವನ್ನು ಎದುರಿಸುತ್ತಿರುವ ಇಮ್ರಾನ್ ಖಾನ್, ಒಣಹುಲ್ಲನ್ನು ಅವಲಂಬಿಸಿದ ಮುಳುಗುತ್ತಿರುವ ವ್ಯಕ್ತಿಯಂತೆ. ಮತಗಳಲ್ಲಿ ಅವರನ್ನು ನಾವು ಸೋಲಿಸುತ್ತೇವೆ, ಭಾನುವಾರ ಇಡೀ ಜಗತ್ತು ಅದನ್ನು ನೋಡುತ್ತದೆ," ಎಂದರು.

ಇಮ್ರಾನ್ ಖಾನ್ ವಿರುದ್ಧ ತಿರುಗಿ ಬಿದ್ದ ಮಿತ್ರಪಕ್ಷ:
ಪಾಕಿಸ್ತಾನ ಸಂಸತ್ತಿನಲ್ಲಿ ಪ್ರಧಾನಮಂತ್ರಿ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಆಡಳಿತಾರೂಢ ಒಕ್ಕೂಟವೂ ಸೇರಿಕೊಂಡಿದ್ದು, ಇಮ್ರಾನ್ ಖಾನ್ ಸರ್ಕಾರ ಬಹುಮತ ಕಳೆದುಕೊಂಡಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾದ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ್ (MQM-P), ಏಳು ಸದಸ್ಯರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾಗಿದೆ.
ಬಹುಮತ ಕಳೆದುಕೊಂಡ ಇಮ್ರಾನ್ ಖಾನ್:
ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ನಡೆಸುತ್ತಿರುವ ಪ್ರಯತ್ನವನ್ನು ವಿಫಲಗೊಳಿಸಲು 342ರ ಕೆಳಮನೆಯಲ್ಲಿ 172 ಮತಗಳ ಅಗತ್ಯವಿದೆ. ಆದರೆ, ವಿರೋಧ ಪಕ್ಷಕ್ಕೆ 175 ಶಾಸಕರ ಬೆಂಬಲವಿದ್ದು, ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಜಮಿಯತ್ ಉಲೇಮಾ-ಇ-ಇಸ್ಲಾಮಾ ಫಝಲ್ (ಜೆಯುಐ-ಎಫ್) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಹೇಳಿದ್ದಾರೆ.
2018ರಲ್ಲಿ ಅಧಿಕಾರಕ್ಕೆ ಬಂದಿದ್ದ ಇಮ್ರಾನ್ ಖಾನ್:
ಕಳೆದ 2018ರಲ್ಲಿ ಇಮ್ರಾನ್ ಖಾನ್ "ನಯಾ ಪಾಕಿಸ್ತಾನ" ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಆಡಳಿತ ನಿರ್ವಹಣೆಯಲ್ಲಿ ಅವರು ವಿಫಲವಾದರು. ಪ್ರತಿಪಕ್ಷಗಳು ಅವರ ಸರ್ಕಾರದ ವಿರುದ್ಧ ಸಿಡಿದೆದ್ದವು.
69 ವರ್ಷದ ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾರೆ. 155 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧಿಕಾರದಲ್ಲಿ ಉಳಿಯಲು ಕನಿಷ್ಠ 172 ಶಾಸಕರ ಅಗತ್ಯವಿದೆ. ಈ ಹಂತದಲ್ಲಿ ಯಾವುದೇ ಪಾಲುದಾರರು ಪಕ್ಷವನ್ನು ಬದಲಾಯಿಸಲು ನಿರ್ಧರಿಸಿದರೆ ಅವರನ್ನು ತೆಗೆದುಹಾಕಬಹುದು.












Click it and Unblock the Notifications